ರಾಮನಗರ: ಕುಣಿಗಲ್ ಮತ್ತು ಮಾಗಡಿಗೆ ನೀರು ತರಬೇಕು ಅಂತ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಕಮಿಟ್ಮೆಂಟ್ ಇದೆ. ಆದರೆ ನೀರನ್ನ ರಾಮನಗರ, ಕನಕಪುರಕ್ಕೆ ತೆಗೆದುಕೊಂಡು ಹೋಗುತ್ತಾರೆ ಅಂತ ಅಪಪ್ರಚಾರ ಆಗುತ್ತಿದೆ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ಅಸಮಾಧಾನ ಹೊರಹಾಕಿದ್ದಾರೆ.
ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಸಕರು, “ನಾವು ನೀರಿನ ಹಕ್ಕನ್ನು ಕೇಳುತ್ತಿದ್ದೇವೆ. ಯಾರ ಹಕ್ಕನ್ನೂ ಕಿತ್ತುಕೊಳ್ಳುತ್ತಿಲ್ಲ. ನಮಗೆ ಅಲೋಕೇಷನ್ ಆಗಿರುವ 0.6 ಟಿಎಂಸಿ ನೀರನ್ನು ತರಲು ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ಲಿಂಕ್ ಯೋಜನೆ ಮಾಡಲಾಗಿದೆ. ಆದರೆ ಈ ಬಗ್ಗೆ ರಾಜಕೀಯ ಪ್ರೇರಿತವಾಗಿ ಅಪಪ್ರಚಾರ ನಡೆಯುತ್ತಿದೆ” ಎಂದು ತಿಳಿಸಿದರು.
ಹೇಮಾವತಿ ಕೆನಾಲ್ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಕೆಲವರು, ಈ ಯೋಜನೆಯಿಂದ ರಾಮನಗರ, ಕನಕಪುರ ಕಡೆಗೆ ಮಾತ್ರ ನೀರು ಹರಿಯಲಿದೆ ಎಂದು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಬಾಲಕೃಷ್ಣ ಹೇಳುವಂತೆ, ಈ ಯೋಜನೆ ಕೇವಲ ಕುಣಿಗಲ್ ಮತ್ತು ಮಾಗಡಿಗೆ ನೀರು ತರಲು ವಿನ್ಯಾಸಗೊಂಡಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್ ಅವರೂ ಈ ನಿಟ್ಟಿನಲ್ಲಿ ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.
ಶಾಸಕರ ಪ್ರಕಾರ, “ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗಲೇ ಡಿಕೆ ಶಿವಕುಮಾರ್ ಈ ಯೋಜನೆಗೆ ಅನುಮತಿ ತಂದಿದ್ದರು. ನಂತರ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಈ ಯೋಜನೆಯನ್ನು ತಡೆಹಿಡಿದಿತ್ತು. ಆದರೆ ಇದೀಗ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಯೋಜನೆಗೆ ಚಾಲನೆ ನೀಡಲಾಗಿದೆ.”
ಅವರು ಮುಂದಾಗಿ “ಪ್ರತಿಭಟನೆಯ ಹಕ್ಕು ಎಲ್ಲರಿಗೂ ಇದೆ. ಆದರೆ ನಾವು ಎಲ್ಲರೂ ಅಣ್ಣ-ತಮ್ಮಂದಿರು. ನಮ್ಮ ನೀರಿನ ಹಕ್ಕಿಗೆ ಬೆಂಬಲ ಕೊಡಬೇಕಾಗಿದೆ. ತುಮಕೂರಿನ ಹಾಲು ಬೆಂಗಳೂರು, ಕುದೂರು ಭಾಗದಲ್ಲಿ ಮಾರಾಟ ಆಗುತ್ತೆ. ಅದನ್ನ ಮಾರಾಟ ಮಾಡಬೇಡಿ ಅಂತ ನಾವು ನಿಲ್ಲಿಸಲು ಆಗುತ್ತಾ? ಅದನ್ನ ನಿಲ್ಲಿಸಿದ್ರೆ ಆ ಭಾಗದ ರೈತರಿಗೆ ತೊಂದರೆ ಆಗಲ್ವಾ? ನಾವೇನು ಅವರ ಹಕ್ಕನ್ನ ಕಿತ್ತುಕೊಳ್ತಿಲ್ಲ, ನಮ್ಮ ನೀರಿನ ಹಕ್ಕು ಕೇಳ್ತಿದ್ದೇವೆ. ಹೋರಾಟ ಮಾಡೋದ್ರಿಂದ ಏನು ಪ್ರಯೋಜನ ಇಲ್ಲ ಎಂದರು.
ಇದಕ್ಕೆ ಪ್ರತಿಯಾಗಿ, ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸರ್ಕಾರ ರೈತರ ವಿರೋಧಿ ನೀತಿ ತೆಗೆದುಕೊಂಡಿದ್ದು, ರೈತರ ನೀರಿನ ಹಕ್ಕನ್ನು ಬಲವಂತವಾಗಿ ತಡೆಹಿಡಿಯುತ್ತಿದೆ. 10 ತಾಲೂಕುಗಳ ನೀರನ್ನು ಕಡಿತ ಮಾಡಿ ಕೇವಲ ರಾಮನಗರ ಜಿಲ್ಲೆಗೆ ಕಳಿಸುತ್ತಿದ್ದಾರೆ. ಇದು ರೈತರಿಗೆ ಮರಣ ಶಾಸನ” ಎಂದ ಅವರು, “ಈ ಯೋಜನೆ ರದ್ದುಪಡಿಸಬೇಕು” ಎಂದು ಒತ್ತಾಯಿಸಿದರು. ಅವರು ಹೋರಾಟದ ಹಿನ್ನಲೆಯಲ್ಲಿ “2 ವರ್ಷಗಳಿಂದ ಡಿಸಿ ಕಚೇರಿ ಎದುರು ಧರಣಿ, ಪಾದಯಾತ್ರೆ, ಗಲಾಟೆ, ಹಾಗೂ ಪರಮೇಶ್ವರ್ ಮನೆ ಎದುರು ಪ್ರತಿಭಟನೆ – ಎಲ್ಲವೂ ರೈತರ ಹಕ್ಕಿಗಾಗಿ ನಡೆದಿವೆ. ಆದರೆ ಸರ್ಕಾರ ಯಾವುದೇ ಸ್ಪಂದನೆ ನೀಡಿಲ್ಲ. ಈಗ ರೈತರು ಬೀದಿಗೆ ಇಳಿಯಬೇಕಾದ ಪರಿಸ್ಥಿತಿ ಉಂಟಾಗಿದೆ” ಎಂದರು.















