ಪೊಲೀಸ್ ಠಾಣೆಯಲ್ಲಿ ಸಿವಿಲ್ ವ್ಯಾಜ್ಯ ಇತ್ಯರ್ಥಪಡಿಸುವ ಪೊಲೀಸರ ಕಾರ್ಯವೈಖರಿ ಪುನರಾವರ್ತನೆ ಆಗುತ್ತಿರುವುದಕ್ಕೆ ಈಚೆಗೆ ಮೌಖಿಕವಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್, ಠಾಣೆಗಳನ್ನು ವ್ಯಾಪಾರ ಕೇಂದ್ರಗಳಾಗಿ ಮಾರ್ಪಡಿಸಲಾಗಿದೆ ಎಂದು ಕಟುವಾಗಿ ನುಡಿದಿದೆ.
ನಿವೇಶನವೊಂದರ ಖರೀದಿಗೆ ಸಂಬಂಧಿಸಿದ ವಿಚಾರದಲ್ಲಿ ಮಾರಾಟದಾರರಿಗೆ ಹಣ ಪಾವತಿಸಲು ಖರೀದಿದಾರರಿಗೆ ಒತ್ತಾಯಿಸಿದ ಹಾಗೂ ಬೆದರಿಕೆ ಹಾಕಿದ ಆರೋಪ ಸಂಬಂಧ ಬೆಂಗಳೂರಿನ ಚಂದ್ರ ಲೇಔಟ್ ಠಾಣೆಯ ಪೊಲೀಸರ ವಿರುದ್ಧ ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರು ಅಸಮಾಧಾನ ವ್ಯಕ್ತಪಡಿಸಿದರು.
“ಪೊಲೀಸ್ ಠಾಣೆಯನ್ನು ವ್ಯಾಪಾರ ಕೇಂದ್ರ ಮಾಡಿಕೊಳ್ಳಲಾಗಿದೆಯೇ? ಠಾಣೆಯಲ್ಲಿ ಸಿವಿಲ್ ವ್ಯಾಜ್ಯ ತೀರ್ಮಾನಿಸಲು ಪೊಲೀಸರಿಗೆ ಅಧಿಕಾರ ನೀಡಿದವರು ಯಾರು? ಠಾಣೆಯಲ್ಲಿ ಕೂತು ವಸೂಲಿ ಮಾಡುವುದು ಪೊಲೀಸರ ಕೆಲಸವೇ? ಸಿವಿಲ್ ವ್ಯಾಜ್ಯವನ್ನು ಕ್ರಿಮಿನಲ್ ಪ್ರಕರಣವಾಗಿ ಮಾರ್ಪಡಿಸಲು ಹೇಗೆ ಸಾಧ್ಯ?” ಎಂದು ವಿಚಾರಣೆ ವೇಳೆ ನ್ಯಾಯಮೂರ್ತಿ ಮೌಖಿಕವಾಗಿ ಪ್ರಶ್ನಿಸಿದ್ದಾರೆ.
ಅಲ್ಲದೆ, ಈ ಪ್ರಕರಣದಲ್ಲಿ ಪೊಲೀಸ್ ತನಿಖಾಧಿಕಾರಿ ಹಲವಾರು ರೀತಿಯಲ್ಲಿ ಕಾನೂನು ಉಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದರಿಂದ ಅವರ ವಿರುದ್ಧ ಬೆಂಗಳೂರು ಪಶ್ವಿಮ ವಿಭಾಗದ ಉಪ ಪೊಲೀಸ್ ಆಯುಕ್ತರು (ಡಿಸಿಪಿ) ಕ್ರಮ ಕೈಗೊಂಡು ಒಂದು ತಿಂಗಳಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು. ತನಿಖಾಧಿಕಾರಿ ಕಾನೂನು ದುರ್ಬಳಕೆ ಮಾಡಿರುವ ಬಗ್ಗೆ ತಮ್ಮ ಬಳಿಯಿರುವ ಎಲ್ಲಾ ದಾಖಲೆಗಳನ್ನು ಡಿಸಿಪಿಗೆ ಅರ್ಜಿದಾರರು ಸಲ್ಲಿಸಬಹುದು ಎಂದು ಇದೇ ವೇಳೆ ಪೀಠ ಸೂಚಿಸಿದೆ.
ಪ್ರಕರಣ ಸಂಬಂಧ ಅರ್ಜಿದಾರರ ವಿರುದ್ಧ ಚಂದ್ರ ಲೇಔಟ್ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಹಾಗೂ ಅದಕ್ಕೆ ಸಂಬಂಧಿಸಿದ ಮುಂದಿನ ಎಲ್ಲಾ ಕಾನೂನು ಪ್ರಕ್ರಿಯೆಗಳಿಗೆ ತಡೆ ನೀಡಿ ಪೀಠ ಮಧ್ಯಂತರ ಆದೇಶ ಮಾಡಿದೆ.
ಇದಕ್ಕೂ ಮುನ್ನ, ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರಕರಣದ ತನಿಖಾಧಿಕಾರಿಯು ಅರ್ಜಿದಾರರನ್ನು ಅನಗತ್ಯವಾಗಿ ವಿಚಾರಣೆಗೆ ಒಳಪಡಿಸಿ ಕಿರುಕುಳ ನೀಡಿ ಬೆದರಿಕೆ ಹಾಕಿ ಹಣ ಪಾವತಿಸುವಂತೆ ಮಾಡಿದ್ದಾರೆ. ಇದರಿಂದ ಅರ್ಜಿದಾರರು ಮಾನಸಿಕ ಯಾತನೆ ಅನುಭವಿಸಿದ್ದಾರೆ. ಇದೇ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿದಾರರು ಸಲ್ಲಿಸಿರುವ ಅರ್ಜಿಗೆ ಪ್ರಾಸಿಕ್ಯೂಷನ್ ಪರ ವಕೀಲರು ಸೂಕ್ತ ಮಾಹಿತಿ ನೀಡಿಲ್ಲ. ಇದರಿಂದ ಅರ್ಜಿ ವಿಲೇವಾರಿಯಾಗದೆ ಬಾಕಿಯಿದೆ. ಹೀಗಾಗಿ, ಅರ್ಜಿದಾರರ ವಿರುದ್ಧದ ಎಫ್‌ಐಆರ್ ಮತ್ತು ತನಿಖಾ ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಕೋರಿದರು.
ಇದರಿಂದ ಪೊಲೀಸರ ವಿರುದ್ಧ ಬೇಸರಗೊಂಡ ನ್ಯಾಯಮೂರ್ತಿಗಳು, ಪೊಲೀಸ್ ಠಾಣೆಯಲ್ಲಿ ನಡೆಯುವ ಇಂತಹ ಪ್ರಹಸನದಿಂದ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗಿದೆ. ಪೊಲೀಸ್ ತನಿಖಾಧಿಕಾರಿ ಸಿವಿಲ್ ವ್ಯಾಜ್ಯಗಳನ್ನು ಠಾಣೆಯಲ್ಲಿ ಇತ್ಯರ್ಥ ಪಡಿಸುವಲ್ಲಿ ಮುತುವರ್ಜಿ ತೋರಿಸಿದ್ದಾರೆ. ಪೊಲೀಸರು ಸಿವಿಲ್ ವ್ಯಾಜ್ಯದಲ್ಲಿ ಮಧ್ಯಪ್ರವೇಶ ಮಾಡಬಾರದು ಎಂಬುದಾಗಿ ನ್ಯಾಯಾಲಯಗಳು ಹಲವು ಬಾರಿ ಆದೇಶಿಸಿವೆ. ಆದರೂ ಪೊಲೀಸರು ಮಾತ್ರ ಸಿವಿಲ್ ವ್ಯಾಜ್ಯಗಳಲ್ಲಿ ಮೂಗು ತೂರಿಸುತ್ತಿದ್ದು, ಈ ಕ್ರಮ ಒಪ್ಪುವಂತದಲ್ಲ. ಪ್ರಕರಣದಲ್ಲಿ ದೂರುದಾರ ಜೊತೆಗೆ ಪೊಲೀಸ್ ಅಧಿಕಾರಿಗಳು ಕೈಜೋಡಿಸಿ ಕಳ್ಳಾಟ ಆಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಕಿಡಿಕಾರಿದರು.
ಪ್ರಕರಣದ ಹಿನ್ನೆಲೆ: ಜಮೀನೊಂದರ ಖರೀದಿಗೆ ಸಂಬಂಧಿಸಿದಂತೆ ತಾವು ಪ್ರಕರಣದ ದೂರುದಾರರಾದ ಹನುಮಂತರಾಜು ಮತ್ತು ರುಕ್ಮುಣಿ ಎಂಬುವವರಿಗೆ ₹3.53 ಕೋಟಿ ಪಾವತಿಸಿದ್ದು, ₹1.76 ಕೋಟಿ ಬಾಕಿ ಉಳಿದಿತ್ತು ಎಂದು ಅರ್ಜಿದಾರರು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದಾರೆ. ಬಾಕಿ ಹಣ ಪಾವತಿಸದಕ್ಕೆ ದೂರುದಾರರು ಗೋವಿಂದರಾಜು ನಗರ ಪೊಲೀಸ್ ಠಾಣೆಗೆ ತಮ್ಮ ವಿರುದ್ಧ ಏಪ್ರಿಲ್ 1ರಂದು ದೂರು ದಾಖಲಿಸಿದ್ದರು. ಇದರಿಂದ ತಾವು ಪೊಲೀಸ್ ಠಾಣೆಗೆ ಭೇಟಿ ನೀಡಿ, ಸ್ಮಶಾನವಿರುವ ಸಂಗತಿ ಮುಚ್ಚಿಟ್ಟು ತಮಗೆ ದೂರುದಾರರು ಜಮೀನು ಮಾರಾಟ ಮಾಡಿ ವಂಚಿಸಿದ್ದಾರೆ. ಇದರಿಂದಲೇ ತಾವು ಹಣ ಪಾವತಿಸಿಲ್ಲ ಎಂದು ಪೊಲೀಸರ ಗಮನಕ್ಕೆ ತಂದಿದ್ದೆ ಎಂಬುದಾಗಿ ಅರ್ಜಿಯಲ್ಲಿ ಅವರು ವಿವರಿಸಿದ್ದಾರೆ.
ಅಲ್ಲದೇ, ತಮ್ಮ ಹೇಳಿಕೆ ಪರಿಗಣಿಸಿ ಗೋವಿಂದರಾಜ ನಗರ ಠಾಣಾ ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡು ತಮ್ಮನ್ನು ಬಿಡುಗೊಡೆಗೊಳಿಸಿದರು. ಇದಾದ ನಂತರ ಚಂದ್ರಲೇಔಟ್ ಠಾಣಾ ಪೊಲೀಸರು ಏಪ್ರಿಲ್ 29ರಂದು ಬೆಳಿಗ್ಗೆ 8.45ಕ್ಕೆ ತಮ್ಮನ್ನು ಠಾಣೆಗೆ ಕರೆದೊಯ್ದು, ಎಫ್‌ಐಆರ್ ದಾಖಲಿಸಿದ್ದರು. ತಮ್ಮ ಮೇಲೆ ಒತ್ತಡ ಹೇರಿ ದೂರುದಾರರಿಗೆ ₹50 ಲಕ್ಷ ಪಾವತಿಸುವಂತೆ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ಅರ್ಜಿದಾರರು ಆರೋಪಿಸಿದ್ದಾರೆ. ತಮ್ಮ ವಿರುದ್ಧ ಚಂದ್ರ ಲೇಔಟ್ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಬೇಕು ಎಂದು ಕೋರಿದ್ದಾರೆ.