ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸುತ್ತಿರುವ ಬಿಜೆಪಿ, ಇದೀಗ ಸರ್ಕಾರದ ಮಾನನಷ್ಟ ಮೊಕದ್ದಮೆ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಕುರಿತು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, “ನಿಮ್ಮ ಗೊಡ್ಡು ಬೆದರಿಕೆಗಳಿಗೆ, ನಟ್ಟು-ಬೋಲ್ಟು ಟೈಟ್ ಮಾಡುವ ಧಮ್ಕಿಗಳಿಗೆ ನಾವು ಜಗ್ಗಲ್ಲ, ಬಗ್ಗಲ್ಲ” ಎಂದು ಟ್ವೀಟ್ ಮೂಲಕ ಸ್ಪಷ್ಟವಾಗಿ ಹೇಳಿದ್ದಾರೆ.
ಇತ್ತೀಚೆಗೆ ಬಿಜೆಪಿ ಮಾಧ್ಯಮಗಳಲ್ಲಿ ಪ್ರಕಟಿಸಿದ ಜಾಹೀರಾತುಗಳಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ‘40% ಸರ್ಕಾರ’ ಎಂಬ ಆರೋಪ ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಸರಕಾರದ ಗೌರವ ಮತ್ತು ಚರಿತ್ರೆಗೆ ಧಕ್ಕೆ ಆಗಿದೆ ಎಂಬ ಕಾರಣದಿಂದ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗಿದೆ. ಇದಕ್ಕೆ ಪ್ರತಿಯಾಗಿ ಆರ್. ಅಶೋಕ್ ಟ್ವೀಟ್ ಮಾಡಿ, “ಸುಳ್ಳು ಕೇಸು ಹಾಕಿ ವಿಪಕ್ಷಗಳ ಧ್ವನಿ ಅಡಗಿಸಲು ಯತ್ನ ಮಾಡುತ್ತಿದ್ದೀರಿ” ಎಂದು ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದಾರೆ.
ಆರ್. ಅಶೋಕ್ ಅವರ ಟ್ವೀಟ್‌ನಲ್ಲಿ, “40% ಸರ್ಕಾರ ಎಂಬ ಹಸಿ ಸುಳ್ಳು, ಅಪಪ್ರಚಾರದ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಜವಾಬ್ದಾರಿಯುತ ವಿಪಕ್ಷವಾಗಿ ಧ್ವನಿ ಎತ್ತುತ್ತಿರುವ ಬಿಜೆಪಿಯ ಮೇಲೆ ಸುಳ್ಳು ಕೇಸು ಹಾಕುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ನೇರವಾಗಿ, “ನಿಮ್ಮ ಬೆದರಿಕೆಗಳಿಂದ ನಾವು ಬೆದರಲ್ಲ, ಜನರ ಹಿತಕ್ಕಾಗಿ ನಮ್ಮ ಧ್ವನಿ ಎತ್ತುತ್ತಲೇ ಇರುತ್ತೇವೆ” ಎಂದು ಹೇಳಿದ್ದಾರೆ.
ವಿಪಕ್ಷವಾಗಿ ಸರ್ಕಾರದ ವೈಫಲ್ಯ, ಭ್ರಷ್ಟಾಚಾರ, ಮತ್ತು ಜನವಿರೋಧಿ ನೀತಿಗಳನ್ನು ಜನರ ಮುಂದಿಟ್ಟುಕೊಳ್ಳುವುದು ನಮ್ಮ ಸಾಂವಿಧಾನಿಕ ಕರ್ತವ್ಯ ಎಂದು ಆರ್. ಅಶೋಕ್ ಹೇಳಿದರು. “ನಾವು ಯಾವುದೇ ಧಮ್ಕಿಗೆ ಶರಣಾಗುವುದಿಲ್ಲ, ಜನಪರ ಹೋರಾಟ ಮುಂದುವರಿಯುತ್ತದೆ” ಎಂಬುದು ಅವರ ಸ್ಪಷ್ಟ ನಿಲುವಾಗಿದೆ.
ಈ ಟ್ವೀಟ್ ಹಾಗೂ ವಾಗ್ದಾಳಿ ನಂತರ, ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ ವಾಕ್ಸಮರ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷದ ಪ್ರತಿಕ್ರಿಯೆ ನಿರೀಕ್ಷೆಯಲ್ಲಿದ್ದು, ಮುಂದಿನ ರಾಜಕೀಯ ತಿರುವುಗಳತ್ತ ಎಲ್ಲರ ದೃಷ್ಟಿಯೂ ಹರಿದಿದೆ.














