ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾರಿಷಸ್ ಗೆ 10 ಸಾವಿರ ಕೋಟಿ ತೆಗೆದುಕೊಂಡು ಹೋಗಿದ್ದಾರೆ ಎಂದು ಅವರದ್ದೇ ಪಕ್ಷದ ಯತ್ನಾಳ್ ಆರೋಪ ಮಾಡಿದ್ದಾರೆ.
ಬಿಜೆಪಿಯವರು ಮೊದಲು ಈ ಆರೋಪಕ್ಕೆ ಉತ್ತರ ಕೊಡಲಿ. ನಾವು ಸಹ ಹೋರಾಟ ಮಾಡುತ್ತೇವೆ. ನ್ಯಾಯಾಂಗ ಹೋರಾಟ ಮಾಡುತ್ತೇವೆ. ಬಿಜೆಪಿಯವರ ವಿರುದ್ದ ಜನರ ಬಳಿ ಹೋಗುತ್ತೇವೆ. ಅವರ ಕಾಲದಲ್ಲಿ 25 – 30 ಹಗರಣ ನಡೆದಿವೆ ಅದನ್ನು ಜನರ ಮುಂದೆ ತಿಳಿಸುತ್ತೇವೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಶಿವಮೊಗ್ಗದಲ್ಲಿ ಶನಿವಾರ (ಆ.10) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ನಡೆದಾಗ ಬಿಜೆಪಿಯವರೇ ಅಧ್ಯಕ್ಷರಾಗಿದ್ದರು. ಅವರ ಪಕ್ಷದ ಶಾಸಕರೇ ಇದ್ದರು. ಮುರುಗೇಶ ನಿರಾಣಿ, ಕುಮಾರಸ್ವಾಮಿ ವಿರುದ್ದ ರಾಜ್ಯಪಾಲರಿಗೆ ದೂರು ಕೊಟ್ಟಿದ್ದರು. ಆ ಪ್ರಕರಣ ಏನಾಯ್ತು? ಕೋವಿಡ್ ವೇಳೆ ಎರಡು ಸಾವಿರ ಕೋಟಿ ಹಗರಣ ಆಗಿದೆ. ಯಡಿಯೂರಪ್ಪ, ಸುಧಾಕರ್ ಹಗರಣ ಮಾಡಿದ್ದಾರೆ ಎಂದು ಯತ್ನಾಳ್ ಆರೋಪ ಮಾಡಿದ್ದಾರೆ.
ಮುಡಾ ಹಗರಣ ಬಿಜೆಪಿ ಪಾದಯಾತ್ರೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಹಗರಣ ಮಾಡಿಲ್ಲ. ಬಿಜೆಪಿಯವರು ವಿನಾಃ ಕಾರಣ ಹೋರಾಟ ಮಾಡುತ್ತಿದ್ದಾರೆ. 40 ವರ್ಷದ ರಾಜಕಾರಣದಲ್ಲಿ ಸಿದ್ದರಾಮಯ್ಯ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ದೇವರಾಜ್ ಅರಸು ನಂತರ ಒಬಿಸಿ ಸಮುದಾಯದ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಬಿಜೆಪಿಯವರಿಗೆ ಇದು ಸಹಿಸಲಾಗುತ್ತಿಲ್ಲ. ರಾಜ್ಯಪಾಲರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಭದ್ರಾವತಿ ವಿಐಎಸ್ ಎಲ್ ಕಾರ್ಖಾನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ವಿಎಸ್ ಐಎಲ್ ಕಾರ್ಖಾನೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಎಲ್ಲವೂ ಸರಿ ಹೋಗುವ ನಿರೀಕ್ಷೆಯಿದೆ ಎಂದರು.