ನವದೆಹಲಿ: ಇಂದು ಬೆಳಗ್ಗೆ ಲೋಕಸಭಾ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಮಹಾರಾಷ್ಟ್ರದಲ್ಲಿ ಸೇರ್ಪಡೆಯಾದ ಹೊಸ ಮತದಾರರ ಸಂಖ್ಯೆಯಲ್ಲಿನ ಹೆಚ್ಚಳದ ಬಗ್ಗೆ ಅದರಲ್ಲೂ ವಿಶೇಷವಾಗಿ 2024ರ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳ ನಡುವೆ ಕೇವಲ 5 ತಿಂಗಳಲ್ಲಿ 39 ಲಕ್ಷ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ ಎಂದು ಹೇಳುವ ಮೂಲಕ ಚುನಾವಣಾ ಆಯೋಗದ ಮೇಲೆ ಗಂಭೀರ ಆರೋಪ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಚುನಾವಣಾ ಆಯೋಗವು, ದೇಶಾದ್ಯಂತ ಏಕರೂಪವಾಗಿ ಅಳವಡಿಸಿಕೊಂಡ ಸಂಪೂರ್ಣ ವಾಸ್ತವಿಕ ಮತ್ತು ಕಾರ್ಯವಿಧಾನದ ಮ್ಯಾಟ್ರಿಕ್ಸ್ ನೊಂದಿಗೆ ಲಿಖಿತವಾಗಿ ಪ್ರತಿಕ್ರಿಯಿಸುವುದಾಗಿ ಹೇಳಿದೆ.
ಚುನಾವಣಾ ಆಯೋಗವು ಲಿಖಿತವಾಗಿ ಪ್ರತಿಕ್ರಿಯಿಸುವುದಾಗಿ ಹೇಳಿದ್ದು, ರಾಜಕೀಯ ಪಕ್ಷಗಳು ನೀಡುವ ಅಭಿಪ್ರಾಯಗಳು, ಸಲಹೆಗಳು ಮತ್ತು ಪ್ರಶ್ನೆಗಳನ್ನು ಆಯೋಗವು ಆಳವಾಗಿ ಗೌರವಿಸುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ವಿಶೇಷವಾಗಿ ಮಹಾರಾಷ್ಟ್ರದಲ್ಲಿ 2024ರ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳ ನಡುವೆ ಹೊಸ ಮತದಾರರ ಸಂಖ್ಯೆಯಲ್ಲಿನ ಹೆಚ್ಚಳದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಲೋಕಸಭಾ ಚುನಾವಣೆಯ ನಂತರ ಕೇವಲ ಐದು ತಿಂಗಳಲ್ಲಿ 39 ಲಕ್ಷ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ ಎಂದು ರಾಹುಲ್ ಹೇಳಿದ್ದರು. ಮಹಾರಾಷ್ಟ್ರದ ಹೊಸ ನೋಂದಾಯಿತ ಮತದಾರರ ಸಂಖ್ಯೆ ಮಹಾರಾಷ್ಟ್ರದ ಒಟ್ಟು ವಯಸ್ಕ ಜನಸಂಖ್ಯೆಯನ್ನೂ ಮೀರಿದೆ ಎಂದು ಹೇಳಿದ್ದರು.
ರಾಜ್ಯದ ಸಂಪೂರ್ಣ ಮತದಾರರ ಜನಸಂಖ್ಯೆಗಿಂತ ಮಹಾರಾಷ್ಟ್ರದಲ್ಲಿ ಹೆಚ್ಚು ನೋಂದಾಯಿತ ಮತದಾರರು ಹೇಗಿದ್ದಾರೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದರು. ಸರ್ಕಾರದ ಪ್ರಕಾರ, ಮಹಾರಾಷ್ಟ್ರದ ವಯಸ್ಕ ಜನಸಂಖ್ಯೆ 9.54 ಕೋಟಿ. ಚುನಾವಣಾ ಆಯೋಗದ ಪ್ರಕಾರ, ರಾಜ್ಯದ ಜನರಿಗಿಂತ ಮಹಾರಾಷ್ಟ್ರದಲ್ಲಿ ಹೆಚ್ಚಿನ ಮತದಾರರಿದ್ದಾರೆ. ಅದು ಹೇಗೆ ಮಹಾರಾಷ್ಟ್ರದಲ್ಲಿ ಮತದಾರರನ್ನು ಇದ್ದಕ್ಕಿದ್ದಂತೆ ಸೇರಿಸಲಾಗಿದೆ? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದರು.
ಲೋಕಸಭಾ ಚುನಾವಣೆಯ ನಂತರದ 5 ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ 39 ಲಕ್ಷ ಮತದಾರರು ಸೇರ್ಪಡೆಯಾಗಿದ್ದಾರೆ. ಹಿಂದಿನ 5 ವರ್ಷಗಳಲ್ಲಿ ಇದು 32 ಲಕ್ಷವಾಗಿತ್ತು. ಹೊಸದಾಗಿ ಎಲ್ಲೆಲ್ಲಿ ಮತದಾರರ ಹೆಸರುಗಳನ್ನು ಸೇರಿಸಲಾಗಿದೆಯೋ ಆಯಾ ಕ್ಷೇತ್ರಗಳು ಬಿಜೆಪಿ ಗೆಲುವು ಸಾಧಿಸಿದೆ. ಬಿಜೆಪಿ ಗೆದ್ದಲ್ಲೆಲ್ಲಾ ಹೊಸ ಮತದಾರರನ್ನು ಸೇರಿಸಲಾಗಿದೆ. ವಿಚಿತ್ರವಾದ ಸಂಗತಿಯೆಂದರೆ, ಚುನಾವಣಾ ಆಯೋಗದ ಪಟ್ಟಿಯಂತೆ ಮಹಾರಾಷ್ಟ್ರದ ಜನಸಂಖ್ಯೆಗಿಂತ ಹೆಚ್ಚಿನ ಮತದಾರರು ಮತ ಚಲಾಯಿಸಿದ್ದಾರೆ. ಇವು ಊಹಾಪೋಹಗಳಲ್ಲ, ಇದೇ ನಿಜವಾದ ಸತ್ಯ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.
ರಾಹುಲ್ ಗಾಂಧಿ ಚುನಾವಣಾ ಆಯೋಗದಿಂದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳ ಮತದಾರರ ಪಟ್ಟಿಯನ್ನು ಕೋರಿದ್ದರು. ನಮಗೆ ಮತದಾರರ ಪಟ್ಟಿ ಬೇಕು, ಮಹಾರಾಷ್ಟ್ರದ ಮತದಾರರ ಹೆಸರುಗಳು ಮತ್ತು ವಿಳಾಸಗಳು ಬೇಕು. ನಮಗೆ ಲೋಕಸಭಾ ಚುನಾವಣೆಯ ಮತದಾರರ ಪಟ್ಟಿ ಬೇಕು. ನಮಗೆ ವಿಧಾನಸಭಾ ಚುನಾವಣೆಯ ಮತದಾರರ ಪಟ್ಟಿಯೂ ಬೇಕು. ಏಕೆಂದರೆ ಈ ಹೊಸ ಹೆಚ್ಚುವರಿ ಮತದಾರರು ಯಾರು ಎಂಬುದನ್ನು ನಾವು ನಿಖರವಾಗಿ ತಿಳಿದುಕೊಳ್ಳಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದರು.