ಬೆಂಗಳೂರು(Bengaluru): ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಕಸ ತಂದು ಸುರಿದು ಮಾಲಿನ್ಯ ಉಂಟು ಮಾಡುವವರ ಮಾಹಿತಿ ನೀಡಿದರೆ ಬಿಬಿಎಂಪಿಯಿಂದ ಪ್ರಶಂಸಾ ಪತ್ರ(ಅಪ್ರಿಸಿಯೇಷನ್ ಸರ್ಟಿಫಿಕೇಟ್) ಸಿಗಲಿದೆ.
ಕಂಡಕಂಡಲ್ಲಿ ಕಸ, ತ್ಯಾಜ್ಯ ಎಸೆಯುವುದರಿಂದ ನಗರದ ರಸ್ತೆಗಳು ಗಬ್ಬು ನಾರುತ್ತಿವೆ. ಈಗಾಗಲೇ ದಂಡ ಪ್ರಯೋಗ, ಮಾರ್ಷಲ್ಗಳು ಎಚ್ಚರಿಕೆ ನೀಡಿದರೂ ಸಾರ್ವಜನಿಕರು ಅಸಡ್ಡೆ ತೋರುತ್ತಿದ್ದಾರೆ. ಹೀಗಾಗಿ ಬಿಬಿಎಂಪಿ ಹೊಸ ಪ್ರಯೋಗಕ್ಕೆ ಮುಂದಾಗಿದೆ.
ಸಿಲಿಕಾನ್ ಸಿಟಿಯಲ್ಲಿ 1500ಕ್ಕೂ ಅಧಿಕ ರಸ್ತೆ ಬದಿಗಳನ್ನು ಗಾರ್ಬೇಜ್ ವಲ್ನರಬಲ್ ಪಾಯಿಂಟ್ಸ್ ಎಂದು ಗುರುತಿಸಲಾಗಿದ್ದು, ಇದರಲ್ಲಿ 118 ಜಾಗಗಳನ್ನು ಗಾರ್ಬೇಜ್ ಬ್ಲಾಕ್ ಸ್ಪಾಟ್ಗಳು ಎಂದು ಗುರುತು ಮಾಡಲಾಗಿದೆ. ಇದರಲ್ಲಿ 48 ಜಾಗಗಳು ವಾರಕ್ಕೆ ಎರಡು ಬಾರಿ ಬ್ಲಾಕ್ ಸ್ಪಾಟ್ಗಳಾಗುತ್ತವೆ. 70 ಜಾಗಗಳನ್ನು ತ್ಯಾಜ್ಯದಿಂದ ಗಬ್ಬೆದ್ದು ನಾರುತ್ತಿರುವ ಸ್ಪಾಟ್ಗಳೆಂದು ಗುರುತಿಸಲಾಗಿದೆ. 1,400ಕ್ಕೂ ಅಧಿಕ ಜಾಗಗಳಲ್ಲಿ ಮನೆ, ಇತರ ತ್ಯಾಜ್ಯ ತಂದು ಎಸೆದು ಜನರು ಮಾಲಿನ್ಯ ಮಾಡುತ್ತಿದ್ದಾರೆ ಎಂದು ಬಿಬಿಎಂಪಿ ತಿಳಿಸಿದೆ.