ಮನೆ ರಾಜ್ಯ ರಾಜ್‌ಕುಮಾರ್ ತೀರಿಕೊಂಡಾಗ ನಾಲ್ಕು ಜನರ ಮೇಲೆ ಗುಂಡೇಟು: ಆಗ ಕುಮಾರಸ್ವಾಮಿ ರಾಜೀನಾಮೆ ಕೊಟ್ಟರಾ? : ಶಾಸಕ...

ರಾಜ್‌ಕುಮಾರ್ ತೀರಿಕೊಂಡಾಗ ನಾಲ್ಕು ಜನರ ಮೇಲೆ ಗುಂಡೇಟು: ಆಗ ಕುಮಾರಸ್ವಾಮಿ ರಾಜೀನಾಮೆ ಕೊಟ್ಟರಾ? : ಶಾಸಕ ಬೇಳೂರು ಗೋಪಾಲಕೃಷ್ಣ

0

ಬೆಂಗಳೂರು: ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದ ನಂತರ ಸಿಎಂ ಮತ್ತು ಡಿಸಿಎಂ ರಾಜೀನಾಮೆಗೆ ಆಗ್ರಹಿಸುತ್ತಿರುವ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿಗೆ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ತಿರುಗೇಟು ನೀಡಿದ್ದಾರೆ. ‘‘ನಾಚಿಕೆ ಇಲ್ಲದೆ ರಾಜೀನಾಮೆ ಕೇಳುತ್ತಿದ್ದೀರಿ” ರಾಜ್‌ಕುಮಾರ್ ತೀರಿಕೊಂಡಾಗ ನಾಲ್ಕು ಜನರ ಮೇಲೆ ಗುಂಡು ಹಾರಿಸಿದರು. ಆಗ ಕುಮಾರಸ್ವಾಮಿ ರಾಜೀನಾಮೆ ಕೊಟ್ಟಿದ್ರಾ?’’ ಎಂದು ಪ್ರಶ್ನಿಸಿದರು.

ಶಾಸಕ ಬೇಳೂರು ಗೋಪಾಲಕೃಷ್ಣ ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಡಾ. ರಾಜ್‌ಕುಮಾರ್ ಅವರ ನಿಧನವಾದ ಸಂದರ್ಭದಲ್ಲಿ ರಾಜ್ಯದಲ್ಲಿ ಭಾರಿ ಗೊಂದಲ ಉಂಟಾದ ಸಮಯವನ್ನು ಸ್ಮರಿಸಿದರು. ‘‘ಕಂಠೀರವ ಸ್ಟುಡಿಯೋದಲ್ಲೇ ನಾನು ಇದ್ದೆ. ಗುಂಡೇಟು ನಡೆದರೂ ಕುಮಾರಸ್ವಾಮಿ ರಾಜೀನಾಮೆ ಕೊಟ್ಟಿಲ್ಲ. ಹಾಗೆಂದರೆ ಈಗ ಏಕೆ ರಾಜೀನಾಮೆ ಕೇಳ್ತಿದೀರಾ?’’ ಎಂದು ಪ್ರತ್ಯುತ್ತರ ನೀಡಿದರು.

ಇದಲ್ಲದೆ, ಹಾವೇರಿ ಘಟನೆಯಲ್ಲಿಯೂ ರೈತರ ಮೇಲೆ ಬಿಎಸ್‌ವೈ ಅವರೇ ಗೋಲಿಬಾರ್ ಮಾಡಿಸಿದ್ದನ್ನು ನೆನಪಿಸಿ, ಅವರು ರಾಜೀನಾಮೆ ನೀಡಿದರಾ? ಎಂದು ಕೇಳಿದರು. ‘‘ಪಹಲ್ಗಾಮ್ ಉಗ್ರ ದಾಳಿಯಲ್ಲಿ 26 ಮಂದಿ ಮೃತಪಟ್ಟರು. ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತದಲ್ಲಿ ಹಲವರು ಸಾವನ್ನಪ್ಪಿದರು. ಮೋದಿ ಮತ್ತು ಅಮಿತ್ ಶಾ ಅವರು ರಾಜೀನಾಮೆ ಕೊಟ್ಟಿದ್ರಾ?’’ ಎಂಬ ಪ್ರಶ್ನೆಗಳನ್ನು ಸರದಿಯಿಂದ ಎತ್ತಿದರು.

‘‘ಮೊದಲು ಮೋದಿ, ಶಾ ರಾಜೀನಾಮೆ ಕೊಟ್ಟರೆ ನಾವೂ ಸಿಎಂ ಮತ್ತು ಡಿಸಿಎಂ ರಾಜೀನಾಮೆ ಕೊಡಿಸುತ್ತೇವೆ. ಅವರಿಗೆ ಇಂಥ ತಾಕತ್ತು ಇದ್ಯಾ? ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡುವ ಪ್ರಯತ್ನಗಳನ್ನೇ ಬಿಜೆಪಿ ಮಾಡುತ್ತಿದೆ’’ ಎಂದರು.

‘‘ಈ ಘಟನೆ ಆಗಬಾರದಿತ್ತು, ಆದರೆ ಸಂಭವಿಸಿದೆ. ಸರ್ಕಾರ ಕೂಡಲೇ ಕ್ರಮ ತೆಗೆದುಕೊಂಡಿದೆ. ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ, ಸಿಎಂ ರಾಜಕೀಯ ಕಾರ್ಯದರ್ಶಿಯನ್ನು ವಜಾ ಮಾಡಲಾಗಿದೆ. ಇವೆಲ್ಲಾ ಉದ್ದೇಶಪೂರ್ವಕವಲ್ಲ, ಆಕಸ್ಮಿಕ ಘಟನೆಗಳು’’ ಎಂದು ಹೇಳಿದರು.

‘‘ಪ್ರಸ್ತುತ ಪ್ರತಿ ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಆದರೆ ಇದು ಸಾಕಾಗದು. ಕನಿಷ್ಠ 50 ಲಕ್ಷ ರೂಪಾಯಿಯನ್ನು ಪರಿಹಾರವಾಗಿ ಕೊಡಬೇಕು. ಈ ಬಗ್ಗೆ ನಾನು ಸರ್ಕಾರದ ಗಮನ ಸೆಳೆಯುತ್ತೇನೆ’’ ಎಂದು ಹೇಳಿದರು.

‘‘ಸತ್ತವರ ಕುಟುಂಬಸ್ಥರ ನೋವನ್ನು ರಾಜಕೀಯ ಮುತ್ತಿಗೆ ಹಾಕಲು ಬಿಜೆಪಿಯವರು ಯತ್ನಿಸುತ್ತಿದ್ದಾರೆ. ಕುಂಭಮೇಳದಲ್ಲಿ ಎಷ್ಟು ಜನ ಸತ್ತರು? ಆಗ ಯಾರು ರಾಜೀನಾಮೆ ಕೊಟ್ಟರು? ಇಂತಹ ಘಟನೆಗಳನ್ನು ಬಳಸಿಕೊಂಡು ರಾಜಕೀಯ ಮಾಡುವುದು ಸರಿಯಲ್ಲ. ಜನರ ಮನಸ್ಸಿನಲ್ಲಿ ಬೆಂಕಿ ಹಚ್ಚಬಾರದು’’ ಎಂದು ತಾಕೀತು ಮಾಡಿದರು.