ಬೆಂಗಳೂರು: ನವರಾತ್ರಿ ಬಳಿಕ ಸಿದ್ದರಾಮಯ್ಯನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಈ ರೀತಿ ಗಡುವು ಕೊಡುವುದಕ್ಕೆ ವಿಜಯೇಂದ್ರ ಯಾರು ಎಂದು ಪ್ರಶ್ನಿಸಿದರು.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೊದಲು ಅವರ ಸ್ಥಾನ ಉಳಿಸಿಕೊಳ್ಳಲಿ ಎಂದು ಟಾಂಗ್ ಕೊಟ್ಟರು.
ವಿಜಯಪುರ, ಶಿವಮೊಗ್ಗದಲ್ಲಿ ಏನೇನು ಮಾಡ್ತಿದ್ದಾರೆ ಎಂದು ಗೊತ್ತಿಲ್ವಾ? ನಮ್ಮ ಬಗ್ಗೆ ಮಾತನಾಡೋದಕ್ಕೆ ಬಿಜೆಪಿ ನಾಯಕರು ಯಾರು? ಸಿಎಂ ಯಾಕೆ ರಾಜೀನಾಮೆ ಕೊಡಬೇಕು? ವಿಜಯೇಂದ್ರ ರಾಜೀನಾಮೆ ಕೊಡುತ್ತಾರೆಂದು ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿಯುತ್ತಿದ್ದಾರೆ ಎಂದು ಟೀಕಿಸಿದರು.
ಇದೇ ವೇಳೆ, ಸಚಿವ ಸತೀಶ್ ಜಾರಕಿಹೊಳಿ ನಿವಾಸಕ್ಕೆ ವಿಜಯೇಂದ್ರ ರಾಜಕೀಯ ಹೊಲಸು ಮಾಡಲು ಹೋಗಿದ್ದಾರೆ ಎಂದು ಕಿಡಿಕಾರಿದರು.
ಇನ್ನು, ಹರಿಯಾಣ ಚುನಾವಣಾ ಫಲಿತಾಂಶದ ಬಗ್ಗೆ ನಮ್ಮ ನಾಯಕರು ಮಾತನಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಾವು ಗೆದ್ದಿದ್ದೇವೆ. ಅದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅತ್ಯಾಚಾರ ಆರೋಪ ಪ್ರಕರಣಕ್ಕೆ ಪ್ರತಿಕ್ರಿಯಿಸುತ್ತಾ, ಈ ಕುರಿತು ವ್ಯಕ್ತಿಗತವಾಗಿ ನಾನು ಮಾತನಾಡಲ್ಲ. ಕಾನೂನು ತನ್ನ ಕ್ರಮ ತೆಗೆದುಕೊಳ್ಳಲಿದೆ ಎಂದರು.
ಜಾತಿ ಗಣತಿ ವರದಿ ಬಿಡುಗಡೆ ವಿಚಾರದ ಕುರಿತ ಪ್ರಶ್ನೆಗೆ, ಆ ವರದಿಯಲ್ಲೇನಿದೆ ಎಂದು ಗೊತ್ತಿಲ್ಲ. ಸಿಎಂಗೆ ವರದಿ ಕೊಟ್ಟಿದ್ದಾರೆ. ಪರ-ವಿರೋಧ ಚರ್ಚೆಯಾಗಬೇಕು. ನಂತರ ವರದಿ ಅನುಷ್ಠಾನ ಮಾಡಬೇಕು ಎಂದು ಹೇಳಿದರು.