ಮನೆ ರಾಜ್ಯ ಆಹಾರದ ಉತ್ಪಾದನೆಯಲ್ಲಿ ಆತ್ಮನಿರ್ಭರತೆ ಸಾಧಿಸಿದ್ದೇವೆ: ಶೋಭಾ ಕರಂದ್ಲಾಜೆ

ಆಹಾರದ ಉತ್ಪಾದನೆಯಲ್ಲಿ ಆತ್ಮನಿರ್ಭರತೆ ಸಾಧಿಸಿದ್ದೇವೆ: ಶೋಭಾ ಕರಂದ್ಲಾಜೆ

0

ಮೈಸೂರು: ದೇಶದ 140 ಕೋಟಿ ಜನರು ತಿಂದರೂ ಮಿಕ್ಕುವಷ್ಟು ಆಹಾರ ಪದಾರ್ಥವನ್ನು ನಾವು ಬೆಳೆಯುತ್ತಿದ್ದೇವೆ. ಆಹಾರದ ಉತ್ಪಾದನೆಯಲ್ಲಿ ಆತ್ಮನಿರ್ಭರತೆಯನ್ನು ಸಾಧಿಸಿದ್ದೇವೆ ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಇಲ್ಲಿ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ನಡೆದ ಕೃಷಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಕೃಷಿ ಕ್ರಾಂತಿ ಮತ್ತು ರೈತರ ಶ್ರಮದಿಂದಾಗಿ ಆಹಾರದ ಕೊರತೆ ನೀಗಿದೆ. ಹೆಚ್ಚುವರಿಯಾಗುವುದಕ್ಕೆ ಮಾರುಕಟ್ಟೆ ಮಾಡಲು ರೈತರಿಗೆ ನೆರವಾಗುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ ಎಂದರು.

2013–14ರಲ್ಲಿ ರೈತರ ಬಜೆಟ್ ₹23ಸಾವಿರ ಕೋಟಿ ಇತ್ತು. ಆದರೆ, ಹೋದ ವರ್ಷ ರೈತರ ಬಜೆಟ್ ₹ 1.32 ಲಕ್ಷ‌ ಕೋಟಿಗೆ ಏರಿದೆ. ₹ 1ಲಕ್ಷ ಕೋಟಿಯನ್ನು ಕೃಷಿ ಮೂಲಸೌಲಭ್ಯಗಳಿಗಾಗಿ ಒದಗಿಸಲು ನಿಧಿಯಾಗಿ ಪ್ರಧಾನಿ ನರೇಂದ್ರ ಮೋದಿ ಇಟ್ಟಿದ್ದಾರೆ. ಪ್ರತಿ ಜಿಲ್ಲೆಗಳಲ್ಲೂ ಆಹಾರ ಪರೀಕ್ಷಾ ಪ್ರಯೋಗಾಲಯ ಸ್ಥಾಪನೆಗೆ ಹಣ ನೀಡಲಾಗುತ್ತಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹಕ ಸಿ.ಆರ್.ಮುಕುಂದ್ ಮಾತನಾಡಿ, ಅಪೌಷ್ಟಿಕತೆ ಹಾಗೂ ಮಧುಮೇಹದ ಸಮಸ್ಯೆ ಜಾಸ್ತಿಯಾಗುತ್ತಿದ್ದು, ದೇಶವನ್ನು ಸವಾಲಾಗಿ ಕಾಡುತ್ತಿವೆ. ಈ ವೇಳೆ ಮಾನವನ ಆರೋಗ್ಯ ಕಾಪಾಡುವಲ್ಲಿ ಸಿರಿಧಾನ್ಯಗಳು ಉತ್ತರದ ರೂಪದಲ್ಲಿವೆ ಎಂದರು.

ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಹಿರಿಯೂರು ಆದಿಜಾಂಬವ ಕೋಡಿಹಳ್ಳಿ ಬೃಹನ್ಮಠದ ಷಡಕ್ಷರಿಮುನಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಜಿ.ಟಿ.ದೇವೇಗೌಡ, ಅರ್ತ್ 360 ಇಕೋ ವೆಂಚರ್ಸ್‌ ಲಿ. ವ್ಯವಸ್ಥಾಪಕ ನಿರ್ದೇಶಕ ಎಂ.ಎನ್.ದಿನೇಶ್‌ ಕುಮಾರ್, ಪುರಾತತ್ವ ತಜ್ಞ ಪ್ರೊ.ರವಿ ಕೋರಿಶೆಟ್ಟರ, ಐಸಿಎಆರ್ ಅಟಾರಿ ವಲಯ–2ರ ಡಾ.ವಿ.ವೆಂಕಟಸುಬ್ರಮಣಿಯನ್, ಎಸ್‌3 ಪ್ರತಿಷ್ಠಾನದ ಅಧ್ಯಕ್ಷೆ ಸರಿತಾ ಪುರುಷೋತ್ತಮ್, ಬಿಜೆಪಿ ಮುಖಂಡ ಭಾರತಿ ಶಂಕರ್‌ ಪಾಲ್ಗೊಂಡಿದ್ದರು.