ಮನೆ Uncategorized ಪೇರೆಂಟ್ ಎಂದರೆ ಯಾರು ?

ಪೇರೆಂಟ್ ಎಂದರೆ ಯಾರು ?

0

 “ಪೇರೆಂಟಿಂಗ್ ಎಂದರೆ ಗಂಡ-ಹೆಂಡತಿಯರಿಬ್ಬರೂ ತಮ್ಮ ಮಕ್ಕಳಿಗೆ ಒಂದೇ ಆಲೋಚನೆಯಿಂದ ಷರತ್ತುಗಳಿಲ್ಲದ ಪ್ರೇಮಾಭಿಮಾನಗಳನ್ನು ನಿರಂತರವಾಗಿ ನೀಡುವ ಮನೆ”       ಎನ್ನಬಹುದು. ಹಸು ತನ್ನ ಕರು ಹಾಲು ಕುಡಿದ ನಂತರವೇ ಹಾಲು ಕರೆಯುವವವನ್ನು ಹತ್ತಿರಕ್ಕೆ ಬರಲು ಸಮ್ಮತಿಸುವ ಹಾಗೆ, ತಾಯಿ-ತಂದೆಯರು ತಮ್ಮ ಮಕ್ಕಳನ್ನು ಅತಿ ಪ್ರೀತಿಯಿಂದ ಮುದ್ದು ಮಾಡಿ ಬೆಳೆಸುವುದೇ ಪೇರೆಂಟಿಂಗ್. ಅತಿ ಮುದ್ದಾಗಿ ಎಂದರೆ ಕೇಳಿದ್ದನ್ನೆಲ್ಲಾ ಕೊಡುವುದಲ್ಲ. ಪ್ರೇಮಾಭಿಮಾನಗಳನ್ನು ನೀಡಿ, ಸಮಾಜದಲ್ಲಿ ಗೌರವವಾಗಿ ಬದುಕಲು, ಆತ್ಮಸ್ಥೈರ್ಯಕ್ಕೆ ಅಗತ್ಯವಾದ ಮೌಲ್ಯಗಳನ್ನು ಹೇಳಿ, ಕಲಿಸಿ  ರೂಪಿಸಬೇಕು.

ತಮ್ಮ ಮಕ್ಕಳು ಸಮರ್ಥವಾಗಿ ಅಭಿವೃದ್ಧಿ ಹೊಂದಬೇಕಾದರೆ, ಹಿರಿಯರು ಸೂಕ್ತ ಶಿಕ್ಷಣ ನೀಡಬೇಕು. ಆ ಶಿಕ್ಷಣ ಮಕ್ಕಳಿಗೆ ʼಶಿಕ್ಷೆʼ ಯಂತಿರಬಾರದು. ಇತ್ತ ಹಿರಿಯರಿಗೆ ಅತ್ತ ಮಕ್ಕಳಿಗೆ ಸೂಕ್ತವಾದ ಪದ್ಧತಿಗಳನ್ನು ಆಲೋಚಿಸಿ ಅವುಗಳನ್ನ ಆಚರಣೆಗೆ ತರಬೇಕು. ನಿಜ ಹೇಳಬೇಕೆಂದರೆ ಇದು ಒಂದು ರೀತಿಯ ಲೇವಾದೇವಿ ವ್ಯವಹಾರವೆಂದರೆ ತಪ್ಪಾಗದು. ಕೂಡುವುದು, ತೆಗೆದುಕೊಳ್ಳುವುದು ಉಭಯ ಪಕ್ಷಗಳೂ ಅಂಗೀಕರಿಸಬೇಕು. ಈ ಕೊಡು-ಕೊಳ್ಳುವ ಅಂಗೀಕಾರ, ಆನಂದ ಯಾವಾಗಲೂ ಇರುತ್ತದೆ. ಅದೇ ಪೇರೆಂಟಿಂಗ್ ನಲ್ಲಿರುವ ಮಾಧುರ್ಯ, ಗೆಲುವು, ಸೋಲುಗಳ ಪ್ರಸಕ್ತಿಯೇ ಇಲ್ಲ.

ಸಮಾಜದಲ್ಲಿ ಬದಲಾವಣೆಗಳು :

ಮನಶಾಸ್ತ್ರ ತಜ್ಞರು, ಸಾಮಾಜಿಕ ಶಾಸ್ತ್ರಜ್ಞರು, ಶಿಕ್ಷಣ ತಜ್ಞರು, ವೈದ್ಯರು, ಉಪಾಧ್ಯಾಯರು ಇವರೆಲ್ಲಾ ಹೇಳುತ್ತಿರುವುದು ಒಂದೇ ಮಾತು. ಈ ಪ್ರಪಂಚ ಬದಲಾಗಿದೆ, ಕಾಲ ಬದಲಾಯಿತು, ಮಕ್ಕಳು ಹೇಳಿದ ಮಾತು ಕೇಳುತ್ತಿಲ್ಲ. ಹಿಂಸೆ, ಸೆಕ್ಸ್ ಹೆಚ್ಚಾಗುತ್ತಿದೆ. ಸಿನಿಮಾ, ಕಿರುತರೆಗಳು ಜನರ ಮನಸ್ಸನ್ನು ಹಾಳು ಮಾಡುತ್ತಿದೆ ಎನ್ನುತ್ತಾರೆ. ನಿಜ ಹೇಳಬೇಕೆಂದರೆ ನಮ್ಮ ಸುತ್ತಮುತ್ತಲಿನ ಪ್ರಪಂಚ ಎಷ್ಟೇ ಬದಲಾದರೂ ಕುಟುಂಬ ವ್ಯವಸ್ಥೆ ಬಲಯುತವಾಗಿದ್ದರೆ ಮಕ್ಕಳು ಚೆನ್ನಾಗಿರುತ್ತೆ. ಆದರೆ ಇತ್ತೀಚಿನ ಬಹುತೇಕ ಕುಟುಂಬಗಳಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಿದೆ. ಹಳ್ಳಿಗಳಿಂದ ನಗರ, ಪಟ್ಟಣಗಳಿಗೆ ವಲಸೆ, ಔದ್ಯೋಗಿಕರಣ, ಅವಿಭಕ್ತ ಕುಟುಂಬಗಳು ಒಡೆದು ಸಣ್ಣಪುಟ್ಟ ಕುಟುಂಬಗಳಾಗುತ್ತಿದೆ. ಸಲಹೆ ಸೂಚನೆಗಳನ್ನು ನೀಡುವ ಹಿರಿಯರನ್ನ ಅಥವಾ ತಂದೆ-ತಾಯಿಯರನ್ನ ವೃದ್ಧಾಶ್ರಮಗಳಿಗೆ ಕಳುಹಿಸುವುದು, ದೂರದರ್ಶನಗಳ ಪ್ರಭಾವ, ಆಧುನಿಕ ಸಂಸ್ಕೃತಿಗಳು, ರೌಡಿಗಳಿಗೆ ಸನ್ಮಾನ ಸತ್ಕಾರಗಳು, ರೌಡಿಸಂನ ವೈಭವೀಕರಣ, ಅಕ್ರಮಣಕಾರರಿಗೆ ಕನಕಾಭಿಷೇಕ ಈ ಬಗೆಯ ಅನೇಕ ಕಾರಣಗಳಿವೆ.

ಇವೆಲ್ಲವನ್ನು ಸಾಮಾನ್ಯ ಕುಟುಂಬಗಳು ತಡೆದುಕೊಳ್ಳುವ ಶಕ್ತಿ ಇಲ್ಲ. ಆದರೂ ಬೇರೆ ವಿಧಿ ಇಲ್ಲ. ಇದರಿಂದಾಗಿ ದ್ವೇಷ, ಹಗೆ, ಕೋಪ, ಅನುಮಾನಗಳು ಹೆಚ್ಚಾಗುತ್ತಿವೆ. ಹಿರಿಯರು ಕೂಡ ತಾಳ್ಮೆ, ಸಹನೆ, ಕಳೆದುಕೊಂಡು ಮಾತನಾಡುತ್ತಿದ್ದಾರೆ. ಇದರಿಂದಾಗಿ ಕಮ್ಯುನಿಕೇಷನ್ ಹಾಳಾಗುತ್ತಿದೆ. ಇನ್ನು ಸಿನಿಮಾಗಳು ಅದರಲ್ಲಿ ಹಿಂಸಾತ್ಮಕ ದೃಶ್ಯಗಳ ಬಗ್ಗೆ ಹೇಳದಿರುವುದೇ ಲೇಸು.

ಇಂತಹ ಪರಿಸ್ಥಿತಿಯಲ್ಲಿ ಕುಟುಂಬದಲ್ಲಿ ಪೇರೆಂಟ್ಸ್ ಮತ್ತು ಮಕ್ಕಳ ಮಧ್ಯೆ ಅರಿವಿಗೆ ನಿಲುಕದ, ಗುರುತಿಸಲಾಗದ ಅಂತರ ಏರ್ಪಡುತ್ತಿದೆ. ನಾವು ಆಧುನಿಕತೆಯ ಸುಳಿಯಲ್ಲಿ ಸಿಲುಕಿ ಕೊಳ್ಳುತ್ತಿದ್ದೇವೆ ಎಂಬುದನ್ನು ಗುರುತಿಸಲಾಗದೆ, ಒಬ್ಬರನ್ನೊಬ್ಬರ ಅರ್ಥ ಮಾಡಿಕೊಳ್ಳುಲು ವಿಫಲರಾಗುತ್ತಿದ್ದಾರೆ. “ನಮ್ಮ ಮಕ್ಕಳು ನಮ್ಮ ಮಾತುಗಳನ್ನು ಕೇಳುತ್ತಿಲ್ಲ” ಎಂದು ತಂದೆ ತಾಯಿಯರು, “ನಮ್ಮ ತಂದೆ ತಾಯಿಯರು ನಮ್ಮನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ” ಎಂದು ಮಕ್ಕಳು ಅಲವತ್ತು ಕೊಳ್ಳುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರ ಇದೆಯೇ?  ಏಕಿಲ್ಲಾ ಇದೆ.

ಪೇರೆಂಟ್ ಎಂದರೆ ಯಾರು ?

ಪೇರೆಂಟ್ ಎಂದರೆ ತಾಯಿ, ತಂದೆ ಎಂದು ನಾವಂದುಕೊಳ್ಳುತ್ತೇವೆ. ನಿಜ. ಆದರೆ, ಈ ಪಾತ್ರದ ಜೊತೆಗೆ ಪೋಷಿಸಬೇಕಾದ ಪಾತ್ರಗಳು ಹತ್ತಾರಿವೆ. ಅವನ್ನು ಕೂಡ ಸಮಯ, ಸಂದರ್ಭಗಳಿಗನುಸಾರವಾಗಿ ಸಮಾನವಾಗಿ ಪೋಷಿಸಬೇಕು. ಅವು ಯಾವುದೆಂದರೆ…..

1.ಸ್ನೇಹಿತ

2. ಮೌಲ್ಯಗಳನ್ನು ತಿಳಿಸುವ ಬೋಧಕ

3. ಸಲಹೆಗಾರ

4. ದಂಡನೆ (ಶಿಕ್ಷೆ) ಉಡುಗೊರೆ (Reward and punishment)ಗಳನ್ನು ಜಾರಿಗೊಳಿಸುವ ವ್ಯಕ್ತಿ.

5. ಮಾರ್ಗದರ್ಶಿ

6. ಸಂರಕ್ಷಕ

7. ವಿನೋದ / ಮನರಂಜನೆಯನ್ನು ಉಂಟುಮಾಡುವ ವ್ಯಕ್ತಿ.

8. ಮೃದು ವಿಮರ್ಶಕ

9. ತಾತ್ವಿಕರು

10. ಆರೋಗ್ಯ ಸೂಚನೆಗಳನ್ನು ನೀಡುವ ಆತ್ಮೀಯರು.

ಈ ಹತ್ತು ಪಾತ್ರಗಳಲ್ಲಿ ಯಾವುದೋ ಒಂದು, ಯಾವಾಗಲೋ ಒಂದು ಸಂದರ್ಭದಲ್ಲಿ ಪೋಷಿಸಬೇಕಾದ ಪರಿಸ್ಥಿತಿ ಬರುತ್ತದೆ. ಅದನ್ನು ಸಮರ್ಥವಾಗಿ ಮಾಡಲು ಸಿದ್ಧವಾಗಿರಬೇಕು. ಹಾಗಲ್ಲದೆ ಕೇವಲ ವಿಮರ್ಶಗಳನ್ನ ಮಾಡಿದರೂ, ಅಕ್ಕಪಕ್ಕದವರೊಂದಿಗೆ ಹೋಲಿಸಿದರೂ, ಅವಹೇಳನಕಾರಿ ಮಾತನಾಡಿದರೂ, ನಾಲ್ಕಾರು ಮಂದಿ ಎದುರು ತಲೆತಗ್ಗಿಸುವಂತೆ ಮಾಡಿದರೂ, ಆ ತಾಯಿ ತಂದೆಯರು ನಂತರ ತಮ್ಮ ವೃದ್ಧಾಪ್ಯದಲ್ಲಿ ನೋವು, ಪರ್ಯಾವ ಸ್ಥಾನಗಳನ್ನ ಎದುರಿಸಬೇಕಾಗುತ್ತದೆ.

– ಮುಂದುವರೆಯುತ್ತದೆ…

ಹಿಂದಿನ ಲೇಖನಬಿಜೆಪಿ ಸಂಸದರು ಕೇಂದ್ರದಿಂದ ಬರಪರಿಹಾರ ಕೊಡಿಸಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಂದಿನ ಲೇಖನಕ್ರೀಡೆ ವಿಶ್ವಮಾನವ ಸಂದೇಶ ಸಾರುವ ಕ್ಷೇತ್ರ: ಡಾ.ಹೆಚ್.ಸಿ.ಮಹದೇವಪ್ಪ