ವಾಷಿಂಗ್ಟನ್: ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣವಚನಕ್ಕೆ ಸಿದ್ಧತೆ ಮಾಡಿಕೊಂಡಿರುವ ಡೋನಾಲ್ಡ್ ಟ್ರಂಪ್ ಪಶ್ಚಿಮ ಏಷ್ಯಾದಲ್ಲಿ ಬಿಕ್ಕಟ್ಟು ಹಾಗೂ ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವುದಾಗಿ ತಿಳಿಸಿದ್ದಾರೆ.
ಪ್ರಮಾಣವಚನಕ್ಕೂ ಮುನ್ನ ಉದ್ಘಾಟನಾ ಭಾಷಣ ಮಾಡಿದ ಅವರು, ಮೊದಲ ದಿನವೇ ಕಾರ್ಯನಿರ್ವಾಹಕ ಆದೇಶಗಳನ್ನು ನೀಡಲು ಯೋಜಿಸುತ್ತಿದ್ದಾರೆ. ಅಮೆರಿಕದ 47ನೇ ಅಧ್ಯಕ್ಷರಾಗಿರುವ ಅವರು ಅಮೆರಿಕದ ಕಾಲಮಾನದ ಅನುಸಾರ ಸೋಮವಾರ ಮಧ್ಯಾಹ್ನದ ಬಳಿಕ ಕ್ಯಾಪಿಟಲ್ ರೊಟುಂಡಾದ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದಕ್ಕೆ ಮುನ್ನ ವಾಷಿಂಗ್ಟನ್ ಡಿಸಿಯಲ್ಲಿ ಭಾನುವಾರ ನಡೆದ ರ‍್ಯಾಲಿಯಲ್ಲಿ ಮಾತನಾಡಿರುವ ಅವರು ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವುದಾಗಿ ಘೋಷಿಸಿದ್ದಾರೆ.
ಮಧ್ಯ ಪ್ರಾಚ್ಯದ ಬಿಕ್ಕಟ್ಟು ಪರಿಹರಿಸುವ ನಿಲ್ಲಿಸುವ ಹಾಗೂ ಮೂರನೇ ಮಹಾಯುದ್ಧ ನಡೆಯದಂತೆ ನೋಡಿಕೊಳ್ಳುತ್ತೇನೆ ಎಂದಿರುವ ಅವರು ಈ ಯುದ್ಧಕ್ಕೆ ನಾವು ಎಷ್ಟು ಹತ್ತಿರ ಇದ್ದೇವೆ ಎಂಬುದರ ಕುರಿತು ಯಾವುದೇ ಆಲೋಚನೆ ನಿಮಗಿಲ್ಲ ಎಂದು ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ.
ಅಮೆರಿಕ ನೇತೃತ್ವದ ಪಾಶ್ಚಿಮಾತ್ಯ ದೇಶಗಳ ಒಕ್ಕೂಟದ ದೇಶಗಳು ನೀಡುತ್ತಿರುವ ಬೆಂಬಲದಿಂದಾಗಿ 2023 ರಿಂದ ಉಕ್ರೇನ್ ರಷ್ಯಾ ವಿರುದ್ಧ ನಿರಂತರ ಹೋರಾಟ ಮುಂದುವರೆಸಿದೆ. ಅಧ್ಯಕ್ಷಗಿರಿಯಿಂದ ಹೊರ ಹೋಗುವ ಮುನ್ನ ಈ ಸಂಬಂಧ ಸಾಧ್ಯವಾದ ಎಲ್ಲಾ ಆಡಳಿತಾತ್ಮಕ ಬದ್ಧತೆ ತೋರಿಸುವುದಾಗಿ ನಿರ್ಗಮಿತ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದರು. ಕದನವಿರಾಮ ಅಥವಾ ಯುದ್ಧ ನಿಲ್ಲಿಸುವುದು ಉಕ್ರೇನ್ ನಿರ್ಧಾರಕ್ಕೆ ಬಿಟ್ಟಿದ್ದು ಎಂದು ಅವರು ತಿಳಿಸಿದ್ದಾರೆ.
ಯುದ್ಧ ಮುಂದುವರೆಸುವ ಇರಾದೆ ಟ್ರಂಪ್ಗಿಲ್ಲ: ಇದೀಗ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಟ್ರಂಪ್ ಈ ಯುದ್ಧವನ್ನು ನಿಲ್ಲಿಸುವ ಕುರಿತು ಆಲೋಚಿಸುತ್ತಿದ್ದಾರೆ. ಯುದ್ಧ ಮುಂದುವರೆಸುವ ಇರಾದೆ ಟ್ರಂಪ್ಗೆ ಇಲ್ಲ. ಆದರೆ ಯುದ್ಧ ಮುಂದುವರಿಸಬೇಕೇ ಅಥವಾ ಬೇಡವೇ ಎಂಬುದನ್ನು ಉಕ್ರೇನ್ ನಿರ್ಧರಿಸಬೇಕು ಎಂಬುದಾಗಿ ಭಾನುವಾರ ಟ್ರಂಪ್ ತಿಳಿಸಿದ್ದಾರೆ. ಈಗಾಗಲೇ ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟಿನ ಕುರಿತು ಟ್ರಂಪ್ ಮಧ್ಯಪ್ರವೇಶಿಸಿದ್ದು, ಆ ಪ್ರದೇಶದ ಅವರ ವಿಶೇಷ ರಾಯಭಾರಿ ಸ್ಟೀವ್ ವಿಟ್ಕೊಫ್ ಭಾನುವಾರದಿಂದ ಇಸ್ರೇಲ್ ಮತ್ತು ಹಮಾಸ್ ನಡುವೆ ಕದನವಿರಾಮ ಜಾರಿಗೆ ತರಲು ಕೆಲಸ ಮಾಡುತ್ತಿದ್ದಾರೆ.ಈಗಾಗಲೇ ಇಸ್ರೇಲ್- ಹಮಾಸ್ ನಡುವೆ ಕದನ ವಿರಾಮ ಏರ್ಪಟ್ಟಿದ್ದು, ಹಮಾಸ್ ಇಸ್ರೇಲ್ನ ಮೂವರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದರೆ, ಇಸ್ರೇಲ್ 90 ಪ್ಯಾಲಿಸ್ತೇನಿ ಕೈದಿಗಳನ್ನು ಬಿಡುಗಡೆ ಮಾಡಿದೆ.
ಇನ್ನು ತಿಂಗಳುಗಳ ಹಿಂದೆಯೇ ನಡೆದ ಕದನ ವಿರಾಮ ಕುರಿತು ಮಾತುಕತೆಯ ಲಾಭ ಪಡೆದುಕೊಳ್ಳಲು ಟ್ರಂಪ್ ಮುಂದಾಗಿದ್ದಾರೆ. ಈ ಬೆನ್ನಲ್ಲೆ ಟ್ರಂಪ್ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಕುರಿತು ಮತ್ತೆ ಪುನರುಚ್ಛರಿಸಿದ್ದಾರೆ. ಜಗತ್ತು ಎಂದೂ ಕಂಡರಿಯದ ರೀತಿಯ ಆಕ್ರಮಣಕಾರಿ ನೀತಿಯನ್ನು ಜಾರಿಗೆ ತರುವುದಾಗಿ ಅವರು ಘೋಷಿಸಿದ್ದಾರೆ.















