ಮನೆ ರಾಜ್ಯ ನಮ್ಮನ್ನ ಕೆಣಕಿದವರಿಗೆ ತಕ್ಕ ಉತ್ತರ ಕೊಡಬೇಕು: ಮಲ್ಲಿಕಾರ್ಜುನ ಖರ್ಗೆ

ನಮ್ಮನ್ನ ಕೆಣಕಿದವರಿಗೆ ತಕ್ಕ ಉತ್ತರ ಕೊಡಬೇಕು: ಮಲ್ಲಿಕಾರ್ಜುನ ಖರ್ಗೆ

0

ಕಲಬುರಗಿ : “ಬರೀ ಭಾಷಣ ಮಾಡ್ಕೊಂಡು ಕೂತ್ರೆ ಆಗಲ್ಲ. ನಮ್ಮನ್ನು ಕೆಣಕಿದವರಿಗೆ ತಕ್ಕ ಉತ್ತರ ಕೊಡಬೇಕು,” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರವಾಗಿ ಹೇಳಿಕೆ ನೀಡಿದ್ದಾರೆ. ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಭದ್ರತೆ, ಜಾತಿ ಜನಗಣತಿ ಮತ್ತು ದೇಶದ ಐಕ್ಯತೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನೀತಿಗಳ ಬಗ್ಗೆ ಸ್ಪಷ್ಟ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು.

ಪಾಕಿಸ್ತಾನದ ವಿರುದ್ಧ ಯಾವುದೇ ತೀರ್ಮಾನ ತೆಗೆದುಕೊಳ್ಳುವುದರಲ್ಲಿ ತಮ್ಮ ಬೆಂಬಲವಿದೆ ಎಂದು ಖರ್ಗೆ ಹೇಳಿದರು. “ದೇಶದ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಯಾವ ರೀತಿಯ ಕ್ರಮ ಕೈಗೊಂಡರೂ, ಅದರ ಹಿಂದೆ ಉತ್ತಮ ಉದ್ದೇಶವಿದ್ದರೆ ನಾವು ನಿಂತಿರುತ್ತೇವೆ. ಆದರೆ ಅದನ್ನು ರಾಜಕೀಯ ಲಾಭಕ್ಕಾಗಿ ಬಳಸುವುದು ಬೇಡ,” ಎಂದು ಖರ್ಗೆ ಎಚ್ಚರಿಕೆ ನೀಡಿದರು.

“ನಮ್ಮ ದೇಶದ ಒಗ್ಗಟ್ಟಿಗೆ ಧಕ್ಕೆ ಬರುವ ರೀತಿಯಲ್ಲಿ ಯಾರಾದರೂ ನಡೆದುಕೊಂಡರೆ ನಾವು ಸುಮ್ಮನಿರಲ್ಲ. ದೇಶದ ಗಡಿಗಳನ್ನು ಅಥವಾ ಜನತೆಯ ಭದ್ರತೆಯನ್ನು ಕೆಣಕುವ ಯಾರ ಮೇಲಾದರೂ ತಕ್ಕ ಪ್ರತಿಕ್ರಿಯೆ ನೀಡಬೇಕು,” ಎಂದು ಕಠಿಣ ಸಂದೇಶವನ್ನೂ ನೀಡಿದರು.

ಜಾತಿ ಜನಗಣತಿ ಕುರಿತು ಮಾತನಾಡಿದ ಖರ್ಗೆ, “ಜಾತಿ ಆಧಾರಿತ ಜನಗಣತಿ ಅಗತ್ಯವಿದೆ ಎಂಬುದನ್ನು ನಾವು ಮೊದಲಿನಿಂದಲೇ ಒತ್ತಿ ಹೇಳುತ್ತಿದ್ದೇವೆ. ಆದರೆ ಆಗ ನಮ್ಮ ಮಾತನ್ನು ತಿರಸ್ಕರಿಸಿ, ಜಾತಿ ವಿಷ ಬಿತ್ತುತ್ತಾರೆ ಎಂಬ ದುರ್ಬಲ ಟಿಪ್ಪಣಿಗಳು ಕೇಳಿಬಂದಿದ್ದವು. ಈಗ ಅದನ್ನೇ ಬೇರೆ ಪಕ್ಷಗಳು ತಮ್ಮ ರಾಜಕೀಯ ಗಿಮಿಕ್‌ಗಾಗಿ ಉಪಯೋಗಿಸುತ್ತಿದ್ದಾರೆ,” ಎಂದು ವ್ಯಂಗ್ಯವಾಡಿದರು.

ಬಿಹಾರ ರಾಜ್ಯದ ಚುನಾವಣಾ ಹಿನ್ನೆಲೆ ಬಳಸಿಕೊಂಡು ಜಾತಿ ಗಣತಿ ಪ್ರಸ್ತಾಪವಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಖರ್ಗೆ, “ಇದು ಬಿಹಾರದ ಚುನಾವಣಾ ಗಿಮಿಕ್ ಆಗಿರಬಹುದು. ಆದರೆ ನಾನು ಅದರ ಬಗ್ಗೆ ಹೆಚ್ಚಿನ ಮಾತು ಆಡಲ್ಲ” ಎಂದು ಸ್ಪಷ್ಟಪಡಿಸಿದರು. ಆದರೆ ಸಮಾಜದ ಒಳಿತಿಗಾಗಿ ಯಾವುದೇ ನಿರ್ಧಾರ ಕೈಗೊಳ್ಳಲಾಗಿದ್ದರೆ, ಅದಕ್ಕೆ ತಮ್ಮ ಬೆಂಬಲವಿದೆ ಎಂದೂ ಅವರು ಹೇಳಿದರು.