ಮನೆ ರಾಜಕೀಯ ಮಹಾರಾಷ್ಟ್ರ ಗಡಿ ವಿಮೆ ಕ್ಯಾತೆ; ಡಬಲ್ ಎಂಜಿನ್ ಸರಕಾರದ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಕಿಡಿ

ಮಹಾರಾಷ್ಟ್ರ ಗಡಿ ವಿಮೆ ಕ್ಯಾತೆ; ಡಬಲ್ ಎಂಜಿನ್ ಸರಕಾರದ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಕಿಡಿ

0

ಬೆಂಗಳೂರು: ರಾಜ್ಯದ ಗಡಿ ಹಳ್ಳಿಗಳ ಜನರಿಗೆ ವಿಮಾ ಯೋಜನೆ ಜಾರಿ ಮಾಡುವ ಮಹಾರಾಷ್ಟ್ರ ಸರಕಾರದ ವಿವಾದಾಸ್ಪದ ಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Our Whatsapp Group

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು; ಮಹಾರಾಷ್ಟ್ರದ ನಡೆ ಹಾಗೂ ಕೇಂದ್ರ ಸರಕಾರದ ಮೌನ ಒಕ್ಕೂಟ ವ್ಯವಸ್ಥೆಯ ಒಡಕಿಗೆ ಕಾರಣವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದಲ್ಲಿರುವ ಬಿಜೆಪಿ ಡಬಲ್ ಎಂಜಿನ್ ಸರಕಾರ ಪದೇ ಪದೆ ಕಾಲುಕೆರೆದು ಕಿತಾಪತಿ ಮಾಡುತ್ತಿದೆ. ಚೀನಾ ಮನಸ್ಥಿತಿಯ ಆ ರಾಜ್ಯವು ಕರ್ನಾಟಕವನ್ನು ಶತ್ರು ದೇಶದಂತೆ ನೋಡುತ್ತಿದೆ. ಕೇಂದ್ರ ಬಿಜೆಪಿ ಸರಕಾರ ಇದೆಲ್ಲಾ ನೋಡಿಕೊಂಡು ಮೌನವಾಗಿದೆ, ಒಕ್ಕೂಟ ವ್ಯವಸ್ಥೆಯ ಅವಸಾನಕ್ಕೆ ಇದೇ ಕಾರಣವಾಗಬಹುದು ಎಂದು ಮಾಜಿ ಮುಖ್ಯಮಂತ್ರಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಒಂದಲ್ಲ ಎರಡಲ್ಲ, ಪ್ರತಿಯೊಂದು ವಿಷಯದಲ್ಲೂ ಮಹಾರಾಷ್ಟ್ರವು ಕರ್ನಾಟಕವನ್ನು ಕೆರಳಿಸುತ್ತದೆ. ರಾಜ್ಯದ ಗಡಿ ಒಳಗಿರುವ 865 ಗ್ರಾಮಗಳ ಜನರಿಗೆ ಆರೋಗ್ಯ ವಿಮೆ ಜಾರಿ ಮಾಡಿದ ಆ ರಾಜ್ಯ ಸರಕಾರದ ನಡೆ ಒಕ್ಕೂಟ ವ್ಯವಸ್ಥೆಯನ್ನು ಒಡೆಯುವ ನೇರ, ಧೂರ್ತ ಪ್ರಯತ್ನ ಎಂದು ಅವರು ಕಿಡಿಕಾರಿದ್ದಾರೆ.

ಮಹಾರಾಷ್ಟ್ರ ಒಕ್ಕೂಟ ವ್ಯವಸ್ಥೆಯ ಎಲ್ಲೆಗಳನ್ನು ಮೀರಿ ಅಹಂಕಾರದಿಂದ ವರ್ತಿಸುತ್ತಿದೆ. ಕೇಂದ್ರದ ಬಿಜೆಪಿ ಸರಕಾರ ಶಿಂಧೆ ಸೂತ್ರದ ರಾಜಕಾರಣಕ್ಕೆ ಕರ್ನಾಟಕವನ್ನು ಬಲಿ ಕೊಡಲು ಹೊರಟಿದೆಯಾ? ಎನ್ನುವ ಅನುಮಾನ ನನ್ನದು. ಇಲ್ಲವಾದರೆ, ಮಹಾರಾಷ್ಟ್ರ ಈ ಪರಿಯ ಉದ್ಧಟತನ ತೋರುತ್ತಿದ್ದರೂ ಮೋದಿ ಸರಕಾರದ ಮೌನವೇಕೆ? ಎಂದು ಮಾಜಿ ಮುಖ್ಯಮಂತ್ರಿಗಳು ಪ್ರಶ್ನಿಸಿದ್ದಾರೆ.

ಕರ್ನಾಟಕದಲ್ಲಿ ಇಡೀ ಭಾರತವೇ ಅಡಗಿದೆ. ಕಾಶ್ಮೀರದಿಂದ ಕನ್ಯಾಕಮಾರಿಯವರೆಗೆ, ಗುಜರಾತಿನಿಂದ ಒಡಿಶಾವರೆಗೆ ಎಲ್ಲ ಕಡೆಯಿಂದಲೂ ಅನ್ನ ಅರಸಿಕೊಂಡು ಬಂದವರಿಗೆ ಆಶ್ರಯ ನೀಡಿದೆ. ಆ ಅನ್ನಕ್ಕೆ ಮಣ್ಣು ಹುಯ್ಯುವ ಹೀನ ಕೆಲಸವನ್ನು ಮಹಾರಾಷ್ಟ್ರ ಎಗ್ಗಿಲ್ಲದೆ ಮಾಡುತ್ತಿದೆ. ಕನ್ನಡಿಗರು ಸುಮ್ಮನಿರುವ ಕಾಲ ಮುಗಿದಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಭಾರತ ಸ್ವತಂತ್ರ್ಯಗೊಂಡಾಗ ಎಲ್ಲರಿಗಿಂತ ಮೊದಲೇ ಒಕ್ಕೂಟ ವ್ಯವಸ್ಥೆಗೆ ಒಳಪಟ್ಟವರು ನಾವು. ನಮ್ಮ ಉದಾರತೆಯೇ ನಮಗೆ ಇಂದು ಮುಳುವಾಗಿದೆಯಾ? ನೆಲ, ಜಲ, ಭಾಷೆ, ಅನುದಾನ ಸೇರಿ ಪ್ರತಿ ವಿಷಯದಲ್ಲೂ ಕನ್ನಡಿಗರು ಮಲತಾಯಿ ಮಕ್ಕಳಾಗಿದ್ದಾರೆ!! ಇನ್ನೆಷ್ಟು ದಿನ ಈ ಅನ್ಯಾಯ? ಎಂದು ಅವರು ಕೇಳಿದ್ದಾರೆ.