ಮನೆ ರಾಜ್ಯ “ನಾನೇನು ಕ್ರೈಂ ಮಾಡಿದ್ದೀನಿ?” : ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ

“ನಾನೇನು ಕ್ರೈಂ ಮಾಡಿದ್ದೀನಿ?” : ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ

0

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ವಿರೋಧಪಕ್ಷಗಳಿಂದ ಆಗುತ್ತಿರುವ ಟೀಕೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಅವರು “ನಾನೇನು ಕ್ರೈಂ ಮಾಡಿದ್ದೀನಿ?” ಎಂದು ಪ್ರಶ್ನಿಸಿದ್ದಾರೆ.

ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಈ ಸಂದರ್ಭ, ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ದುರಂತದ ಕುರಿತು ಮಾತನಾಡಿದ ಅವರು, “ಆರ್‌ಸಿಬಿ ಆಟಗಾರರಿಗೆ ನಾನು ಕನ್ನಡ ಧ್ವಜ ಕೊಟ್ಟು ಸ್ವಾಗತ ಕೋರಿದ್ದೇನೆ. ಅದರಲ್ಲಿ ನಾನೇನು ತಪ್ಪು ಮಾಡಿದ್ದೀನಿ? ಅವರಿಗಾಗಿ ನಾನೇ ಕಾರು ವ್ಯವಸ್ಥೆ ಮಾಡಿಕೊಂಡು ಹೋದ್ವಿ. ಜಾಗವೇ ಇರಲಿಲ್ಲ, ಇದನ್ನೇ ಕ್ರೈಂ ಅನ್ನೋದು ತಕ್ಕುದೆ?” ಎಂದು ವಿರೋಧಪಕ್ಷಗಳ ವಿರೋಧಕ್ಕೆ ತಿರುಗೇಟು ನೀಡಿದರು.

ಈ ಪ್ರಕರಣದ ಬಗ್ಗೆ ಮಾಧ್ಯಮ ವರದಿಗಳ ಮೂಲಕವೇ ಸರ್ಕಾರಕ್ಕೆ ಮಾಹಿತಿ ದೊರಕಿದ್ದು, ನಂತರವೇ ಕ್ರಮಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. “ಸದನದಲ್ಲಿ ಎಲ್ಲವೂ ಕೇಳೋಣ. ಸಮಯ ಬಂದಾಗ ಇಡೀ ವಿಚಾರ ಚರ್ಚೆಗೆ ಬರುತ್ತದೆ” ಎಂದರು.

ಹೆಚ್.ಡಿ. ಕುಮಾರಸ್ವಾಮಿಗೆ ಟಾಂಗ್ ನೀಡಿದ ಡಿಕೆಶಿ, “ಡಾ.ರಾಜ್ ಕುಮಾರ್ ಅವರು ಮೃತಪಟ್ಟಾಗ ಏನಾಯ್ತು ಅಂತ ನಿಮಗೂ ಗೊತ್ತಿದೆ. ನಾನು ಡರ್ಟಿ ಪಾಲಿಟಿಕ್ಸ್ ಮಾಡಲ್ಲ” ಎಂದು ಹೇಳಿದರು. ವಿರೋಧಪಕ್ಷಗಳು ಈ ದುರಂತದ ಮೇಲೆ ರಾಜಕೀಯ ಮಾಡುತ್ತಿರುವುದನ್ನು ಖಂಡಿಸಿದ ಅವರು, “ಒಬ್ಬ ತಾಯಿ ‘ಪೋಸ್ಟ್ ಮಾರ್ಟಮ್ ಮಾಡಬೇಡಿ’ ಅಂತ ಕೇಳ್ತಿದ್ದಾಳೆ. ಎಷ್ಟು ಹೊಟ್ಟೆ ಉರಿಯಬೇಕು? ಎಂದು ಭಾವುಕರಾಗಿ ಹೇಳಿದರು.

“ಯಾರು ತಪ್ಪು ಮಾಡಿದರೂ ಸರಕಾರದ ಹೊಣೆ. ಇದು ನಮ್ಮ ಮನೆಯ ನೋವಾಗಿದೆ. ಸತ್ತವರ ಮೇಲೆ ರಾಜಕೀಯ ಮಾಡಬೇಡಿ” ಎಂದು ಭಾವುಕರಾದ ಅವರು, “ನಾವು ಕಣ್ಣೀರು ಹಾಕಿದ್ರೆ ಡ್ರಾಮಾ ಅಂತಾರೆ, ಅವರು ಹಾಕಿದರೆ ಏನು? ಚುನಾವಣಾ ಸಮಯದಲ್ಲಿ ಯಾವ ಜಿಲ್ಲೆಯಲ್ಲಿ ಏನಾಯ್ತು ಗೊತ್ತಿದೆ” ಎಂದು ಅವರು ತಿರುಗೇಟು ನೀಡಿದರು.

ಬಿಜೆಪಿ ಮತ್ತು ಜೆಡಿಎಸ್ ಜಂಟಿ ಹೋರಾಟದ ವಿಚಾರಕ್ಕೂ ವ್ಯಂಗ್ಯವಾಡಿದ ಡಿಕೆಶಿ, “ಇನ್ನು 10 ಜನ ಸೇರಿಸಿಕೊಂಡು ಹೋರಾಟ ಮಾಡಲಿ. ರಾಜಕೀಯಕ್ಕಿಂತ ಮಾನವೀಯತೆ ಮುಖ್ಯ” ಎಂದು ಹೋರಾಟಕ್ಕೆ ವಿವೇಚನೆಯ ಜವಾಬ್ದಾರಿ ನೀಡಿದರು.