ಮನೆ ರಾಜಕೀಯ ಸಿಎಂ ಬಸವರಾಜ ಬೊಮ್ಮಾಯಿ ನಿದ್ದೆಗೆಡಿಸಿರುವ ಆ ಕಾರಣಗಳೇನು?

ಸಿಎಂ ಬಸವರಾಜ ಬೊಮ್ಮಾಯಿ ನಿದ್ದೆಗೆಡಿಸಿರುವ ಆ ಕಾರಣಗಳೇನು?

0

ಬೆಂಗಳೂರು(Bengaluru): ಕಾಂಗ್ರೆಸ್ ಪಕ್ಷದ ಪೇಸಿಎಂ ಅಭಿಯಾನ ಸಿಎಂ ಬಸವರಾಜ ಬೊಮ್ಮಾಯಿ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದರೆ, ಇದೀಗ ಉನ್ನತ ಶಿಕ್ಷಣ ಸಚಿವ ಡಾ ಅಶ್ವತ್ಥನಾರಾಯಣ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಡುವಣ ಸಂಘರ್ಷ ಮತ್ತೊಂದು ತಲೆಬಿಸಿಯಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಇತ್ತೀಚೆಗೆ ತೆಲಂಗಾಣಕ್ಕೆ ಹೋಗಿದ್ದ ಸಂದರ್ಭದಲ್ಲಿ ಅವರನ್ನು ಬೊಮ್ಮಾಯಿ ಅವರ ಮುಖವೇ ಸ್ವಾಗತಿಸಿತ್ತು. 40 ಪರ್ಸೆಂಟ್ ಸಿಎಂ ಅಂತ ಬಸವರಾಜ ಬೊಮ್ಮಾಯಿ ಅವರನ್ನು ದೂರುವ ಪೋಸ್ಟರ್ಗಳನ್ನು ನೋಡಿ ಅಮಿತ್ ಷಾ ಪೆಚ್ಚಾಗಿದ್ದರಂತೆ. ಪರಿಣಾಮ ಆಕ್ರೋಶಗೊಂಡ ಬೊಮ್ಮಾಯಿ, ಇದು ಒಕ್ಕೂಟ ವ್ಯವಸ್ಥೆಯ ಸೌಹಾರ್ದತೆಯನ್ನು ಹಾಳು ಮಾಡುತ್ತದೆ ಎಂದು ಎಚ್ಚರಿಸಿದ್ದರು.

ಆದರೆ, ಇದೀಗ ರಾಜ್ಯದ ಕಾಂಗ್ರೆಸ್ ನಾಯಕರು ಬೊಮ್ಮಾಯಿ ಅವರನ್ನು ಭ್ರಷ್ಟ ಅಂತ ಗುರುತಿಸುವ ಪೇಸಿಎಂ ಅಭಿಯಾನ ಆರಂಭಿಸಿ ಮುಜುಗರ ತಂದೊಡ್ಡಿದ್ದಾರೆ.

ಮುಖ್ಯಮಂತ್ರಿಗಳಾದವರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊಸತೇನಲ್ಲ. ವಿಧಾನಸೌಧ ನಿರ್ಮಾಣ ಮಾಡಿದ ಕೆಂಗಲ್ ಹನುಮಂತಯ್ಯ ಅವರಿಗೆ, ಈ ವಿಧಾನಸೌಧದ ನಿರ್ಮಾಣ ಕಾರ್ಯದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಸುತ್ತುವರಿದಿತ್ತು. ಮುಂದೆ ನಿಜಲಿಂಗಪ್ಪನವರು ಶರಾವತಿ ಕರ್ಮಕಾಂಡದ ಆರೋಪಕ್ಕೆ ಸಿಲುಕಿದರೆ, ರಾಮಕೃಷ್ಣ ಹೆಗಡೆಯವರನ್ನು ಬಾಟ್ಲಿಂಗ್ ಹಗರಣ, ರೇವಜಿತು ಹಗರಣಗಳು ಆವರಿಸಿದ್ದವು. ಅದೇ ರೀತಿ ಎಸ್. ಬಂಗಾರಪ್ಪ ಕ್ಲಾಸಿಕ್ ಕಂಪ್ಯೂಟರ್ ಹಗರಣದ ಆರೋಪವನ್ನು ಹೊತ್ತಿದ್ದರು. ಹೆಚ್.ಡಿ.ದೇವೇಗೌಡರು ಕೃಷ್ಣಾ ಮೇಲ್ದಂಡೆ ಯೋಜನೆಯ ತುಂಡು ಗುತ್ತಿಗೆ ಹಗರಣಕ್ಕೆ ಸಿಲುಕಿಕೊಂಡಿದ್ದರು.

ಬಿ.ಎಸ್.ಯಡಿಯೂರಪ್ಪ ಚೆಕ್ ರೂಪದಲ್ಲಿ ಲಂಚ ಪಡೆದರು ಎಂಬುದೂ ಸೇರಿದಂತೆ ಹಲವು ಆರೋಪಗಳಿಗೆ ಗುರಿಯಾದರೆ, ಸಿದ್ಧರಾಮಯ್ಯ ಅವರು ರೀ ಡೂ ಹಗರಣದ ಜಾಲಕ್ಕೆ ಸಿಲುಕಿದ್ದರು. ಆದರೆ, ಇಂತಹ ಎಲ್ಲ ಆರೋಪಗಳ ಹಿಂದೆ ಒಂದು ನಿರ್ದಿಷ್ಟ ವಿಷಯವಾದರೂ ಇತ್ತು. ಆದರೆ ಬಸವರಾಜ ಬೊಮ್ಮಾಯಿ ಅವರ ವಿರುದ್ಧದ ಪೇಸಿಎಂ ಆರೋಪಕ್ಕೆ ಒಂದು ನಿರ್ದಿಷ್ಟ ದಾಖಲೆಯೂ ಇಲ್ಲ. ಆದರೂ ಪೇಸಿಎಂ ವಿವಾದ ರಾಜ್ಯದ ಗಡಿದಾಟಿ, ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡುತ್ತಿದೆ.

ಹೋಗಲಿ ಇಂತಹ ಆರೋಪಕ್ಕೆ ಪುಷ್ಟಿ ನೀಡುವಂತಹ ಬೆಳವಣಿಗೆಗಳು ನಡೆದಿದ್ದರೆ ಅದರಲ್ಲಿ ಹಲವರ ಪಾತ್ರವಿದೆ. ಆದರೆ ಇದರ ಘಾಟನ್ನು ಮಾತ್ರ ಬಸವರಾಜ ಬೊಮ್ಮಾಯಿ ಅವರೊಬ್ಬರೇ ಅನುಭವಿಸುತ್ತಿದ್ದಾರೆ. ಹೀಗಾಗಿ ಯಾರ್ಯಾರದೋ ಆಟ, ತಮ್ಮ ತಲೆ ಮೇಲಷ್ಟೇ ಗೂಟ ಅಂತ ಬೊಮ್ಮಾಯಿ ಕೊರಗುವಂತಾಗಿದೆ.

ಬಿಜೆಪಿ ಪ್ರತ್ಯಸ್ತ್ರ ಠುಸ್: ಇದು ಲಿಂಗಾಯತರಿಗೆ ಮಾಡಿದ ಅಪಮಾನ ಅಂತ ಬಿಜೆಪಿ ಬಾಂಬು ಎಸೆದರೂ, ನೆಲಕ್ಕಪ್ಪಳಿಸುತ್ತಿದ್ದಂತೆಯೇ ಅದು ಠುಸ್ ಆಗಿದೆ. ಇನ್ನು ತಾವು ಬಯಸದ ಹಲವು ಬೆಳವಣಿಗೆಗಳು ನಡೆಯುತ್ತಿರುವುದು ಸಿಎಂ ಬಸವರಾಜ ಬೊಮ್ಮಾಯಿ ಅವರ ನೆಮ್ಮದಿಯನ್ನು ಕೆಡಿಸಿವೆ. ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಡುವಣ ಸಂಘರ್ಷ ಬಿಸಿತುಪ್ಪವಾಗಿ ಪರಿಣಮಿಸಿದೆ.

ಬಿಎಂಎಸ್ ಟ್ರಸ್ಟ್ ಸಾರ್ವಜನಿಕ ಟ್ರಸ್ಟ್ ಆಗಿದ್ದು, ಇದನ್ನು ಖಾಸಗಿ ಟ್ರಸ್ಟ್ ಆಗಿ ಪರಿವರ್ತಿಸುವ ಕೆಲಸಕ್ಕೆ ಅಶ್ವತ್ಥ ನಾರಾಯಣ ಅವರು ಕೈ ಹಾಕಿದ್ದಾರೆ. ಇದರಲ್ಲಿ ದೊಡ್ಡ ಮಟ್ಟದ ಕಿಕ್ ಬ್ಯಾಕ್ ಪಡೆಯಲಾಗಿದೆ ಎಂಬುದು ಕುಮಾರಸ್ವಾಮಿ ಅವರ ಆರೋಪ. ಅವರ ಆರೋಪಕ್ಕೆ ಪ್ರತಿಯಾಗಿ ಅಶ್ವತ್ಥನಾರಾಯಣ ಅವರು ಕೂಡಾ ದೊಡ್ಡ ಮಟ್ಟದಲ್ಲಿ ತಿರುಗಿ ಬಿದ್ದಿದ್ದಾರೆ.ಇತ್ತೀಚಿನ ದಿನಗಳಲ್ಲಿ ಅಶ್ವತ್ಥ ನಾರಾಯಣ ಅವರು ಎಲ್ಲರನ್ನೂ ಮೈ ಮೇಲೆ ಎಳೆದುಕೊಳ್ಳುತ್ತಿದ್ದಾರೆ. ಸ್ವಲ್ಪ ಸಾಫ್ಟ್ ಆಗಿ ಹೋದರೆ ನಿಭಾಯಿಸಬಹುದಾದ ವಿಷಯಗಳನ್ನು ಅಗ್ರೆಸಿವ್ ಆಗಿ ವರ್ತಿಸುವ ಮೂಲಕ ವೈರಿಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬಂದಿದೆ. ಆದರೆ ಅಶ್ವತ್ಥ ನಾರಾಯಣ ಅವರು ಇಡುತ್ತಿರುವ ಹೆಜ್ಜೆಯ ಹಿಂದೆ ಒಂದು ಟೆಕ್ನಿಕ್ಕು ಇದೆ.

ಬೆಳೆಯಬೇಕೆಂದರೆ ಎದುರು ಹಾಕಿಕೊಳ್ಳಲೇಬೇಕು: ಹಳೆ ಮೈಸೂರಿನಲ್ಲಿ ಒಕ್ಕಲಿಗ ನಾಯಕರಾಗಿ ತಾವು ಹೊರಹೊಮ್ಮಬೇಕಾದರೆ ದೇವೇಗೌಡರ ಕುಟುಂಬವನ್ನು ಎದುರು ಹಾಕಿಕೊಳ್ಳಲೇಬೇಕು ಎಂಬುದು ಈ ಟೆಕ್ನಿಕ್ಕು. ಹಿಂದೆ ಇಂತಹದೇ ಕಾರಣಗಳಿಗಾಗಿ ಅವರು ಡಿಕೆ ಪಾಳೇಪಟ್ಟಿನ ವಿರುದ್ಧ ತಿರುಗಿ ಬಿದ್ದಿದ್ದರು. ಆದರೆ ಕ್ರಮೇಣ ಡಿಕೆ ಪಾಳೇಪಟ್ಟಿನ ಮೇಲೆ ಬೀಳುವುದರಿಂದ ತುಂಬ ಲಾಭವಿಲ್ಲ ಎಂಬುದು ಅಶ್ವತ್ಥ ನಾರಾಯಣ ಅವರಿಗೆ ಮನವರಿಕೆ ಆಗಿದೆ.ಯಾಕೆಂದರೆ ಕನಕಪುರ ಬಿಟ್ಟರೆ ಉಳಿದ ಕಡೆ ಡಿಕೆ ಪಾಳೇಪಟ್ಟಿನ ವಿರುದ್ಧ ಕೂಗು ಹಾಕಿದರೆ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗುತ್ತಿಲ್ಲ. ವಿರೋಧದ ಧ್ವನಿಗಳು ಹೆಚ್ಚಿದ್ದರೆ ತಾನೇ ತಮ್ಮ ಪರವಾದ ಧ್ವನಿಗಳು ಮೇಲೆದ್ದು ನಿಲ್ಲುವುದು ಹೀಗಾಗಿ ಡಿಕೆ ಪಾಳೇಪಟ್ಟಿನ ವಿರುದ್ಧ ಕೂಗು ಹಾಕಿದರೆ ಒಕ್ಕಲಿಗ ನಾಯಕತ್ವಕ್ಕೆ ಲಗ್ಗೆ ಹಾಕುವ ತಮ್ಮ ಗುರಿ ಈಡೇರುವುದಿಲ್ಲ ಎಂಬುದು ಅಶ್ವತ್ಥ ನಾರಾಯಣ ಅವರ ಯೋಚನೆ.

ಆದರೆ, ಅದೇ ಕಾಲಕ್ಕೆ ಜೆಡಿಎಸ್ನ ಕುಮಾರಸ್ವಾಮಿ ಅವರ ವಿರುದ್ಧ ಕೂಗು ಹಾಕಿದರೆ ಹಳೆ ಮೈಸೂರಿನ ಎಲ್ಲ ಭಾಗಗಳಲ್ಲಿ ವಿರೋಧದ ಧ್ವನಿ ಕೇಳುತ್ತದೆ. ವಿರೋಧದ ಧ್ವನಿ ಇದ್ದಲ್ಲಿ ತಮ್ಮ ಪರವಾದ ಧ್ವನಿಗಳನ್ನು ಕ್ರೋಢೀಕರಿಸಿಕೊಳ್ಳಬಹುದು ಎಂಬುದು ಅಶ್ವತ್ಥ ನಾರಾಯಣ ಅವರಿಗೆ ಪಕ್ಕಾ ಆಗಿದೆ.

ಅಡ್ಜಸ್ಟ್ಮೆಂಟ್ ರಾಜಕಾರಣಕ್ಕೆ ಗೆಳೆಯರು ಜಾಸ್ತಿ ಇರಬಹುದು. ಆದರೆ ನಾಯಕತ್ವ ಬೇಕೆಂದರೆ ಅಗ್ರೆಸಿವ್ ರಾಜಕಾರಣ ಬೇಕೇ ಬೇಕು ಎಂಬುದು ಅಶ್ವತ್ಥ ನಾರಾಯಣ ಲೆಕ್ಕಾಚಾರ. ಆ ದೃಷ್ಟಿಯಿಂದ ನೋಡಿದರೆ ಅಶ್ವತ್ಥನಾರಾಯಣ ರಾಜ್ಯ ಬಿಜೆಪಿಯ ಪ್ರಮುಖ ಒಕ್ಕಲಿಗ ನಾಯಕರಾಗಿ ಹೊರಹೊಮ್ಮುವ ಕಾಲ ದೂರವಿದ್ದಂತೆ ಕಾಣುತ್ತಿಲ್ಲ.

ಅವರು ತಿರುಗಿಬಿದ್ದಿರುವುದರಿಂದ ಕುಮಾರಸ್ವಾಮಿ ಸಾಮ್ರಾಜ್ಯ ತಕ್ಷಣ ಅಲುಗಾಡುವುದಿಲ್ಲ. ಆದರೆ ಈ ಬೆಳವಣಿಗೆ ದೂರಗಾಮಿ ನೆಲೆಯಲ್ಲಿ ಅಶ್ವತ್ಥ ನಾರಾಯಣ ಅವರಿಗೆ ಲಾಭ ತಂದುಕೊಡಬಹುದು. ಆದರೆ ಇವತ್ತಿನ ದೃಷ್ಟಿಯಿಂದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕುಮಾರಸ್ವಾಮಿ ಹಾಗೂ ಅಶ್ವತ್ಥನಾರಾಯಣ ನಡುವಿನ ಕದನ ಬೇಕಾಗಿಲ್ಲ.2023 ರಲ್ಲಿ ಮೈತ್ರಿ ಸರ್ಕಾರ ರಚಿಸುವ ಸ್ಥಿತಿ ಬಂದರೆ ತಮಗೆ ಜೆಡಿಎಸ್ ಬೆಂಬಲ ಬೇಕೇ ಬೇಕು ಎಂಬುದು ಅವರ ಆಲೋಚನೆ. ಹೀಗಾಗಿ ಜೆಡಿಎಸ್ ಜತೆಗಿನ ಸಂಬಂಧವನ್ನು ಉಳಿಸಿಕೊಳ್ಳಲು ಅವರು ಹೆಣಗುತ್ತಿದ್ದಾರೆ. ಆದರೆ ಸನ್ನಿವೇಶ ಅವರಂದುಕೊಂಡಂತೆ ನಡೆಯಬೇಕಲ್ಲ ಅದು ತಾವು ಬಯಸಿದಂತೆ ನಡೆಯುತ್ತಿಲ್ಲ ಎಂಬುದೇ ಬಸವರಾಜ ಬೊಮ್ಮಾಯಿ ಅವರನ್ನು ಚಿಂತೆಗೀಡುಮಾಡಿದೆ.