ಮನೆ ರಾಜ್ಯ ಕಬಿನಿ ಜಲಾಶಯದಿಂದ ನೀರು ಬಿಡುಗಡೆ: 50 ಗ್ರಾಮಗಳಿಗೆ ಸಂಚಾರ ಸ್ಥಗಿತ, ಪ್ರವಾಹ ಭೀತಿ

ಕಬಿನಿ ಜಲಾಶಯದಿಂದ ನೀರು ಬಿಡುಗಡೆ: 50 ಗ್ರಾಮಗಳಿಗೆ ಸಂಚಾರ ಸ್ಥಗಿತ, ಪ್ರವಾಹ ಭೀತಿ

0

ಮೈಸೂರು(Mysuru): ಕೇರಳದ ವಯನಾಡು ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಕಬಿನಿ ಜಲಾಶಯದ ಒಳಹರಿವು ಜಾಸ್ತಿಯಾಗಿದ್ದು, ಜಲಾಶಯ ತುಂಬಲು ಇನ್ನು 2 ಅಡಿಯಷ್ಟೇ ಬಾಕಿ ಇದೆ.

ಈ ಹಿನ್ನೆಲೆಯಲ್ಲಿ 30 ಸಾವಿರ ಕ್ಯೂಸೆಕ್​ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರಿಂದ ಜಲಾಶಯದ ಮುಂಭಾಗದಲ್ಲಿರುವ ಸಂಪರ್ಕ ಸೇತುವೆ ಮುಳುಗಡೆಯಾಗಿ ಬಿದರಹಳ್ಳಿ ಹಾಗೂ ಎನ್. ಬೇಗೂರು ಗ್ರಾಮ ಪಂಚಾಯತ್​ಗೆ ಸೇರಿದ 50ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಚಾರ ಸ್ಥಗಿತಗೊಂಡಿದೆ.

ನೀರಾವರಿ ಇಲಾಖೆಯ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದು, ಬಿದರಹಳ್ಳಿ ಹಾಗೂ ಎನ್,ಬೇಗೂರು ಗ್ರಾಪಂ ವ್ಯಾಪ್ತಿಯ ಜನರಿಗೆ ಕಬಿನಿ ಜಲಾಶಯದ ಅಣೆಕಟ್ಟು ಮೇಲ್ಭಾಗದ ರಸ್ತೆಯಲ್ಲಿ ಸಂಚರಿಸುವಂತೆ ಬದಲಿ ವ್ಯವಸ್ಥೆ ಮಾಡಲಾಗಿದೆ. ಕಬಿನಿ ಜಲಾಶಯದಿಂದ ಹೆಚ್ಚು ನೀರನ್ನು ಯಾವುದೇ ಕ್ಷಣದಲ್ಲಿ ನದಿಗೆ ಬಿಡುವ ಸಾಧ್ಯತೆಯಿದೆ. ಇದರಿಂದ ಪ್ರವಾಸಿಗರಿಗೆ ಜಲಾಶಯ ವೀಕ್ಷಣೆಗೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.

16 ಕಾಲು ಮಂಟಪ ಮುಳುಗಡೆ: ಕಬಿನಿ ಜಲಾಶಯದಿಂದ ಕಪಿಲ ನದಿಗೆ ಹೆಚ್ಚು ನೀರನ್ನು ಬಿಡುಗಡೆ ಮಾಡುತ್ತಿರುವುದರಿಂದ ನಂಜನಗೂಡು ಬಳಿಯ ಶ್ರೀಕಂಠೇಶ್ವರ ದೇವಸ್ಥಾನದ ಸ್ನಾನ ಘಟ್ಟದ ಸಮೀಪದ ಐತಿಹಾಸಿಕ 16 ಕಾಲು ಮಂಟಪ ಮುಳುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ನೀರನ್ನು ನದಿಗೆ ಬಿಡುವ ಸಾಧ್ಯತೆ ಇರುವುದರಿಂದ ನಂಜನಗೂಡು ಪಟ್ಟಣದ ಪಕ್ಕದಲ್ಲಿರುವ ತೋಪಿನ ಬೀದಿ, ಕುರುಬರ ಕೇರಿ, ಗೌರಿಗಟ್ಟ, ಹಳ್ಳದಕೇರಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ನಂಜನಗೂಡು ತಾಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಕಳೆದ ವರ್ಷ ಇದೇ ಪ್ರದೇಶದಲ್ಲಿ ಪ್ರವಾಹ ಉಂಟಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಜನರನ್ನು ಸ್ಥಳಾಂತರಿಸಲಾಗಿತ್ತು.

ಪ್ರವಾಹ ಭೀತಿ: ಕೆಆರ್​ಎಸ್ ಹಾಗೂ ಕಬಿನಿ ಜಲಾಶಯದಿಂದ ನೀರು ಬಿಟ್ಟ ಹಿನ್ನೆಲೆಯಲ್ಲಿ, ನರಸೀಪುರ ತಾಲೂಕಿನ ಕೆಲ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ತಿ‌.ನರಸೀಪುರ ತಾಲೂಕಿನ ತ್ರಿವೇಣಿ ಸಂಗಮ, ಕಾವೇರಿ, ಕಪಿಲಾ ನದಿಗಳು ಮೈದುಂಬಿ ಹರಿಯುತ್ತಿದ್ದು, ನದಿ ವೀಕ್ಷಣೆಗೆ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಶ್ರೀ ಗುಂಜಾನರಸಿಂಹಸ್ವಾಮಿ ದೇವಸ್ಥಾನದ ಬಳಿ ಪ್ರವಾಸಿಗರು ನದಿಗೆ ಇಳಿಯದಂತೆ ಪೊಲೀಸ್ ಬ್ಯಾರಿಕೇಡ್ ಅಳವಡಿಸಲಾಗಿದೆ. ಮುಂಜಾಗ್ರತ ಕ್ರಮವಾಗಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ತಲಕಾಡಿನ ಹೆಮ್ಮಿಗೆ ಸೇತುವೆ ಮುಳುಗಡೆಗೆ ಕೆಲವೇ ಅಡಿಯಷ್ಟೇ ಬಾಕಿ ಇದೆ.