ಮನೆ ರಾಜಕೀಯ ಸಿಎಂ ಸಿದ್ದರಾಮಯ್ಯ ಪರವಾಗಿ ನಿಲ್ಲುತ್ತೇವೆ, ರಾಜೀನಾಮೆ ಪ್ರಶ್ನೆಯೇ ಇಲ್ಲ: ಡಿ ಕೆ ಶಿವಕುಮಾರ್

ಸಿಎಂ ಸಿದ್ದರಾಮಯ್ಯ ಪರವಾಗಿ ನಿಲ್ಲುತ್ತೇವೆ, ರಾಜೀನಾಮೆ ಪ್ರಶ್ನೆಯೇ ಇಲ್ಲ: ಡಿ ಕೆ ಶಿವಕುಮಾರ್

0

 ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಯಾವುದೇ ತಪ್ಪು ಮಾಡಿಲ್ಲ. ಅವರ ರಾಜೀನಾಮೆ ಪ್ರಶ್ನೆಯೇ ಇಲ್ಲ. ಬಿಜೆಪಿ ಸೇರಿ ವಿರೋಧ ಪಕ್ಷಗಳು ಅವರ ಮೇಲೆ ಷಡ್ಯಂತ್ರ ಮಾಡುತ್ತಿವೆ. ನಮ್ಮ ಪಕ್ಷ ಸಿಎಂ ಪರವಾಗಿ ನಿಲ್ಲಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

Join Our Whatsapp Group

ಹೈಕೋರ್ಟ್ ತೀರ್ಪು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಈಗ ಕಾರ್ಯಕ್ರಮದಿಂದ ಬರುತ್ತಿದ್ದೇನೆ. ಈಗ ನೀವು ವಿಚಾರ ತಿಳಿಸಿದ್ದೀರಿ. ನಾನು ಆದೇಶ ನೋಡಿಲ್ಲ. ನೀವು ಒಬ್ಬೊಬ್ಬರು ಒಂದು ರೀತಿ ಹೇಳೋದನ್ನು ಕೇಳುವುದಕ್ಕೆ ತಯಾರಿಲ್ಲ. ನಮಗೂ ಜವಾಬ್ದಾರಿಗಳಿವೆ. ನಮ್ಮ‌ ಮುಖ್ಯಮಂತ್ರಿಗಳ ಮೇಲೆ ದೊಡ್ಡ ಷಡ್ಯಂತ್ರ ನಡೆದಿದೆ. ನನ್ನ ಮೇಲೆ ಹೇಗೆ ಷಡ್ಯಂತ್ರ ಮಾಡಿ ಕೇಸ್ ಹಾಕಿ ಭಗವಂತನ ಕೃಪೆಯಿಂದ ನಾನು ಹೊರಗಡೆ ಬಂದಿದ್ದೇನೆ. ಆ ಕೇಸ್ ಕೂಡ ವಜಾ ಆಗಿದೆ. ಹಾಗೆಯೇ ಇಂದು ಮುಖ್ಯಮಂತ್ರಿ ಹಾಗೂ ಅವರ ಕುಟುಂಬದ ಮೇಲೆ ದೂರು ಕೊಟ್ಟಿದ್ದಾರೆ ಎಂದರು.

ಅವರು ಪ್ರಕರಣದಲ್ಲಿ ಕ್ಲೀನಾಗಿ ಹೊರ ಬರುತ್ತಾರೆ. ಯಾವುದೇ ತನಿಖೆಗೆ ಆದೇಶ ಮಾಡಲಿ, ಏನೇ ಮಾಡಲಿ. ಅವರದ್ದು ಏನೂ ತಪ್ಪಿಲ್ಲ. ನನ್ನ ಪ್ರಕಾರ ಅವರದ್ದು ಯಾವುದೇ ತಪ್ಪಿಲ್ಲ. ಮುಖ್ಯಮಂತ್ರಿಗಳಾಗಿ ಅವರಿಗೆ ಬದ್ಧತೆಯಿದೆ. ಆ ಬದ್ಧತೆ ಜೊತೆಗೆ ನಾವು ಇದ್ದೇವೆ. ಅವರು ರಾಜ್ಯಕ್ಕೆ ಕೊಟ್ಟಿರುವ ಕಾರ್ಯಕ್ರಮವನ್ನು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ. ಅದಕ್ಕಾಗಿ ಷಡ್ಯಂತ್ರ ನಡೆಯುತ್ತಿದೆ ಎಂದು ಬಿಜೆಪಿ ವಿರುದ್ಧ ಡಿಸಿಎಂ ದೂರಿದರು.

ಪ್ರಕರಣದಲ್ಲಿ ಸಿಎಂಗೆ ಏನು ಹಿನ್ನಡೆ ಇದೆ ಅಂತಾ ನಾನು‌ ಮೊದಲು ಹೈಕೋರ್ಟ್ ಆದೇಶ ನೋಡಿ ಹೇಳುತ್ತೇನೆ. ಸಿಎಂ ರಾಜೀನಾಮೆ ಪ್ರಶ್ನೆಯೇ ಇಲ್ಲ. ಸಿಎಂ ಯಾವುದೇ ತಪ್ಪು ಮಾಡಿಲ್ಲ ಎಂದು ಡಿಕೆಶಿ ಸಮರ್ಥಿಸಿಕೊಂಡರು.

ವಿಕಾಸಸೌಧದಲ್ಲಿ ಸಚಿವ ಕೃಷ್ಣಬೈರೇಗೌಡ ಹೇಳಿಕೆ: ನಾವು ಕಾನೂನು ಹೋರಾಟ ಮುಂದುವರಿಸುತ್ತೇವೆ. ಹೈಕೋರ್ಟ್ ವಿಭಾಗೀಯ ಪೀಠದಲ್ಲಿ, ಸುಪ್ರೀಂ ಕೋರ್ಟ್​ನಲ್ಲೂ ಕಾನೂನು ಹೋರಾಟ ಮಾಡುತ್ತೇವೆ. ರಾಜ್ಯಪಾಲರು ರಾಜಕೀಯವಾಗಿ ತೆಗೆದುಕೊಂಡ ನಿರ್ಧಾರ. ಇದು ರಾಜಕೀಯ ಪ್ರೇರಿತ ಅನ್ನುವ ಹೇಳಿಕೆಗೆ ಈಗಲೂ ಬದ್ಧ. ಕಾನೂನು ಮತ್ತು ರಾಜಕೀಯ ಹೋರಾಟ ಮುಂದುವರಿಸುತ್ತೇವೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ಸಿಎಂ ನಿವಾಸದಲ್ಲಿ ಸಮಾಲೋಚನೆ: ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಆಪ್ತ ಸಚಿವರು, ಕಾನೂನು ಸಲಹೆಗಾರರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಮುಂದಿನ ಕಾನೂನು ಹೋರಾಟದ ಬಗ್ಗೆ ಚರ್ಚಿಸುತ್ತಿದ್ದಾರೆ.

ಕಾವೇರಿ ನಿವಾಸದಲ್ಲಿ ಸಚಿವರಾದ ಡಿಸಿಎಂ ಡಿ.ಕೆ.ಶಿವಕುಮಾರ್, ರಾಜ್ಯ ಸರ್ಕಾರದ ಎಜಿ ಶಶಿಕರಣ್ ಶೆಟ್ಟಿ, ಪ್ರೊ. ರವಿವರ್ಮ ಕುಮಾರ್, ಸಚಿವರಾ ಹೆಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಡಿ.ಸುಧಾಕರ್, ಎಂ.ಸಿ.ಸುಧಾಕರ್, ಶಿವರಾಜ್ ತಂಗಡಗಿ, ಹೆಚ್‌.ಸಿ‌.ಮಹದೇವಪ್ಪ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಪೊನ್ನಣ್ಣ ಸೇರಿ ಕಾನೂನು ತಜ್ಞರು ಉಪಸ್ಥಿತರಿದ್ದು, ಮುಂದಿನ ಹೋರಾಟದ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದಾರೆ.