ಮೈಸೂರು: ನೆರೆಯ ಕೇರಳದಲ್ಲಿ ವೆಸ್ಟ್ ನೈಲ್ ಜ್ವರ ಪ್ರಕರಣಗಳು ವರದಿಯಾಗಿದ್ದು, ಮೈಸೂರು ಜಿಲ್ಲೆಯ ಗಡಿಭಾಗದಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ.
ಎಚ್ ಡಿ ಕೋಟೆ ತಾಲೂಕಿನ ಬಾವಲಿ ಚೆಕ್ ಪೋಸ್ಟ್ ನಲ್ಲಿ ಆರೋಗ್ಯಾಧಿಕಾರಿಗಳ ತಪಾಸಣೆ ಹಾಗೂ ಜನಜಾಗೃತಿ ಮುಂದುವರಿದಿದೆ.
ಈ ಹಿಂದೆ ಕೋವಿಡ್, ಹಂದಿಜ್ವರ, ನಿಫಾ ವೈರಸ್ ಕೇರಳದಲ್ಲಿ ಕಾಣಿಸಿಕೊಂಡು ಅಲ್ಲಿಂದ ರಾಜ್ಯಕ್ಕೂ ಹರಡಿತ್ತು. ಹೀಗಾಗಿ ಕೇರಳಕ್ಕೆ ಭೇಟಿ ನೀಡಿ ಮೈಸೂರಿಗೆ ವಾಪಸ್ಸಾಗುವವರ ಬಗ್ಗೆ ನಿಗಾ ಇಡಲಾಗುತ್ತಿದೆ. ವೆಸ್ಟ್ ನೈಲ್ ಜ್ವರದ ಬಗ್ಗೆ ಎಚ್ಡಿ ಕೋಟೆ ತಾಲೂಕು ಆರೋಗ್ಯಾಧಿಕಾರಿಗಳಿಂದ ಜನ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಎಚ್ಡಿ ಕೋಟೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್ ನೇತೃತ್ವದಲ್ಲಿ ವೆಸ್ಟ್ ನೈಲ್ ಜ್ವರ ಹರಡುವ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಗ್ರಾಮಗಳಿಗೆ ಭೇಟಿ ನೀಡಿ ಜನ ಜಾಗೃತಿ ಮೂಡಿಸುತ್ತಿದ್ದಾರೆ.
ಏನಿದು ವೆಸ್ಟ್ ನೈಲ್ ಜ್ವರ?
ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರವು ನೀಡಿರುವ ಮಾಹಿತಿಯ ಪ್ರಕಾರ ವೆಸ್ಟ್ ನೈಲ್ ಜ್ವರ ಎಂದರೆ, ಸೊಳ್ಳೆಗಳ ಕಡಿತದ ಮೂಲಕ ಹರಡುವ ವೈರಸ್ ಸೋಂಕಾಗಿದೆ. ಸೋಂಕು ಹರಡುವಿಕೆ ಸಾಮಾನ್ಯವಾಗಿ ಬೇಸಿಗೆ ಮಳೆಯ ಸಂದರ್ಭದಲ್ಲಿ ಮತ್ತು ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.














