ಮೈಸೂರು(Mysuru): ಮಹಾನಗರಪಾಲಿಕೆ ಮೇಯರ್–ಉಪ ಮೇಯರ್ ಚುನಾವಣೆಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಚುನಾವಣೆ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಂಗಳವಾರ ಮಾತನಾಡಿದ ಅವರು, ನಾಲ್ಕೈದು ಮಂದಿ ಆಕಾಂಕ್ಷಿಗಳಾಗಿದ್ದರೂ ನಾಯಕ ಸಮಾಜದ ಶಿವಕುಮಾರ್ ಅವರನ್ನು ಗೆಲ್ಲಿಸಲು ಮುಖಂಡ ನಿರ್ಮಲ್‌ಕುಮಾರ್ ಸುರಾನಾ ನೇತೃತ್ವದಲ್ಲಿ ರೂಪಿಸಿದ ತಂತ್ರ ಯಶಸ್ವಿಯಾಗಿದೆ ಎಂದರು.
ಎಲ್ಲರೂ ತಂಡವಾಗಿ ಕೆಲಸ ನಿರ್ವಹಿಸಿದ್ದೇವೆ. ಪಕ್ಷವು ನಾಯಕ ಸಮಾಜಕ್ಕೆ ಅಧಿಕಾರ ಸಿಗುವಂತೆ ಮಾಡಿದೆ. ಉಪ ಮೇಯರ್ ಆಗಿ ಆಯ್ಕೆಯಾಗಿರುವ ಜಿ.ರೂಪಾ ಪಿಎಚ್.ಡಿ ಪದವೀಧರೆ. ಅವರಿಗೆ ಗಾದಿ ದೊರೆಯುವಂತೆ ಮಾಡಿದ ತಂತ್ರವೂ ಯಶಸ್ವಿಯಾಗಿದೆ ಎಂದರು.
ನಾವು ಯಾವ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. 3ನೇ ಬಾರಿಗೆ ಸದಸ್ಯರಾಗಿರುವ ಶಿವಕುಮಾರ್ ಎಲ್ಲರೊಂದಿಗೂ ವಿಶ್ವಾಸ ಹೊಂದಿದ್ದಾರೆ. ಬೇರೆಯವರಿಂದಲೂ ಬೆಂಬಲ ಕೋರಿದ್ದರು. ಮತ ಹಾಕುತ್ತೇವೆ ಎಂದು ಅನ್ಯ ಪಕ್ಷದವರು ಬಂದರೆ ನಾವು ಬೇಡ ಎನ್ನಲಾಗುವುದಿಲ್ಲ ಎಂದು ಪ್ರತಿಕ್ರಿಯಿಸಿದರು.
ಉಪ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆಡಿಎಸ್ ಅಭ್ಯರ್ಥಿ ರೇಷ್ಮಾ ಭಾನು ನಾಮಪತ್ರ ತಿರಸ್ಕೃತಗೊಂಡಿದ್ದರಲ್ಲಿ ನಮ್ಮ ಪಾತ್ರವಿಲ್ಲ. ನಾವು ಯಾರಿಗೂ ವಿರೋಧ ಮಾಡಿಲ್ಲ ಎಂದರು.