ಬೆಂಗಳೂರು: ರೈತರ ಬಗ್ಗೆ ಹಗುರವಾಗಿ ಮಾತನಾಡಿದ ಸಚಿವ ಶಿವಾನಂದ ಪಾಟೀಲ್ ಅವರಿಗೆ ಬುದ್ಧಿವಾದ ಹೇಳುವಂತೆ ಮತ್ತು ಈ ವಿಚಾರವನ್ನು ಬಿಜೆಪಿ ನಾಯಕರು ಅನಗತ್ಯವಾಗಿ ದೊಡ್ಡದು ಮಾಡಿ ವಿವಾದ ಎಬ್ಬಿಸಲು ನೋಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ನಲ್ಲಿ ಟೀಕಿಸಿದ್ದಾರೆ.
ಈ ವಿವಾದ ಹಾಗೂ ರೈತರ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿಗಳು, ಅನ್ನದಾತರಾದ ರೈತರ ಬಗ್ಗೆ ನಾವು ಎಚ್ಚರಿಕೆಯಿಂದ ಮಾತ್ರವಲ್ಲ ಗೌರವದಿಂದ ಮಾತನಾಡಬೇಕು. ಹಗುರ ಮಾತುಗಳ ಮೂಲಕ ರೈತರಿಗೆ ಅವಮಾನವಾಗುವಂತೆ ಮಾಡಬಾರದು. ಇದು ಪ್ರತಿಯೊಬ್ಬರು ಕಡ್ಡಾಯವಾಗಿ ಅನುಸರಿಸಿಕೊಂಡು ಬರಬೇಕಾದ ನೀತಿ ಸಂಹಿತೆ.
ರೈತ ಕುಟುಂಬದಿಂದ ಬಂದಿರುವ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರಿಗೆ ರೈತರನ್ನು ಅವಮಾನಿಸಬೇಕೆಂಬ ದುರುದ್ದೇಶ ಖಂಡಿತ ಇರಲಾರದು. ತನ್ನ ಜೊತೆಗಿದ್ದ ರೈತರೊಂದಿಗಿನ ಸಲಿಗೆಯಿಂದ ಕೆಲವು ಮಾತುಗಳನ್ನು ಆಡಿದ್ದಾರೆ. ಆದರೆ ಇದು ಸಮಸ್ತ ರೈತ ಸಮುದಾಯಕ್ಕೆ ಅನ್ವಯಮಾಡುವಾಗ ವಿಪರೀತ ಅರ್ಥಕ್ಕೆ ಕಾರಣವಾಗುತ್ತದೆ. ಇದು ಸಲ್ಲದು ಎಂದಿದ್ದಾರೆ.
ರೈತರ ಕಲ್ಯಾಣಕ್ಕಾಗಿ ಕಿಂಚಿತ್ತೂ ಕೆಲಸ ಮಾಡದೆ ಇರುವ, ಮೂಲತಃ ರೈತ ವಿರೋಧಿಯಾಗಿರುವ ಬಿಜೆಪಿಯ ನಾಯಕರು ಇಂತಹದ್ದೇ ಅವಕಾಶಕ್ಕಾಗಿ ಕಾದು ಕೂತವರಂತೆ ಶಿವಾನಂದ ಪಾಟೀಲರ ಮಾತುಗಳನ್ನು ವಿವಾದವನ್ನಾಗಿ ಮಾಡಿದ್ದಾರೆ.
ಬೀಜ-ಗೊಬ್ಬರ ಕೊಡಿ ಎಂದು ಕೇಳಿದ ರೈತರನ್ನು ಗುಂಡಿಕ್ಕಿ ಸಾಯಿಸಿದ ಮತ್ತು ರೈತರ ಸಾಲ ಮನ್ನಾ ಮಾಡಿ ಎಂದು ಕೇಳಿದರೆ ನೋಟ್ ಪ್ರಿಂಟಿಂಗ್ ಮೆಷಿನ್ ಇದೆಯೇ ಎಂದು ಕೇಳಿದ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಪಕ್ಷದ ವಿರುದ್ಧ ಮಾತನಾಡುವ ನೈತಿಕತೆ ಇದೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.