ಮೈಸೂರು: ನವದುರ್ಗೆಯರ ಪೂಜಾ ಮಹೋತ್ಸವದ ಸಂದರ್ಭದಲ್ಲಿ ಮಹಿಷಾ ದಸರಾ ಆಚರಣೆಗೆ ನಮ್ಮ ವಿರೋಧವಿದೆ. ಅಕ್ಟೋಬರ್ 13 ರಂದು ಚಾಮುಂಡಿ ಬೆಟ್ಟ ಚಲೋ ಕಾರ್ಯಕ್ರಮ ಮಾಡೇ ಮಾಡುತ್ತೇವೆ ಎಂದು ಬಿಜೆಪಿ ಶಾಸಕ ಟಿ.ಎಸ್ ಶ್ರೀವತ್ಸ ಹೇಳಿದರು.
ಮೈಸೂರಿನಲ್ಲಿಂದು ಮಾತನಾಡಿದ ಶಾಸಕ ಟಿ.ಎಸ್ ಶ್ರೀವತ್ಸ, ಅಕ್ಟೋಬರ್ 13 ರಂದು ಚಾಮುಂಡಿ ಬೆಟ್ಟ ಚಲೋ ನಡೆದೇ ನಡೆಯುತ್ತದೆ. ನಾವು ಪೋಲಿಸರ ಅನುಮತಿ ಕೋರಿ ಪೊಲೀಸ್ ಕಮಿಷನರ್ ಗೆ ಮನವಿ ಪತ್ರವನ್ನು ಸಲ್ಲಿಸಿದ್ದೇವೆ. ನಾಡಹಬ್ಬ ದಸರಾ ಮಹೋತ್ಸವದ ಸಂದರ್ಭದಲ್ಲಿಯೇ ಯಾಕೆ ಇವರು ಮಹಿಷಾ ದಸರಾ ಆಚರಣೆ ಮಾಡುತ್ತಾರೆ. ನೀವು ಬೇರೆ ಸಮಯದಲ್ಲಿ ಏನಾದರೂ ಮಾಡಿಕೊಳ್ಳಿ ಅದು ನಿಮಗೆ ಬಿಟ್ಟಿದ್ದು. ನವ ದುರ್ಗೆಯರ ಪೂಜಾ ಮಹೋತ್ಸವದ ಸಂದರ್ಭದಲ್ಲಿ ಮಹಿಷಾ ಆಚರಣೆಗೆ ನಮ್ಮ ವಿರೋಧವಿದೆ.
ಅಕ್ಟೋಬರ್ 13 ರಂದು ಸಾಕಷ್ಟು ಸಂಖ್ಯೆಯಲ್ಲಿ ಚಾಮುಂಡಿ ಬೆಟ್ಟ ಚಲೋ ಕಾರ್ಯಕ್ರಮ ಮಾಡೇ ಮಾಡುತ್ತೇವೆ. ಸಹಸ್ರಾರು ಸಂಖ್ಯೆಯಲ್ಲಿ ಜನ ಕಾಲ್ನಡಿಗೆ ಮೂಲಕ ಬೈಕ್, ಕಾರುಗಳ ಮೂಲಕ ಬರುತ್ತಾರೆ. ಅವರಿಗೆ ಅನುಮತಿ ಕೊಟ್ಟು ನಮಗೆ ಕೊಡದಿದ್ದರೆ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ನಾವು ಯಾರ ಧಾರ್ಮಿಕ ನಂಬಿಕೆಗಳನ್ನು ವಿರೋಧ ಮಾಡುತ್ತಿಲ್ಲ. ಸಾವಿರಾರು ವರ್ಷಗಳ ಇತಿಹಾಸ ಇರುವ ಚಾಮುಂಡಿ ತಾಯಿಯ ಮೇಲೆ ನಂಬಿಕೆ ಇಟ್ಟಿರುವ ಬಹು ಸಂಖ್ಯಾತ ಜನರ ಭಾವನೆಗಳಿಗೆ ಧಕ್ಕೆ ಆಗುವುದಕ್ಕೆ ಬಿಡುವುದಿಲ್ಲ. ನಾವು ಅಂದು ನಡೆಸಲೇ ಬೇಕು ಎಂದುಕೊಂಡಿರುವ ಮಹಿಷಾ ದಸರಾವನ್ನ ತಡೆದೇ ತಡೆಯುತ್ತೇವೆ ಎಂದು ಶಾಸಕ ಟಿ.ಎಸ್ ಶ್ರೀವತ್ಸ ತಿಳಿಸಿದರು.