ವಕೀಲರ ಕಾಯಿದೆಯ ಸೆಕ್ಷನ್ 30ರ ಅಡಿ ವಕೀಲರಿಗೆ ಪ್ರಾಕ್ಟೀಸ್ ಮಾಡಲು ಹಕ್ಕು ಕಲ್ಪಿಸಲಾಗಿದಯೇ ವಿನಾ ನ್ಯಾಯಾಲಯದ ಆವರಣದೊಳಗಿನ ವ್ಯಾಪ್ತಿಯಲ್ಲಿ ತಮ್ಮ ವಾಹನ ಪಾರ್ಕ್ ಮಾಡುವ ಹಕ್ಕನ್ನು ನೀಡಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಹೇಳಿದೆ.
ಬೆಂಗಳೂರಿನ ವಕೀಲ ಎನ್ ಎಸ್ ವಿಜಯಂತ್ ಬಾಬು ಅವರು ಬೆಂಗಳೂರು ವಕೀಲರ ಸಂಘವು (ಎಎಬಿ) ತನ್ನ ಸದಸ್ಯರ ವಾಹನಗಳಿಗೆ ಹೊಸ ಸ್ಟಿಕರ್ ನೀಡುವುದಕ್ಕೆ ಸಂಬಂಧಿಸಿದಂತೆ ಹೊರಡಿಸಿರುವ ಅಧಿಸೂಚನೆಯನ್ನು ರದ್ದುಪಡಿಸುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ಎಸ್ ವಿಶ್ವಜಿತ್ ಶೆಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ವಜಾ ಮಾಡಿದೆ.
ನ್ಯಾಯಾಲಯದಲ್ಲಿ ವಾಹನ ನಿಲುಗಡೆಗೆ ಸೀಮಿತ ಪ್ರದೇಶವಿದ್ದು, ಇಲ್ಲಿ ವಾಹನಗಳ ಪ್ರವೇಶಕ್ಕೆ ನಿಯಂತ್ರಣ ಹೇರುವ ದೃಷ್ಟಿಯಿಂದ ಆಕ್ಷೇಪಿತ ಆದೇಶ ಮಾಡಲಾಗಿದೆ ಎಂದು ಪೀಠ ಹೇಳಿದೆ. “ಎಎಬಿ ಸದಸ್ಯರಾಗಿರುವವರಿಗೆ ಸ್ಟಿಕರ್ ನೀಡಿದ ಮಾತ್ರಕ್ಕೆ ಅಂಥ ವಕೀಲರು ನ್ಯಾಯಾಲಯದ ವ್ಯಾಪ್ತಿಯಲ್ಲಿ ವಾಹನ ನಿಲುಗಡೆ ಮಾಡಲು ಅರ್ಹರಾಗಿದ್ದಾರೆ ಎಂದರ್ಥವಲ್ಲ” ಎಂದು ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಬೆಂಗಳೂರಿನ ನ್ಯಾಯಾಲಯಗಳಿಗೆ ಹೊರಗಿನಿಂದ ಭೇಟಿ ನೀಡುವ ವಕೀಲರ ಬಗ್ಗೆ ಅರ್ಜಿದಾರರು ಯಾವುದೇ ವಿವರಗಳನ್ನು ನೀಡಿಲ್ಲ ಎಂದು ಪೀಠ ಹೇಳಿದ್ದು, ಹಾಲಿ ಮನವಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಇಲ್ಲ ಎಂದು ಹೇಳಿದೆ.
ಎಎಬಿ ಸದಸ್ಯರಲ್ಲದವರಿಗೆ ಸ್ಟಿಕರ್ ನೀಡಲು ಯಾವುದೇ ವ್ಯವಸ್ಥೆ ಮಾಡಲಾಗಿಲ್ಲ. ಬೆಂಗಳೂರಿನ ನ್ಯಾಯಾಲಯಗಳಲ್ಲಿ ತಮ್ಮ ಪ್ರಕರಣಗಳಲ್ಲಿ ವಾದ ಮಂಡಿಸಲು ಇಲ್ಲಿಗೆ ಬರುವ ವಕೀಲರಿಗೆ ತಮ್ಮ ವಾಹನ ನಿಲುಗಡೆ ಮಾಡಲು ನಿಷೇಧಿಸಲಾಗಿದೆ. ಹೀಗಾಗಿ, ಆಕ್ಷೇಪಾರ್ಹವಾದ ಆದೇಶವು ವಕೀಲರ ಕಾಯಿದೆ 1961ರ ಸೆಕ್ಷನ್ 30ರ ಅಡಿ ವಕೀಲರ ಹಕ್ಕನ್ನು ಉಲ್ಲಂಘಿಸಲಿದ್ದು, ಎಎಬಿ ಸದಸ್ಯರಾಗದ ವಕೀಲರಿಗೆ ಪ್ರಾಕ್ಟೀಸ್ ಮಾಡಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು.
ಮನೆ ಕಾನೂನು ವಕೀಲರಿಗೆ ಪ್ರಾಕ್ಟೀಸ್ ಮಾಡಲು ಹಕ್ಕು ಕಲ್ಪಿಸಲಾಗಿದೆಯೇ ವಿನಾ ನ್ಯಾಯಾಲಯದಲ್ಲಿ ವಾಹನ ನಿಲುಗಡೆಗಲ್ಲ: ಹೈಕೋರ್ಟ್