ಬಳ್ಳಾರಿ: “ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪ್ರತಿ ತಿಂಗಳು ಕೊಡ್ತೀವಿ ಅಂತ ನಾವು ಹೇಳಿಲ್ಲ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಬಳ್ಳಾರಿಯಲ್ಲಿ ನಡೆದ ಕಾಂಗ್ರೆಸ್ ಸಾಧನಾ ಸಮಾವೇಶದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಿದ್ದ ಅವರು, ಈ ಹೇಳಿಕೆಯನ್ನು ಹೇಳುವ ಮೂಲಕ ಉಲ್ಟಾ ಹೊಡೆದಿದ್ದಾರೆ.
ಪತ್ರಕರ್ತರು “ಗೃಹಲಕ್ಷ್ಮಿ ಯೋಜನೆಯ ಹಣ ಯಾವಾಗ ಬರುತ್ತದೆ?” ಎಂದು ಕೇಳಿದಾಗ, ಡಿಕೆಶಿ ಉತ್ತರಿಸಿದ್ದು ಹೀಗೆ – “ನೋಡ್ರಿ, ತಿಂಗಳು ತಿಂಗಳು ಹಣ ಕೊಡ್ತೀವಿ ಅಂತ ನಾವು ಹೇಳಿಲ್ಲ. ನೀವು ಟ್ಯಾಕ್ಸ್ ಕಟ್ಟುತ್ತಾ ಇರಬೇಕು, ನಾವು ಸರ್ಕಾರವಾಗಿ ದುಡ್ಡು ಕೊಡ್ತಾ ಇರಬೇಕು. ಎಲ್ಲವನ್ನೂ ನಿಯಮಿತವಾಗಿ ಪಡೆಯಲು ಸಮಯ ಬೇಕು. ಗುತ್ತಿಗೆ ಕೆಲಸ ಮಾಡುವವರಿಗೆ ನಾಳೆನೇ ಹಣ ಬಂದು ಬಿಡುತ್ತಾ? ಕೆಲವೊಮ್ಮೆ 2, 3, 5 ವರ್ಷ ಆಗುತ್ತೆ ಅಲ್ವಾ.. ಅದೇ ರೀತಿ ಇದೂ ಕೂಡ ಬಂದಾಗ ಬರುತ್ತೆ ಅಂತ ಹಾರಿಕೆ ಉತ್ತರ ನೀಡಿದ್ದಾರೆ.
ಕಾಂಗ್ರೆಸ್ ಸಾಧನಾ ಸಮಾವೇಶದ ವೇಳೆ ತಮ್ಮ ಬಳ್ಳಾರಿ ಭೇಟಿಗೆ ಕೆಲವರು ಟೀಕೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, “ನಾನೇನು ಹಂಪಿ ಟೂರ್ ಮಾಡೋಕೆ ಬಂದಿದ್ದೇನಾ? ನಾನು ಕೆಲಸದ ನಿಮಿತ್ತ ಬಂದಿದ್ದೇನೆ. ಕೆಲವರಿಗೆ ಟೀಕೆ ಮಾಡದೇ ಇರೋಕೆ ಆಗಲ್ಲಾ! ಕುಮಾರಸ್ವಾಮಿ, ಅಶೋಕ್‌ರಂಥ ನಾಯಕರು ಟೀಕೆ ಮಾಡದೇ ಇದ್ದರೆ ಅವರ ರಾಜಕೀಯ ಚಟುವಟಿಕೆ ನಡೆಯಲ್ಲ” ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ನಾಯಕರು ಕಾಂಗ್ರೆಸ್ ಗ್ಯಾರಂಟಿ ವಿರುದ್ಧ ಮಾಡುತ್ತಿರುವ ಟೀಕೆಗೆ ಪ್ರತಿಕ್ರಿಯಿಸುತ್ತಾ, ಡಿಕೆಶಿ ಈ ರೀತಿ ಹೇಳಿದರು – “ನಮ್ಮದು ಕಾಂಗ್ರೆಸ್ ಗ್ಯಾರಂಟಿ, ಬಿಜೆಪಿಯದು ಪಕ್ಷದ ಗ್ಯಾರಂಟಿ ಅಲ್ಲ, ಮೋದಿಯ ಗ್ಯಾರಂಟಿ. ನಾವೇ ಕೊಟ್ಟ ಯೋಜನೆಗಳನ್ನು ಇದೀಗ ಬಿಜೆಪಿಯವರು ಅನುಕರಿಸುತ್ತಿದ್ದಾರೆ. ನರೇಗಾ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದವರೇ ಈಗ ಅದನ್ನೇ ಮುಂದುವರೆಸುತ್ತಿದ್ದಾರೆ. ಉಳುವವನೆ ಭೂಮಿಯ ಒಡೆಯ ತೆಗೆಯೋಕೆ ಆಯ್ತಾ? ಟೀಕೆ ಸಾಯ್ತವೆ ಕೆಲಸ ಉಳಿಯುತ್ತವೆ ಎಂದು ಹೇಳಿದರು.
ತೆಲಂಗಾಣ ಮುಖ್ಯಮಂತ್ರಿ ಗ್ಯಾರಂಟಿ ಸಿದ್ಧತೆಯ ಬಗ್ಗೆ ಡಿಕೆಶಿ ಪ್ರತಿಕ್ರಿಯಿಸುತ್ತಾ, “ಅದು ಅವರ ರಾಜ್ಯಕ್ಕೆ ಸೇರಿದ ವಿಷಯ. ಅದರ ಹೊಣೆಗಾರಿಕೆ ಅವರು ನೋಡಿಕೊಳ್ಳಬೇಕು” ಎಂದು ಹೇಳುತ್ತಾ ಆ ವಿಚಾರದಿಂದ ಜಾರಿಕೊಂಡರು.














