ಮೈಸೂರು(Mysuru): ಅಪ್ಪು ಅವರ ಅಗಲಿಕೆಯ ನೋವನ್ನು ಮಾಗಿಸುವ ಕೆಲಸವಾಗಿ ಈ ಸೇವಾ ಕಾರ್ಯದಲ್ಲಿ ತೊಡಗಿದ್ದೇನೆ. ಈ ಮೂಲಕ, ಜನಪರ ಕಾರ್ಯ ಮಾಡಿದ ಅಪ್ಪುಗೆ ಧನ್ಯವಾದ ಅರ್ಪಿಸುತ್ತಿದ್ದೇನೆ. ಆ ವ್ಯಕ್ತಿತ್ವದ ಮುಂದೆ ನಾವೆಲ್ಲರೂ ಸಣ್ಣವರು ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ತಿಳಿಸಿದರು.
ಖ್ಯಾತ ಚಲನಚಿತ್ರ ನಟ ದಿವಂಗತ ಪುನೀತ್ ರಾಜ್‍ಕುಮಾರ್ ಸ್ಮರಣೆಯಲ್ಲಿ ‘ಅಪ್ಪು ಎಕ್ಸ್‌ಪ್ರೆಸ್’ ಆಂಬ್ಯುಲೆನ್ಸ್ ಅನ್ನು ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ನಗರದ ಮಂಡಿ ಮೊಹಲ್ಲಾದ ಸಿಎಸ್ಐ ಹೋಲ್ಡ್ಸ್‌ವರ್ತ್ ಸ್ಮಾರಕ (ಮಿಷನ್) ಆಸ್ಪತ್ರೆಗೆ ಶನಿವಾರ ಕೊಡುಗೆ ನೀಡಿದ ಬಳಿಕ ಅವರು ಮಾತನಾಡಿದರು.
ನನ್ನ ಪ್ರಕಾಶ್ ರಾಜ್ ಪ್ರತಿಷ್ಠಾನದಿಂದ ಅಪ್ಪು ಎಕ್ಸ್‌ಪ್ರೆಸ್’ ಹೆಸರಿನ ಆಂಬ್ಯುಲೆನ್ಸ್‌ಗಳನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೂ ಒಂದು ವರ್ಷದೊಳಗೆ ನೀಡುವ ಯೋಜನೆ ಇದೆ. ಇದಕ್ಕಾಗಿ ಕೈಜೋಡಿಸುವ ಸ್ನೇಹಿತರಿದ್ದಾರೆ. ಯಾರೂ ಕೊಡದಿದ್ದರೂ ನಾನು ದುಡಿಯುವ ಹಣದಲ್ಲೇ ಈ ಸತ್ಕಾರ್ಯವನ್ನು ಮಾಡುತ್ತೇನೆ ಎಂದು ಹೇಳಿದರು.
ಈ ಆಸ್ಪತ್ರೆಗೆ ಮುಂದಿನ ದಿನಗಳಲ್ಲಿ ಬ್ಲಡ್ ಬ್ಯಾಂಕ್ ಕೂಡ ಸ್ಥಾಪಿಸಿಕೊಡಲಾಗುವುದು. ಉದ್ಘಾಟನೆ ಕಾರ್ಯಕ್ರಮದಲ್ಲಿ ರಕ್ತದಾನವನ್ನೂ ಮಾಡುತ್ತೇನೆ ಎಂದು ತಿಳಿಸಿದರು.
ಬಾಲ್ಯದಿಂದಲೂ ನೋಡಿದ ಹುಡುಗ ಅಪ್ಪು. ಸಮಾಜಮುಖಿಯಾಗಿ ಬೆಳೆದ ವ್ಯಕ್ತಿ. ಆ ಎತ್ತರಕ್ಕೆ ಬೆಳೆದ ವ್ಯಕ್ತಿಯಿಂದ ಇನ್ನೊಂದಷ್ಟು ಕೆಲಸಗಳು ಆಗಬೇಕಾಗಿತ್ತು. ಆ ಜನಪರ ವ್ಯಕ್ತಿತ್ವವನ್ನು ಅನುಕರಿಸುವ ಭಾಗವಾಗಿ ಪ್ರತಿಷ್ಠಾನದಿಂದ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಕೋವಿಡ್ ಸಂಕಷ್ಟದ ಸಮಯದಲ್ಲಿ ನಾವು ಸೇವಾ ಕಾರ್ಯ ಮಾಡುತ್ತಿದ್ದೆವು. ಅದನ್ನು ಗಮನಿಸಿ ₹ 2 ಲಕ್ಷವನ್ನು ನಮ್ಮ ಪ್ರತಿಷ್ಠಾನಕ್ಕೆ ಕೊಟ್ಟಿದ್ದರು. ಅವರು ಅಗಲಿರುವ ಈ ಸಂದರ್ಭದಲ್ಲಿ ಅವರ ಇಂಗಿತ ಏನಿತ್ತು ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅವರು ಇದ್ದಿದ್ದರೆ ಮಾಡಬಹುದಾಗಿದ್ದ ಕೆಲಸಗಳನ್ನು ಮಾಡುವ ಮೂಲಕ ಅವರನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.