ಮನೆ ಸುದ್ದಿ ಜಾಲ ‘ನಾವು ಭಾರತದಲ್ಲಿ ಹುಟ್ಟಿ ಬೆಳೆದವರು’: ಮಂಡ್ಯದಲ್ಲಿ ಮುಸ್ಲಿಮರಿಂದ ಪಾಕಿಸ್ತಾನದ ವಿರುದ್ಧ ಪ್ರತಿಭಟನೆ!

‘ನಾವು ಭಾರತದಲ್ಲಿ ಹುಟ್ಟಿ ಬೆಳೆದವರು’: ಮಂಡ್ಯದಲ್ಲಿ ಮುಸ್ಲಿಮರಿಂದ ಪಾಕಿಸ್ತಾನದ ವಿರುದ್ಧ ಪ್ರತಿಭಟನೆ!

0

ಮಂಡ್ಯ : ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲೂ ಮುಸ್ಲಿಂ ಸಮುದಾಯದವರು ಪಾಕಿಸ್ತಾನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ಪ್ರತಿಭಟನೆಗೆ ಎಂಎಲ್‌ಸಿ ವಿವೇಕಾನಂದ ನೇತೃತ್ವ ನೀಡಿದ್ದು, ಕೊಪ್ಪದ ಮಸೀದಿ ಬಳಿ ಮುಸ್ಲಿಂ ನಾಗರಿಕರು ಒಂದುಗೂಡಿ “ಹಿಂದೂಸ್ತಾನ್ ಜಿಂದಾಬಾದ್”, “ಪಾಕಿಸ್ತಾನ್ ಮುರ್ದಾಬಾದ್”, “ಪಾಕಿಸ್ತಾನ ಸರ್ವನಾಶವಾಗಲಿ” ಎಂಬ ಘೋಷಣೆಗಳನ್ನು ಕೂಗಿ ತಮ್ಮ ದೇಶಪ್ರೇಮವನ್ನು ಹೊರಹಾಕಿದರು. ಪ್ರತಿಭಟನಾಕಾರರು ಭಾರತಕ್ಕೆ ನಂಬಿಕೆಯನ್ನು ವ್ಯಕ್ತಪಡಿಸಿ, “ನಾವೆಂದೂ ಹಿಂದೂಸ್ತಾನದ ಜೊತೆಗಿರುತ್ತೇವೆ” ಎಂದು ಘೋಷಿಸಿದರು.

ಈ ವೇಳೆ ಮಾತನಾಡಿದ ಮುಸ್ಲಿಂ ಮುಖಂಡರು, “ನಾವು ಈ ಮಣ್ಣಿನಲ್ಲಿ ಹುಟ್ಟಿ ಬೆಳೆದವರು. ಭಾರತವೇ ನಮ್ಮ ಭೂಮಿ ತಾಯಿ. ಪಾಕಿಸ್ತಾನ ಯಾವತ್ತೂ ಶಾಂತಿಗಾಗಿ ಕೆಲಸ ಮಾಡಿಲ್ಲ. ಪ್ರತೀ ಬಾರಿ ಭಯೋತ್ಪಾದನೆಗೆ ಬೆಂಬಲ ನೀಡಿದ್ದು ಪಾಕ್. ನಾವು ಅದಕ್ಕೆ ವಿರೋಧಿಸುತ್ತೇವೆ” ಎಂದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸ್ಥಳೀಯರು ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ನೀತಿಗೆ ಬೆಂಬಲ ಸೂಚಿಸಿದರು. “ನಮ್ಮ ಸೈನಿಕರು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುತ್ತಿದ್ದಾರೆ. ನಾವು ಎಲ್ಲಾ ಧರ್ಮದ ಜನರೂ ಕೂಡ ಹಿಂದೂಸ್ತಾನದ ನಿಷ್ಠಾವಂತ ನಾಗರಿಕರು. ದೇಶದ ವಿರೋಧಿಗಳ ವಿರುದ್ಧ ನಾವು ಒಂದುಗೂಡಬೇಕು” ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಅನೇಕರು “ಪಾಕಿಸ್ತಾನ ಒಂದು ಪಾಪಿ ರಾಷ್ಟ್ರ. ಶಾಂತಿ ಇಲ್ಲದ, ಭಯೋತ್ಪಾದಕರ ತಾಣವೊಂದಾಗಿದೆ. ಭಾರತ ತನ್ನ ಭದ್ರತೆಗಾಗಿ ಅಗತ್ಯವಾದ ಕ್ರಮಗಳನ್ನು ಕೈಗೊಂಡಿದೆ ಎಂಬುದನ್ನು ನಾವು ಸಂಪೂರ್ಣ ಬೆಂಬಲಿಸುತ್ತೇವೆ” ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು.