ವಯನಾಡು: ಕೇರಳದ ವಯನಾಡು ಜಿಲ್ಲೆಯ ಮೆಪ್ಪಾಡಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಈವರೆಗೆ 49 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ವಿವಿಧ ಆಸ್ಪತ್ರೆಗಳ ಶವಾಗಾರಗಳಲ್ಲಿ ಇಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೂ ಹಲವು ಮಂದಿ ಮಣ್ಣಿನಡಿ ಸಿಲುಕಿರುವ ಸಾಧ್ಯತೆ ಇದ್ದು, ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದೂ ಹೇಳಿದ್ದಾರೆ.
ಮೃತರ ಪೈಕಿ ಒಂದು ಮಗು ಸೇರಿ 4 ಮಂದಿ ಜಿಲ್ಲೆಯ ಚೂರಲ್ಮಲಾ ಪಟ್ಟಣದಲ್ಲಿ ಮೃತಪಟ್ಟಿದ್ದಾರೆ. ತೊಂಡೇರ್ನಾಡು ಹಳ್ಳಿಯಲ್ಲಿ ನೇಪಾಳ ಕುಟುಂಬದ ಒಂದು ವರ್ಷದ ಮಗು ಮೃತಪಟ್ಟಿದೆ.
ಪೊಥುಕಲ್ ಹಳ್ಳಿಯ ಬಳಿ ನದಿ ತೀರದಲ್ಲಿ 5 ವರ್ಷದ ಮಗು ಸೇರಿ ಮೂವರ ಮೃತದೇಹಗಳನ್ನು ಹೊರತೆಗೆಯಲಾಗಿದೆ.
ನೂರಾರು ಮಂದಿ ಸಿಲುಕಿರುವ ಶಂಕೆ ಇದ್ದು, ಅಧಿಕಾರಿಗಳು ಇದನ್ನು ಖಚಿತಪಡಿಸಿಲ್ಲ.
ಗಾಯಗೊಂಡ 70 ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ರಾಜ್ಯ ಕಂದಾಯ ಸಚಿವ ಕೆ. ರಾಜನ್ ಹೇಳಿದ್ದಾರೆ.
ಇತ್ತ, ಬೆಂಗಳೂರಿನಿಂದ 30 ಸದಸ್ಯರ ಎನ್‌ಡಿಆರ್‌ಎಫ್ ತಂಡವು ರಕ್ಷಣಾ ಕಾರ್ಯಾಚರಣಗೆ ಸಹಾಯ ಮಾಡಲು ವಯನಾಡಿಗೆ ಧಾವಿಸುತ್ತಿದೆ. ಅರಕ್ಕೋಣಂನ ಎನ್‌ಡಿಆರ್‌ಎಫ್ ತಂಡ ಈಗಾಗಲೇ ವಯನಾಡಿನಲ್ಲಿ ಬೀಡುಬಿಟ್ಟಿದೆ ಎನ್‌ಡಿಆರ್‌ಎಫ್ ಕಮಾಂಡೆಂಟ್ ಅಖಿಲೇಶ್ ಕುಮಾರ ಸಹ ತೆರಳುತ್ತಿದ್ದಾರೆ.














