ನವದೆಹಲಿ (New Delhi)- ‘ಧರ್ಮ ಸಂಸತ್ ಎಂದರೇನುʼ ಎಂದು ವಕೀಲರಿಗೆ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಹರಿದ್ವಾರದ ಧರ್ಮ ಸಂಸತ್ ಪ್ರಕರಣದಲ್ಲಿ ಬಂಧಿತನಾಗಿದ್ದ ಜಿತೇಂದ್ರ ತ್ಯಾಗಿಗೆ ಜಾಮೀನು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಎತ್ತಿಕೊಂಡಿದೆ.
ಈ ವೇಳೆ ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ವಿಕ್ರಮ್ ನಾಥ್ ಅವರನ್ನು ಒಳಗೊಂಡ ಪೀಠವು ತ್ಯಾಗಿ ಪರ ವಕೀಲ ಸಿದ್ಧಾರ್ಥ್ ಲೂತ್ರಾ ಅವರಿಗೆ ‘ಧರ್ಮ ಸಂಸತ್ ಎಂದರೇನು’ ಎಂದು ಪ್ರಶ್ನಿಸಿತು.
ಧಾರ್ಮಿಕ ಕಾರ್ಯಕ್ರಮಗಳ ಮೂಲಕ ದ್ವೇಷಪೂರಿತ ಭಾಷಣಗಳನ್ನು ಮಾಡಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದಲ್ಲದೆ, ಧರ್ಮ ಸಂಸತ್‌ನಂತಹ ಕಾರ್ಯಕ್ರಮಗಳು ನೆಮ್ಮದಿಯ ವಾತಾವರಣವನ್ನು ಹಾಳು ಮಾಡುತ್ತಿವೆ ಎಂದೂ ಕಿಡಿಕಾರಿತು.
ಜನರು ಶಾಂತಿಯುತವಾಗಿ ಬದುಕಲು ಜಾಗೃತಿ ಮೂಡಿಸುವ ಅಗತ್ಯವಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಷಣ ಮಾಡುವವರು ಸಂವೇದನಾಶೀಲರಾಗಿಲ್ಲ. ಅವರಿಂದ ನೆಮ್ಮದಿಯ ವಾತಾವರಣ ಹಾಳಾಗುತ್ತಿದೆ. ಜನರು ಶಾಂತಿಯುತವಾಗಿ ಒಟ್ಟಿಗೆ ಇರಬೇಕು. ಜೀವನವನ್ನು ಆನಂದಿಸಬೇಕು ಎಂದು ಪೀಠ ಹೇಳಿತು.
ʻಜನಾಂಗೀಯ ಶುದ್ಧೀಕರಣಕ್ಕಾಗಿ ಮುಸ್ಲಿಮರ ನರಮೇಧ ನಡೆಸಬೇಕುʼ ಎಂದು ಜಿತೇಂದ್ರ ತ್ಯಾಗಿ ಕರೆ ಕೊಟ್ಟಿದ್ದ. ಈ ‘ದ್ವೇಷ ಭಾಷಣ’ದ ವಿರುದ್ಧ ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಬೇಕು ಎಂದು ಕೆಲವು ಹಿರಿಯ ವಕೀಲರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರಿಗೆ ಮನವಿ ಮಾಡಿದ್ದರು.