ನವದೆಹಲಿ: ವಯನಾಡು ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಈಗಾಗಲೇ ಆರಂಭವಾಗಿದ್ದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಕೇರಳದ ವಯನಾಡಿನಲ್ಲಿ 48,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ.
ಸಹೋದರ ರಾಹುಲ್ ಗಾಂಧಿಯಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ ಸ್ಪರ್ಧೆ ಮಾಡಿದರೆ ಎಲ್‌ಡಿಎಫ್ ಅಭ್ಯರ್ಥಿಯಾಗಿ ಸತ್ಯನ್ ಮೊಕೇರಿ ಮತ್ತು ಎನ್ಡಿಎ ಅಭ್ಯರ್ಥಿಯಾಗಿ ನವ್ಯಾ ಹರಿದಾಸ್ ಸ್ಪರ್ಧೆ ನಡೆಸಿದ್ದರು ಅದರಂತೆ ಇಂದು ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿದ್ದು ಆರಂಭಿಕ ಮತ ಎಣಿಕೆಯಲ್ಲಿ ಪ್ರಿಯಾಂಕಾ ಗಾಂಧಿ ಅವರು 51,930 ಮತಗಳನ್ನು ಗಳಿಸಿ ಮುಂಚೂಣಿಯಲ್ಲಿದ್ದರೆ. ಸಿಪಿಐನ ಹಿರಿಯ ನಾಯಕ ಸತ್ಯನ್ ಮೊಕೇರಿ 14,629 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿ ಮುನ್ನಡೆ ಸಾಧಿಸುತ್ತಿದ್ದಾರೆ ಹಾಗೆಯೇ ಬಿಜೆಪಿಯ ನವ್ಯಾ ಹರಿದಾಸ್ 7,613 ಮತಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಸದ್ಯದ ಲೆಕ್ಕಾಚಾರ ನೋಡುವುದಾದರೆ ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ ಅವರ ಕೈ ಹಿಡಿಯುವ ಲಕ್ಷಣ ಕಂಡು ಬಂದಿದ್ದು ಆದರೆ ಮತ ಎಣಿಕೆ ಪ್ರಕ್ರಿಯೆ ಮುಂದುವರೆದಿರುವುದರಿಂದ ಮಧ್ಯಾಹ್ನದ ವೇಳೆಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ.














