ಮೈಸೂರು: ವಿಧಾನಸಭಾ ಚುನಾವಣೆ ಮತ ಎಣಿಕೆ ಕಾರ್ಯ ಮುಂದುವರೆದಿದ್ದು, ಕಾಂಗ್ರೆಸ್ ಪಕ್ಷ ಮುನ್ನಡೆ ಕಾಯ್ದಿರಿಸಿಕೊಂಡಿದೆ.
ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಈ ಕುರಿತು ಮಾತನಾಡಿರುವ ಅವರು, ಕಾಂಗ್ರೆಸ್ ಪಕ್ಷ ನಮ್ಮ ಲೆಕ್ಕಚಾರದಂತೆ ಮುನ್ನಡೆಯನ್ನು ಸಾಧಿಸಿದೆ. 120ಕ್ಕೂ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ. ನಾವು ಬಿಜೆಪಿಗೆ 65-70 ಬರಬಹುದು ಎಂದು ಕೊಂಡಿದ್ದೆವು. ಜೆಡಿಎಸ್ 25-26 ಬರುತ್ತೆ ಎಂದಿದ್ವಿ. ಅದೇ ರೀತಿ ಇದೆ ಎಂದು ಹೇಳಿದರು.
ಕಾಂಗ್ರೆಸ್ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರುತ್ತೆ. ಇನ್ನು ವರುಣದಲ್ಲೂ ಲೀಡ್ ಇದೆ. ಸೋಮಣ್ಣ ಎರಡೂ ಕ್ಷೇತ್ರದಲ್ಲೂ ಸೋಲುತ್ತಾರೆ ಎಂದರು.
ನರೇಂದ್ರ ಮೋದಿ, ಅಮಿತ್ ಶಾ ಎಷ್ಟೇ ಬಾರಿ ರಾಜ್ಯಕ್ಕೆ ಬಂದರೂ ಕರ್ನಾಟಕದ ಮತದಾರರ ಮೇಲೆ ಅದು ಯಾವುದೇ ಪರಿಣಾಮ ಬೀರಲ್ಲ. ಏಕೆಂದರೆ ಜನರು ಬೇಸತ್ತಿದ್ದಾರೆ. ಬಿಜೆಪಿಯ ಭ್ರಷ್ಟಾಚಾರ, ದುರಾಡಳಿತ, ಅವರ ಜನ ವಿರೋಧಿ ನೀತಿ, ಅಭಿವೃದ್ಧಿ ಇಲ್ಲದಿರುವುದರಿಂದ ಬೇಸತ್ತಿದ್ದಾರೆ. ಹೀಗಾಗಿ ಜನರು ಬದಲಾವಣೆ ಬಯಸುತ್ತಿದ್ದಾರೆ. ಅದೇ ರೀತಿ ಜನ ತೀರ್ಪು ಕೊಟ್ಟಿದ್ದಾರೆ ಎಂದು ನನಗೆ ಅನಿಸುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು.