ವಿಶೇಷ ಫ್ರಾಂಟಿಯರ್ ಫೋರ್ಸ್‌ನ (ಎಸ್ಎಫ್ಎಫ್) ಉಳಿತಾಯ ಯೋಜನೆ ಠೇವಣಿ (ಎಸ್ಎಸ್ಡಿ) ನಿಧಿಯನ್ನು ಮೂರು ದಶಕಗಳಿಂದ ಪಾವತಿಸಿದ ವ್ಯಕ್ತಿಗಳಿಗೆ ಪಿಂಚಣಿ ಸೌಲಭ್ಯ ಸೇರಿ 6ನೇ ಕೇಂದ್ರ ವೇತನ ಆಯೋಗದ ಸವಲತ್ತುಗಳನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದೆ .
ಎಸ್ಎಸ್ಡಿ ನಿಧಿ ಉದ್ಯೋಗಿಗಳ ನೇಮಕಾತಿ, ಆಯ್ಕೆ ಮತ್ತು ಬಡ್ತಿ ಪ್ರಕ್ರಿಯೆಗಳು ಸಾಮಾನ್ಯ ಉದ್ಯೋಗಿಗಳಿಗೆ ಬಳಸುವ ಕಾರ್ಯವಿಧಾನಗಳಿಗೆ ಅನುಗುಣವಾಗಿಲ್ಲ ಎಂಬ ಕೇಂದ್ರದ ನಿಲುವನ್ನು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ತಿರಸ್ಕರಿಸಿತು.
ಮೂರು ದಶಕಗಳ ವಿಸ್ತೃತ ಅವಧಿಯಲ್ಲಿ ಅವರ ಉದ್ಯೋಗದ ವಸ್ತುನಿಷ್ಠ ಸ್ವರೂಪವನ್ನು ಗಣನೆಗೆ ತೆಗೆದುಕೊಳ್ಳಲು ಕೇಂದ್ರದ ವಾದ ವಿಫಲವಾಗಿದೆ ಎಂದು ನ್ಯಾಯಾಲಯ ತರ್ಕಿಸಿತು.
ಅವರನ್ನು ತಾತ್ಕಾಲಿಕ ಉದ್ಯೋಗಿಗಳೆಂದು ವರ್ಗೀಕರಿಸಿದರೂ ಅವರ ಉದ್ಯೋಗ ನಿಯಮಿತ ಸರ್ಕಾರಿ ಸೇವೆಯ ಬಹುಪಾಲು ಲಕ್ಷಣಗಳನ್ನು ಒಳಗೊಂಡಿರುವುದನ್ನು ಪ್ರಸ್ತುತ ಪ್ರಕರಣದ ಒಟ್ಟು ಸನ್ನಿವೇಶ ಹೇಳುತ್ತದೆ ಎಂದು ನ್ಯಾಯಾಲಯ ನುಡಿದಿದೆ.
“ಈ ಅಂಶಗಳನ್ನು ಪರಿಗಣಿಸದೆ ಕೇವಲ ಅವರ ತಾತ್ಕಾಲಿಕ ಹುದ್ದೆಯನ್ನು ಆಧರಿಸಿ ಪಿಂಚಣಿ ಸವಲತ್ತುಗಳನ್ನು ನಿರಾಕರಿಸುವುದು ಸರ್ಕಾರದೊಂದಿಗಿನ ಅವರ ಉದ್ಯೋಗ ಸಂಬಂಧವನ್ನು ವಿಪರೀತ ಸರಳಗೊಳಿಸಿರುವಂತೆ ತೋರುತ್ತದೆ. ಈ ವಿಧಾನವು ಸಾಮಾನ್ಯ ಉದ್ಯೋಗಿಗಳಿಗಿಂತಲೂ ಬೇರೆಯಲ್ಲದ ರೀತಿಯಲ್ಲಿ ದಶಕಗಳ ಕಾಲ ಸರ್ಕಾರಕ್ಕೆ ಸೇವೆ ಸಲ್ಲಿಸುತ್ತಿದ್ದರೂ, ಸರ್ಕಾರಿ ನೌಕರರಿಗೆ ಸಾಮಾನ್ಯವಾಗಿ ನೀಡಲಾಗುವ ಸವಲತ್ತುಗಳು ಮತ್ತು ರಕ್ಷಣೆಗಳಿಂದ ವಂಚಿತರಾಗಿರುವ ನೌಕರರ ಪ್ರತ್ಯೇಕ ವರ್ಗವನ್ನು ಸೃಷ್ಟಿಸುವ ಅಪಾಯ ಉಂಟಾಗುತ್ತದೆ” ಎಂದು ಅದು ಹೇಳಿದೆ.
ಎಸ್ಎಸ್‌ಡಿ ನಿಧಿ ಉದ್ಯೋಗಿಗಳ ವಿಷಯದಲ್ಲಿ ಕೇಂದ್ರೀಯ ಆಡಳಿತ ನ್ಯಾಯಮಂಡಳಿ (CAT) ಅಕ್ಟೋಬರ್ 2016ರಲ್ಲಿ ನೀಡಿದ್ದ ತೀರ್ಪನ್ನು ಎತ್ತಿಹಿಡಿದ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ.
ಮೇಲ್ಮನವಿದಾರರು ಸಾಮಾನ್ಯ ಉದ್ಯೋಗಿಗಳಂತೆಯೇ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ನ್ಯಾಯಾಲಯ ನಿರ್ಧರಿಸಿದ್ದು ಅಂತಹ ಹೋಲಿಕೆಯು ಅವರ ಸ್ಥಾನಮಾನ ಮತ್ತು ಸಾಮಾನ್ಯ ಸರ್ಕಾರಿ ನೌಕರರ ನಡುವಿನ ಗೆರೆಯನ್ನು ಇನ್ನಷ್ಟು ಮಸುಕುಗೊಳಿಸುತ್ತದೆ ಎಂದು ಹೇಳಿತು.
ಆದರೂ ತನ್ನ ತೀರ್ಪುಮೇಲ್ಮನವಿದಾರರ ಬ್ಯಾಚ್ನ ತಾತ್ಕಾಲಿಕ ಉದ್ಯೋಗಿಗಳಿಗೆ ಸೀಮಿತವಾಗಿದ್ದು, ಎಸ್ಎಸ್ಡಿಯ ಆರ್ಥಿಕ ಸ್ಥಿತಿಗತಿ ಮೇಲೆ ಹಾನಿಕಾರಕ ಪರಿಣಾಮ ಬೀರುವ ಪೂರ್ವನಿದರ್ಶನ ಹೊಂದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.