ಮನೆ ಕಾನೂನು ಮುರುಘಾ ಮಠಕ್ಕೆ ಉಸ್ತುವಾರಿ ಸ್ವಾಮೀಜಿ ನೇಮಕ ಮಾಡಲು ಶಿವಮೂರ್ತಿ ಶರಣರಿಗೆ ಇದ್ದ ಅಧಿಕಾರವೇನು?: ಹೈಕೋರ್ಟ್ ಪ್ರಶ್ನೆ

ಮುರುಘಾ ಮಠಕ್ಕೆ ಉಸ್ತುವಾರಿ ಸ್ವಾಮೀಜಿ ನೇಮಕ ಮಾಡಲು ಶಿವಮೂರ್ತಿ ಶರಣರಿಗೆ ಇದ್ದ ಅಧಿಕಾರವೇನು?: ಹೈಕೋರ್ಟ್ ಪ್ರಶ್ನೆ

0

ಅಪ್ರಾಪ್ತೆಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಮುರುಘಾ ಶರಣರು ನ್ಯಾಯಾಂಗ ಬಂಧನದಲ್ಲಿದ್ದು, ಇವರು ಜೈಲಿಗೆ ಹೋಗುವ ಮುನ್ನ ಮಠಕ್ಕೆ ಉಸ್ತುವಾರಿ ಸ್ವಾಮೀಜಿಯನ್ನು ನೇಮಕ ಮಾಡಲು ಯಾವ ಅಧಿಕಾರ ಹೊಂದಿದ್ದರು ಮತ್ತು ಈ ದಿಸೆಯಲ್ಲಿ ಏನಾದರೂ ಲಿಖಿತ ನಿಯಮಗಳಿವೆಯೇ ಎಂದು ಕರ್ನಾಟಕ ಹೈಕೋರ್ಟ್ ಬುಧವಾರ ಮಠದ ಪರ ವಕೀಲರನ್ನು ಪ್ರಶ್ನಿಸಿದೆ.

ನಿವೃತ್ತ ಐಎಎಸ್ ಅಧಿಕಾರಿ ಪಿ ಎಸ್ ವಸ್ತ್ರದ ಅವರನ್ನು ಶ್ರೀ ಜಗದ್ಗುರು ಮುರುಘರಾಜೇಂದ್ರ (ಎಸ್’ಜೆಎಂ) ಬೃಹನ್ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಎಸ್’ಜೆಎಂ ವಿದ್ಯಾಪೀಠದ ಅಧ್ಯಕ್ಷ, ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಮತ್ತು ಭಕ್ತರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಜಯಕುಮಾರ್ ಎಸ್.ಪಾಟೀಲ ಅವರು “ಉಸ್ತುವಾರಿ ಸ್ವಾಮೀಜಿ ನೇಮಕ ಮಾಡುವ ಅಧಿಕಾರ ಪೀಠಾಧಿಪತಿಗೆ ಇದೆ. ಮುರುಘಾ ಶರಣರು ಜೈಲಿನಲ್ಲಿ ಇದ್ದರೂ ಅವರಿಂದ ನೇಮಕಗೊಂಡಿರುವ ಮಠದ ಉಸ್ತುವಾರಿ ಸ್ವಾಮೀಜಿ ಶಾಖಾ ಮಠದ ಮಠಾಧಿಪತಿಯೇ ಆಗಿದ್ದು, ಶರಣರಿಂದ ತಮ್ಮ ಹೆಸರಿಗೆ ಜಿಪಿಎ (ಸಾಮಾನ್ಯ ಅಧಿಕಾರ ಪತ್ರ) ಪಡೆದಿದ್ದಾರೆ. ಕಾನೂನು ಪ್ರಕಾರ ಇಂತಹ ಪತ್ರವನ್ನು ಜೈಲಿನಲ್ಲಿರುವ ವಿಚಾರಣಾಧೀನ ಬಂಧಿಯೂ ಕೊಡಬಹುದಾಗಿದೆ. ಇದರಿಂದ ಮಠ ಮತ್ತು ಅದರ ಆಸ್ತಿಗಳ ನಿರ್ವಹಣೆಗೆ ಯಾವುದೇ ಅನನುಕೂಲ ಆಗುವುದಿಲ್ಲ. ಹೀಗಾಗಿ, ಹೊರಗಿನಿಂದ ಬಂದ ಆಡಳಿತಾಧಿಕಾರಿಯು ಮಠದ ಆಂತರಿಕ ಆಡಳಿತ ನಡೆಸುವುದು ಕಾನೂನಿಗೆ ವಿರುದ್ಧ” ಎಂದು ಪ್ರಬಲವಾಗಿ ವಾದಿಸಿದರು.

“ರಾಜ್ಯ ಸರ್ಕಾರವು ಸಂವಿಧಾನದ 162ನೇ ವಿಧಿಯನ್ನು ಬಳಸಿ ಆಡಳಿತಾಧಿಕಾರಿ ನೇಮಕ ಮಾಡಿದೆ. ಧಾರ್ಮಿಕ ಪಂಥದ (ರಿಲಿಜಿಯಸ್ ಡಿನಾಮಿನೇಶನ್) ವ್ಯಾಪ್ತಿಯಲ್ಲಿ ಹಾಗೂ ಸಂವಿಧಾನದ 26ನೇ ವಿಧಿಯಡಿ ಮೂಲಭೂತ ಹಕ್ಕು ಕಲ್ಪಿಸಲಾಗಿದೆ. ಇದನ್ನು ಯಾವುದೇ ಕಾನೂನು ಅಡಿಯಲ್ಲಿ ನಿರ್ಬಂಧಿಸಲು ಆಗುವುದಿಲ್ಲ. ಒಂದು ವೇಳೆ ನಿರ್ಬಂಧ ಮಾಡಲೇಬೇಕು ಎಂದಾದರೆ ಅದು ಶಾಸಕಾಂಗ ರೂಪಿಸಿದ ಕಾನೂನೇ ಆಗಿರಬೇಕು. ಈ ಕೆಲಸವನ್ನು ಕಾರ್ಯಾಂಗ ಮಾಡಲಾಗದು” ಎಂದು ವಿವರಿಸಿದರು.

“ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದಂತೆ ಸಂವಿಧಾನದ 3ನೇ ಭಾಗ ಮತ್ತು 300–ಎ ವಿಧಿಯಡಿ ಯಾವುದಾದರೂ ನಿರ್ಬಂಧ ವಿಧಿಸಬೇಕಾದರೆ ಶಾಸಕಾಂಗ ರಚಿಸಿದ ಕಾನೂನಿನ ಅನ್ವಯದಿಂದ ಮಾತ್ರವೇ ಸಾಧ್ಯ. ಈ ಪ್ರಕರಣದಲ್ಲಿ ಆಡಳಿತಾಧಿಕಾರಿಯನ್ನು ನಿಯಮಿಸಿದ ಕಾರ್ಯಾಂಗದ ಕ್ರಮ ಸಂವಿಧಾನದಲ್ಲಿ ಕೊಡಮಾಡಿದ ಮೂಲಭೂತ ಹಕ್ಕುಗಳನ್ನು ವಿವರಿಸುವ 26ನೇ ವಿಧಿಗೆ ಸಂಪೂರ್ಣ ವಿರುದ್ಧ. ಆದ್ದರಿಂದ, ಆಡಳಿತಾಧಿಕಾರಿ ನೇಮಕ ಮಾಡಿರುವ ಸರ್ಕಾರದ ಆದೇಶವನ್ನು ಅಸಿಂಧು ಎಂದು ಘೋಷಿಸಬೇಕು” ಎಂದು ಮನವಿ ಮಾಡಿದರು.

“ಮುರುಘಾ ಮಠವು ವಿರಕ್ತ ಮಠವಾಗಿದ್ದು, ಇದನ್ನು ಹಿಂದೂ ಪದದ ವ್ಯಾಪ್ತಿಯಲ್ಲಿ ಅರ್ಥೈಸಲು ಸಾಧ್ಯವೇ” ಎಂಬ ನ್ಯಾಯಮೂರ್ತಿಗಳ ಪ್ರಶ್ನೆಗೆ ಜಯಕುಮಾರ್ ಪಾಟೀಲ್ ಅವರು “ಹಿಂದೂ ವಿವಾಹ ಕಾಯಿದೆ–1955, ಉತ್ತರಾಧಿಕಾರ ಕಾಯಿದೆ–1956, ನಿರ್ವಹಣೆ ಮತ್ತು ಪೋಷಕರ ಮಕ್ಕಳ ಕಾಯಿದೆಗಳ ಅನ್ವಯಿಕ ಸೆಕ್ಷನ್ಗಳಲ್ಲಿ ಹಿಂದೂ ಧರ್ಮ ಯಾರಿಗೆ ಅನ್ವಯ ಆಗುತ್ತದೆ ಎಂಬ ವಿವರಣೆಯನ್ನು ಗಮನಿಸಿದಾಗ; ವೀರಶೈವ, ಲಿಂಗಾಯತ ಪದಗಳನ್ನೂ ಉಲ್ಲೇಖ ಮಾಡಲಾಗಿದೆ. ಆದ್ದರಿಂದ, ಅಷ್ಟರ ಮಟ್ಟಿಗೆ ಮುರುಘಾಮಠ ರಿಲಿಜಿಯಸ್ ಡಿನಾಮಿನೇಶನ್ ವ್ಯಾಪ್ತಿಗೆ ಒಳಪಡುತ್ತದೆ. ಅದಾಗ್ಯೂ, ವೀರಶೈವ–ಲಿಂಗಾಯತ ಪದಗಳಲ್ಲಿ ತಾತ್ವಿಕ ಭಿನ್ನಾಭಿಪ್ರಾಯಗಳಿವೆ” ಎಂದು ವಿವರಿಸಿದರು.

ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ರಾಜ್ಯ ಸರ್ಕಾರದ ಪರವಾಗಿ ವಾದಿಸಲಿದ್ದು, ವಿಚಾರಣೆಯನ್ನು ಜನವರಿ 23ಕ್ಕೆ ಮುಂದೂಡಲಾಗಿದೆ.