ಮನೆ ರಾಜ್ಯ ವಯನಾಡ್ ಭೀಕರ ಭೂಕುಸಿತ: ಚಾಮರಾಜನಗರದ ನಾಲ್ವರು ಸಾವು

ವಯನಾಡ್ ಭೀಕರ ಭೂಕುಸಿತ: ಚಾಮರಾಜನಗರದ ನಾಲ್ವರು ಸಾವು

0

ಚಾಮರಾಜನಗರ/ಮಂಡ್ಯ: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಚಾಮರಾಜನಗರದ ನಾಲ್ವರು ಮೃತಪಟ್ಟಿದ್ದು, ಕೆ.ಆರ್.ಪೇಟೆ ಮೂಲದ ಮಹಿಳೆಯ ಮಗು ಸೇರಿ ಇಬ್ಬರು ನಾಪತ್ತೆಯಾಗಿದ್ದು, ಕುಟುಂಬದ ಮೂವರು ಆಸ್ಪತ್ರೆಯಲ್ಲಿದ್ದಾರೆ.

Join Our Whatsapp Group

ವಯನಾಡಿನ ಮೇಪ್ಪಾಡಿಯಲ್ಲಿ ನೆಲೆಸಿದ್ದ ಪುಟ್ಟಸಿದ್ದಶೆಟ್ಟಿ (62) ಹಾಗೂ (55), ಚಾಮರಾಜನಗರ ತಾಲೂಕಿನ ಇರಸವಾಡಿ ಮೂಲದ, ವಯ ನಾಡು ಜಿಲ್ಲೆಯಲ್ಲಿ ವಾಸವಿದ್ದ ರಾಜೇಂದ್ರ (50), ರತ್ನಮ್ಮ (45) ಮೃತ ದುರ್ದೈವಿಗಳು. ಈ ಪೈಕಿ ರಾಜೇಂದ್ರ, ರತ್ನಮ್ಮ ಮೃತ ದೇಹ ಪತ್ತೆಯಾಗಿಲ್ಲ. ಘಟನೆ ನಡೆದ ಸ್ಥಳಕ್ಕೆ ಗುಂಡ್ಲುಪೇಟೆ ತಹಶೀಲ್ದಾರ್ ರಮೇಶ್ ಬಾಬು ತೆರಳಿದ್ದು, ಈ ವಿಷಯವನ್ನು ಖಚಿತಪಡಿಸಿದ್ದಾರೆ.

ಪುಟ್ಟಸಿದ್ದಶೆಟ್ಟಿ ಹಾಗೂ ಚಾಮರಾಜನಗರದವರಾಗಿದ್ದು ಅನೇಕ ವರ್ಷಗಳಿಂದ ಮೇಪ್ಪಾಡಿ ಪ್ರದೇಶದಲ್ಲಿ ನೆಲೆಸಿದ್ದರೆಂದು ತಿಳಿದುಬಂದಿದೆ. ರಾಜೇಂದ್ರ ಮತ್ತು ರತ್ನಮ್ಮ ಕೆಲ ವರ್ಷಗಳ ಹಿಂದೆ ನಾಗವಳ್ಳಿಯಲ್ಲಿ ಪೆಟ್ಟಿಗೆ ಅಂಗಡಿ ಇಟ್ಟುಕೊಂಡಿದ್ದು ಕೆಲಸಕ್ಕಾಗಿ ಕೇರಳಕ್ಕೆ ತೆರಳಿದ್ದರು. ಚಾಮರಾಜನಗರದ ಉಪ್ಪಾರ ಬೀದಿಯ ನಿವಾಸಿಗಳಾಗಿದ್ದು ಚೂಲರ್ ಮಲಾ ದಲ್ಲಿ ಉದ್ಯೋಗಕ್ಕೆಂದು ವಲಸೆ ಹೋಗಿದ್ದ ಮಹದೇವಸ್ವಾಮಿ ಮತ್ತು ಸುಜಾತಾ ದಂಪತಿಯನ್ನು NDRF ತಂಡ ರಕ್ಷಿಸಿದೆ.

ನಂಜನಗೂಡು ಮೂಲದ ಕುಟುಂಬದ ಇಬ್ಬರು ನಾಪತ್ತೆ

ಕರ್ನಾಟಕ ಮೂಲದ ಲೀಲಾವತಿ(55) ಮತ್ತು 2 ವರ್ಷ 6 ತಿಂಗಳಿನ ಮಗು ನಿಹಾಲ್ ಭೀಕರ ಭೂಕುಸಿತದಲ್ಲಿ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಕೆ.ಆರ್.ಪೇಟೆ ತಾಲೂಕಿನ ಕಸಬಾ ಹೋಬಳಿಯ ಕತ್ತರಘಟ್ಟ ಗ್ರಾಮದ ಜಗದೀಶ್ ಮತ್ತು ಕುಳ್ಳಮ್ಮ ರವರ ಪುತ್ರಿ ಝಾನ್ಸಿರಾಣಿ ಅವರನ್ನ ಮೂಲತಃ ನಂಜನಗೂಡು ತಾಲೂಕಿನ ಸರಗೂರು ಮೂಲದ ಸದ್ಯ ವಯವನಾಡಿನ ಮುಂಡಕಾಯಿ ಗ್ರಾಮದ ಅನಿಲ್ ಕುಮಾರ್ ರವರಿಗೆ 2020 ರಲ್ಲಿ ವಿವಾಹ ಮಾಡಕೊಡಲಾಗಿತ್ತು. ಮುಂಡಕಾಯಿ ಗ್ರಾಮದಲ್ಲಿ ತಡರಾತ್ರಿ ಸಂಭವಿಸಿದ ಘೋರ ದುರಂತದಲ್ಲಿ ಸಿಲುಕಿ ಝಾನ್ಸಿರಾಣಿ, ಪತಿ ಅನಿಲ್ ಕುಮಾರ್ ಹಾಗೂ ಮಾವ ದೇವರಾಜು ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ, ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೇರಳದ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಝಾನ್ಸಿರಾಣಿ ಅವರ ಮಗು ನಿಹಾಲ್ ಮತ್ತು ಅತ್ತೆ ಲೀಲಾವತಿ(55) ಭೂಕುಸಿತದ ಬಳಿಕ ನಾಪತ್ತೆಯಾಗಿದ್ದಾರೆ.