ಮನೆ ಯೋಗ ಯೋಗಾಸನದಿಂದ ಮನಸ್ಸು-ದೇಹಕ್ಕಾಗುವ ಲಾಭಗಳೇನು?

ಯೋಗಾಸನದಿಂದ ಮನಸ್ಸು-ದೇಹಕ್ಕಾಗುವ ಲಾಭಗಳೇನು?

0

ಯೋಗವು ಮೂಲಭೂತವಾಗಿ ಅತ್ಯಂತ ಸೂಕ್ಷ್ಮವಾದ ವಿಜ್ಞಾನವನ್ನು ಆಧರಿಸಿದ ಆಧ್ಯಾತ್ಮಿಕ ಶಿಸ್ತು ಕ್ರಮವಾಗಿದೆ. ಇದು ಮನಸ್ಸು ಮತ್ತು ದೇಹದ ನಡುವೆ ಸಾಮರಸ್ಯವನ್ನು ತರುವುದರ ಮೇಲೆ ಕೇಂದ್ರೀಕರಿಸುತ್ತದೆ. ಇದು ಆರೋಗ್ಯಕರ ಜೀವನ ಕಲೆ ಮತ್ತು ವಿಜ್ಞಾನವಾಗಿದೆ. ‘ಯೋಗ’ ಎಂಬ ಪದವು ಸಂಸ್ಕೃತ ಮೂಲ ‘ಯುಜ್’ ನಿಂದ ಬಂದಿದೆ, ಇದರರ್ಥ ‘ಸೇರಲು’ ಅಥವಾ ‘ನೊಗಕ್ಕೆ’ ಅಥವಾ ‘ಒಗ್ಗೂಡಿಸಲು’ ಎಂಬುದಾಗಿದೆ.

ಹಿಂದೂ ಧರ್ಮದಲ್ಲಿ ಯೋಗದ ಪ್ರಕಾರಗಳು

ಹಿಂದೂ ತತ್ವಶಾಸ್ತ್ರದಲ್ಲಿ ಪ್ರಸ್ತಾಪವಾಗುವ ಯೋಗದ ಪ್ರಮುಖ ಶಾಖೆಗಳೆಂದರೆ ರಾಜ ಯೋಗ, ಕರ್ಮ ಯೋಗ, ಜ್ಞಾನ ಯೋಗ, ಭಕ್ತಿ ಯೋಗ, ಮತ್ತು ಹಠ ಯೋಗ. ಪತಂಜಲಿಯ ಯೋಗಸೂತ್ರ ಗಳಲ್ಲಿ ಪ್ರಸ್ತಾಪವಾಗಿರುವ ಹಾಗೂ ಹಿಂದೂ ತತ್ವಶಾಸ್ತ್ರದ ಸಂದರ್ಭದಲ್ಲಿ ಸರಳವಾಗಿ ಯೋಗ ಎಂದೆನಿಸಿಕೊಳ್ಳುವ ರಾಜ ಯೋಗವು ಸಾಂಖ್ಯ ಸಂಪ್ರದಾಯಕ್ಕೆ ಸೇರಿದ್ದು.  ಅನೇಕ ಇತರ ಹಿಂದೂ ಗ್ರಂಥಗಳು ಉಪನಿಷತ್ತುಗಳು, ಭಗವದ್ಗೀತೆ, ಹಠಯೋಗ ಪ್ರದೀಪಿಕಾ, ಶಿವಸಂಹಿತೆ ಮತ್ತು ಅನೇಕ ತಂತ್ರಗಳು ಸೇರಿದಂತೆ ಯೋಗದ ವಿವಿಧ ಮುಖ/ಮಗ್ಗಲುಗಳನ್ನು ಚರ್ಚಿಸುತ್ತವೆ.

ಯೋಗ ಕಂಡು ಹಿಡಿದವರಾರು?

ಮಹರ್ಷಿ ಪತಂಜಲಿಯವರಿಗೆ ಔಪಚಾರಿಕ ಯೋಗ ತತ್ವಜ್ಞಾನದ ಸ್ಥಾಪಕರೆಂದು ವ್ಯಾಪಕವಾಗಿ ಮನ್ನಣೆ ನೀಡಲಾಗಿದೆ. ಮನಸ್ಸನ್ನು ನಿಯಂತ್ರಿಸುವ ವ್ಯವಸ್ಥೆಯಾದ ಪತಂಜಲಿಯವರ ಯೋಗವನ್ನು ರಾಜಯೋಗ ಎಂದು ಕರೆಯಲಾಗುತ್ತದೆ. ಮನಸ್ಸಿನ ನಿಯಂತ್ರಣಕ್ಕೆ ಬಳಸುವ ವ್ಯವಸ್ಥೆಯಾಗಿ “ರಾಜಯೋಗ” ಮತ್ತು ಪತಂಜಲಿಯವರ ಯೋಗಸೂತ್ರಗಳು ರಾಜಯೋಗಕ್ಕೆ ಪ್ರಮುಖ. ಪತಂಜಲಿ “ಯೋಗ” ಎಂಬ ಪದವನ್ನು ತಮ್ಮ ಎರಡನೇ ಸೂತ್ರದಲ್ಲಿ ನಿರೂಪಿಸುತ್ತಾರೆ.

ಮುಖ್ಯವಾಗಿ ಯೋಗ ಕಲಿಸುವುದೇನು?

ಯೋಗವು ನಮ್ಮ ದೇಹದ ಬಗ್ಗೆ ನಮಗೆ ಕಲಿಸುತ್ತದೆ, ಚೆನ್ನಾಗಿ ಉಸಿರಾಡುವುದು ಹೇಗೆ ಎಂಬುದನ್ನು ಯೋಗವು ನಮಗೆ ಕಲಿಸುತ್ತದೆ. ಯೋಗವು ನಮ್ಮ ಶಕ್ತಿಯನ್ನು ಹೇಗೆ ಹೆಚ್ಚು ಪರಿಣಾಮಕಾರಿಯಾಗಿ ಬಳಸಬೇಕೆಂದು ಕಲಿಸುತ್ತದೆ. ಮನಸ್ಸನ್ನು ಹೇಗೆ ಶಾಂತಗೊಳಿಸಬೇಕೆಂದು ಯೋಗವು ನಮಗೆ ಕಲಿಸುತ್ತದೆ. ಯೋಗವು ಸಮತೋಲನದ ಬಗ್ಗೆ ನಮಗೆ ಕಲಿಸುತ್ತದೆ. ಯೋಗವು ನಮ್ಮ ದೇಹದ “ಬಾಸ್” ಎಂದು ನಮಗೆ ಕಲಿಸುತ್ತದೆ. ಯೋಗವು ನಮ್ಮ ಬಗ್ಗೆ ಕಾಳಜಿ ವಹಿಸುವುದನ್ನು ಕಲಿಸುತ್ತದೆ.

ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳಲು ಯೋಗ ಅಗತ್ಯ

ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಲು ಯೋಗ ಉತ್ತಮ ಉಪಾಯ. ಯೋಗಮಾಡುವುದರಿಂದ ನಿಮ್ಮ ಮನಸ್ಸು ಮತ್ತು ದೇಹ ಎರಡನ್ನೂ ಆರೋಗ್ಯವಾಗಿ ಇಟ್ಟುಕೊಳ್ಳಬಹುದು. ಪ್ರತಿದಿನ ಯೋಗ ಮಾಡುವುದರಿಂದ ಒತ್ತಡ ಕಡಿಮೆ ಮಾಡಿಕೊಳ್ಳಬಹುದು, ಜೊತೆಗೆ ಆಂತರಿಕವಾಗಿ ಒಳ್ಳೆಯ ರಕ್ತ ಸಂಚಲನವಾಗುತ್ತದೆ. ಜೀರ್ಣಕ್ರಿಯೆ ಸುಲಭವಾಗುತ್ತದೆ, ಉಸಿರಾಟ ಮತ್ತು ನರಗಳ ನಿಯಂತ್ರಣವನ್ನು ಹತೋಟಿಯಲ್ಲಿಡುತ್ತದೆ. ಯೋಗ ಹೊಟ್ಟೆಯನ್ನು ಫ್ಲಾಟ್ ಆಗಿಸುವಲ್ಲಿ ಹೇಗೆ ಸಹಕರಿಸುತ್ತದೆ.

ಗರ್ಭಾವಸ್ಥೆಯ ತೊಂದರೆಗೆ ಪರಿಹಾರ

ಅಷ್ಟೇ ಅಲ್ಲದೆ ಗರ್ಭಾವಸ್ಥೆಯಲ್ಲಿ ಕಂಡುಬರುವ ನಿದ್ರಾಹೀನತೆ, ಬೆನ್ನು ನೋವು, ಅಜೀರ್ಣ ಕ್ರಿಯೆ, ಕಾಲು ಊದಿಕೊಳ್ಳುವುದನ್ನು ತಡೆಯುತ್ತದೆ. ಆದರೂ ತೊಡಕುಗಳನ್ನು ತಡೆಯಲು ಯೋಗ ಮಾಡುವ ಮೊದಲು ನಿಮ್ಮ ವೈದ್ಯರನ್ನೊಮ್ಮೆ ಕೇಳಿ ಸಲಹೆ ಪಡೆಯುವುದು ಒಳಿತು

ಹೃದಯದ ಆರೋಗ್ಯ ಸುಧಾರಿಸುತ್ತದೆ

ಸ್ವಲ್ಪ ಕಾಲ ಉಸಿರನ್ನು ಬಿಗಿ ಹಿಡಿದು ಮಾಡುವ ಮತ್ತು ಇನ್ನಿತರ ಆಸನಗಳು ಹೃದಯ ಮತ್ತು ಅಪದಮನಿಯ ಆರೋಗ್ಯವನ್ನು ಕಾಪಾಡುತ್ತವೆ. ಯೋಗ ರಕ್ತಸಂಚಲನವನ್ನು ಸರಾಗವಾಗಿಸುವುದರಿಂದ ರಕ್ತ ಹೆಪ್ಪುಗಟ್ಟುವಿಕೆಯಂತಹ ಕ್ರಿಯೆಯಿಂದ ರಕ್ಷಿಸಿ ಹೃದಯವನ್ನು ಆರೋಗ್ಯಯುತವಾಗಿರಿಸಿತ್ತದೆ.

ಶ್ವಾಸಕೋಶದ ಸಾಮರ್ಥ್ಯ ಹೆಚ್ಚಳ

ಯೋಗದಲ್ಲಿ ಬರುವ ಧೀರ್ಘ ಉಸಿರಾಟ ಮತ್ತು ನಿಧಾನ ಉಸಿರಾಟದ ಆಸನಗಳಿಂದ ಶ್ವಾಸಕೋಶ ಮತ್ತು ಹೊಟ್ಟೆಯ ಸಾಮರ್ಥ್ಯವನ್ನು ಹೆಚ್ಚಿಸಬಹುದು. ಇದು ದೈನಂದಿನ ಕಾರ್ಯನಿರ್ವಹಣೆ ಸಾಮರ್ಥ್ಯ ಮತ್ತು ಸಹಿಷ್ಣುತೆಯನ್ನು ಹೆಚ್ಚಿಸುವಲ್ಲಿ ಸಹಕರಿಸುತ್ತದೆ. ಧೀರ್ಘ ಉಸಿರಾಟದ ಯೋಗವು ವಿಶ್ರಾಂತಿಯನ್ನು ನೀಡಿ ಮನಸ್ಸಿನ ಮತ್ತು ದೇಹದ ಒತ್ತಡವನ್ನು ಕಡಿಮೆ ಮಾಡುತ್ತದೆ.

ಬೆನ್ನುನೋವು, ಮೂಳೆ ಸವೆತಕ್ಕೆ ರಾಮಬಾಣ

ದಿನನಿತ್ಯದ ಜಂಜಾಟದಲ್ಲಿ ಕುಳಿತುಕೊಳ್ಳುವ ಬೇರೆಬೇರೆ ಭಂಗಿಯಿಂದಾಗಿ ವಯಸ್ಸಾಗುತ್ತಿದ್ದಂತೆ ನಾವು ನಮ್ಮ ಸಮತೋಲನವನ್ನು ಕಳೆದುಕೊಳ್ಳುತ್ತೇವೆ.ಈ ಕಾರಣದಿಂದಾಗಿ ಬೆನ್ನು ನೋವು, ಮೂಳೆಯ ಒಡೆತ, ಸೆಳೆತ ಇವುಗಳೆಲ್ಲ ಕಾಣಿಸಿಕೊಳ್ಳುತ್ತವೆ. ಯೋಗ ಮಾಡುವುದರಿಂದ ಈ ನೋವನ್ನು ನಿವಾರಿಸಿ ಸಮತೋಲನವನ್ನು ಕಾಪಾಡಿಕೊಂಡು ಹಿಡಿತದಲ್ಲಿರಬಹುದು. ಯೋಗದ ಮೂಲಕ ನೀವು ನಿಮ್ಮ ಬಲವನ್ನು ಮತ್ತೆ ಪಡೆದುಕೊಳ್ಳಬಹುದು. ಇದು ನಿಮ್ಮ ಮೆದುಳನ್ನು ಚುರುಕಾಗಿಸುವುದಲ್ಲೂ ಕೂಡ ಸಹಕರಿಸುತ್ತದೆ.

ಒತ್ತಡ ಕಡಿಮೆ ಮಾಡುತ್ತದೆ, ವಿಶ್ರಾಂತಿ ನೀಡುತ್ತದೆ

ಯೋಗ ಒತ್ತಡವನ್ನು ಕಡಿಮೆ ಮಾಡುತ್ತದೆ. ವಿರಾಮವಿಲ್ಲದ ಕೆಲಸದ ನಂತರ ನೀವು ಯೋಗ ಮಾಡಿದರೆ ಒತ್ತಡ ಕಡಿಮೆಯಾಗುವುದನ್ನು ಕಾಣಬಹುದು. ಅಂದಮಾತ್ರಕ್ಕೆ ಯೋಗ ಒಂದೇ ಒತ್ತಡವನ್ನು ನಿವಾರಿಸಲು ಇರುವ ಮಾರ್ಗ ಎಂದಲ್ಲ. ಯಾವುದೇ ರೀತಿಯ ವ್ಯಾಯಾಮವನ್ನು ಮನಸ್ಸಿಟ್ಟು ಶೃದ್ಧೆಯಿಂದ ಸರಿಯಾಗಿ ಮಾಡಿದರೆ ಅದರಿಂದ ಒತ್ತಡವನ್ನು ನಿವಾರಿಸಿಕೊಳ್ಳಬಹುದು.

ಮನಸ್ಸಿನ ಮೇಲೆ ನಿಯಂತ್ರಣ

ಯೋಗವು ನಿಮಗೆ ಸಂತೋಷವನ್ನು ಒದಗಿಸುತ್ತದೆ. ಯೋಗವು ನಮ್ಮ ಆಸೆಗಳು ಮತ್ತು ಮನಸ್ಸಿನ ಮೇಲೆ ನಿಯಂತ್ರಣವನ್ನು ಹೊಂದಲು ಸಹಾಯ ಮಾಡುತ್ತದೆ. ಮಾನಸಿಕ ನೆಮ್ಮದಿಯು ಯೋಗ ಮಾಡುವವರಿಗೆ ಸುಲಭವಾಗಿ ದೊರೆಯುತ್ತದೆ. ಯೋಗವು ಹಿತ-ಮಿತ ಜೀವನ ಸಿದ್ಧಾಂತವನ್ನು ಪ್ರತಿಪಾದಿಸುತ್ತದೆ. ಹೀಗಾಗಿ ಯೋಗವು ಸಂತೋಷವನ್ನು ಒದಗಿಸುತ್ತದೆ. ಯೋಗಾಸನವು ಅಧಿಕ ಕ್ಯಾಲೋರಿಗಳನ್ನು ವ್ಯಯಿಸುತ್ತದೆ, ಇದರಿಂದಾಗಿ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯವಾಗುತ್ತದೆ. ಯೋಗಾಸನವು ನರವ್ಯೂಹಗಳನ್ನು ಉಪಶಮನಗೊಳಿಸುತ್ತದೆ.

ಹಲವು ಆರೋಗ್ಯ ಸಮಸ್ಯೆಗಳಿಗೆ ಮುಕ್ತಿ

ಯೋಗಾಭ್ಯಾಸದಲ್ಲಿ ಬರುವ ಉಸಿರಾಟ ಮತ್ತು ಸಮತೋಲನ ಆಸನಗಳು ಮೆದುಳಿನ ಎರಡು ಕಡೆಗಳಲ್ಲೂ ಸಮತೋಲನ ಕಾಪಾಡುತ್ತದೆ. ನೋವುಗಳನ್ನುತಡೆಯುತ್ತದೆ – ಯೋಗ ಮಾಡುವುದರಿಂದ ಬಲಯುತವಾಗುವುದರ ಜೊತೆಗೆ ಬೆನ್ನುನೋವು, ಕೀಳುನೋವು ಅಥವಾ ಯಾವುದೇ ನೋವಿದ್ದರೂ ಅದನ್ನು ಶಮನಗೊಳಿಸುತ್ತದೆ.

ತಲೆನೋವಿಗೆ ಶೀಘ್ರ ಪರಿಹಾರ

ತಲೆನೋವಿನ ಅತ್ಯುಗ್ರ ರೂಪವಾದ ಮೈಗ್ರೇನ್ ಎಂತಹ ಜಟ್ಟಿಯನ್ನಾದರೂ ನೆಲಕ್ಕುರುಳಿಸುವ ಸಾಮರ್ಥ್ಯ ಹೊಂದಿದೆ. ಈ ಭಯಂಕರ ನೋವನ್ನು ಬರದಂತೆ ಮಾಡಲು ಯೋಗಾಸನದ ಕೆಲವು ಆಸನಗಳು ಮ್ರೈಗ್ರೇನ್ ಕಡಿಮೆಗೊಳಿಸಲು ನೆರವಾಗುತ್ತವೆ. ಅಧೋಮುಖ ಶ್ವಾನಾಸನ, ಪ್ರಸಾರಿತ ಪಡೋತ್ತಾನಾಸನ, ಉತ್ತನಾಸನ, ಜನುಶೀರ್ಷಾಸನ, ಪಶ್ಚಿಮೋತ್ತಾಸನ, ಮತ್ಸೇಂದ್ರಾಸನ, ಊರ್ಧ್ವಮುಖ ಶ್ವಾನಾಸನ, ಸೇತುಬಂಧ, ಮತು ಶವಾಸನಗಳು ತಲೆನೋವು ಕಡಿಮೆಗೊಳಿಸಲು ನೆರವಾಗುತ್ತವೆ. ಈ ಭಂಗಿಗಳಲ್ಲಿ ಮೆದುಳಿಗೆ ಹರಿಯುವ ರಕ್ತದ ಪ್ರಮಾಣ ಹೆಚ್ಚುವುದರಿಂದ ತಲೆನೋವು ಸ್ವಾಭಾವಿಕವಾಗಿ ಕಡಿಮೆಯಾಗಲು ಸಾಧ್ಯವಾಗುತ್ತದೆ.

ಹಿಂದಿನ ಲೇಖನಇಂದು ಎನಗೆ ಗೋವಿಂದ
ಮುಂದಿನ ಲೇಖನವೃಶ್ಚಿಕ ರಾಶಿಯ ವ್ಯಕ್ತಿಗಳು ತೀಕ್ಷ್ಣ ಸ್ವಭಾವ ವ್ಯಕ್ತಿಗಳು