ಮನೆ ರಾಜ್ಯ ಕಾಮಗಾರಿಗಾಗಿ ಭೂಮಿ ಅಗೆದಾಗ 4 ಕಮಾನುಗಳ ಕಟ್ಟಡ ಪತ್ತೆ

ಕಾಮಗಾರಿಗಾಗಿ ಭೂಮಿ ಅಗೆದಾಗ 4 ಕಮಾನುಗಳ ಕಟ್ಟಡ ಪತ್ತೆ

0

ರಾಮನಗರ (Ramnagara): ಕಾಮಗಾರಿಗಾಗಿ ಭೂಮಿ ಅಗೆಯುತ್ತಿದ್ದ ವೇಳೆ ನೆಲ ಮಟ್ಟದಲ್ಲಿ ಕಟ್ಟಡದ ಅವಶೇಷಗಳು ಪತ್ತೆ ಆಗಿದೆ.  ನಗರದ ರೈಲು ನಿಲ್ದಾಣದ ರಸ್ತೆಯಲ್ಲಿ ಯುಕೋ ಬ್ಯಾಂಕ್ ಪಕ್ಕದ ಸ್ಥಳದಲ್ಲಿ ಅವಶೇಷ ಪತ್ತೆಯಾಗಿದೆ.

ಬ್ಯಾಂಕ್ ಪಕ್ಕದ ನಿವೇಶನದಲ್ಲಿ ಹಿಂದೆ ಹೆಂಚಿನ ಮನೆಗಳನ್ನು ಕೆಡವಿ ಅಂಗಡಿ ಮಳಿಗೆ ನಿರ್ಮಿಸಲಾಗಿತ್ತು. ಈಗ ಅಂಗಡಿ ಮಳಿಗೆ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣ ಕಾರ್ಯಕ್ಕೆ ನಿವೇಶನದ ಮಾಲೀಕರು ಮುಂದಾಗಿದ್ದರು. ಇದಕ್ಕಾಗಿ ಜೆಸಿಬಿ ಯಂತ್ರದ ಸಹಾಯದಿಂದ ಪಿಲ್ಲರ್ ನಿರ್ಮಾಣಕ್ಕೆ ಭೂಮಿ ಅಗೆಯುತ್ತಿದ್ದ ವೇಳೆ ನೆಲಮಟ್ಟದಲ್ಲಿ ಗಟ್ಟಿಯಾದ ಗೋಡೆ ಸಿಕ್ಕಿದೆ. ಈ ವೇಳೆ ಗೋಡೆಯನ್ನು ಕೊರೆದು ನೋಡಿದಾಗ ಒಳ ಭಾಗದಲ್ಲಿ ನಾಲ್ಕು ಕಮಾನುಗಳ ಕಟ್ಟಡ ಕಾಣಿಸಿಕೊಂಡಿದೆ.

ಕಟ್ಟಡದ ಮಧ್ಯ ಭಾಗದಲ್ಲಿ ಈ ಕಮಾನುಗಳಿದ್ದು, ನಾಲ್ಕು ಭಾಗವೂ ಗೋಡೆಯಿಂದ ಆವೃತವಾಗಿದೆ. ಇದು ಶ್ರೀರಂಗಪಟ್ಟಣದಲ್ಲಿ ಇರುವ ಟಿಪ್ಪು ಕಾಲದ ಶಸ್ತ್ರಾಗಾರ ಮಾದರಿಯಲ್ಲಿ ಇದೆ. ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಮಂದಿ ಸ್ಥಳಕ್ಕೆ ಭೇಟಿ ನೀಡಿ ಕುತೂಹಲದಿಂದ ವೀಕ್ಷಿಸಿದರು. ಪೊಲೀಸರೂ ಸ್ಥಳ ಪರಿಶೀಲನೆ ನಡೆಸಿದರು.

ಕಟ್ಟಡ ಮಾಲೀಕ ನವಾಜ್ ಅಹಮ್ಮದ್ ಮಾತನಾಡಿ, ನಮ್ಮ ಬಳಿಯಿರುವ ನಿವೇಶನದ ಪತ್ರದ ಪ್ರಕಾರ 1932ರಲ್ಲಿ ಇಲ್ಲೊಂದು ವಾಟರ್ ಟ್ಯಾಂಕ್ ಇತ್ತು ಎಂದು ಉಲ್ಲೇಖವಾಗಿದೆ. 1965-67ರಲ್ಲಿ ಅಬ್ದುಲ್ ಅಜೀಂರವರು ಹರಾಜಿನಲ್ಲಿ ಪುರಸಭೆಯಿಂದ ಖರೀದಿಸಿದ್ದರು. ಅವರು ಜಾಗವನ್ನು ಬೇರೊಬ್ಬರಿಗೆ ಗಿಫ್ಟ್ ಮಾಡಿದ್ದರು. 2009ರಲ್ಲಿ ನಾವು ಖರೀದಿ ಮಾಡಿದೆವು ಎಂದು ಹೇಳಿದರು.