ಮನೆ ಮನರಂಜನೆ ಹಿಂದಿ ಬೇಡ ಅನ್ನೋರು ತಮಿಳು ಸಿನಿಮಾವನ್ನು ಯಾಕೆ ಹಿಂದಿಗೆ ಡಬ್ಬಿಂಗ್‌ ಮಾಡ್ತೀರಿ: ಪವನ್‌ ಕಲ್ಯಾಣ್‌ ಪ್ರಶ್ನೆ

ಹಿಂದಿ ಬೇಡ ಅನ್ನೋರು ತಮಿಳು ಸಿನಿಮಾವನ್ನು ಯಾಕೆ ಹಿಂದಿಗೆ ಡಬ್ಬಿಂಗ್‌ ಮಾಡ್ತೀರಿ: ಪವನ್‌ ಕಲ್ಯಾಣ್‌ ಪ್ರಶ್ನೆ

0

ತ್ರಿಭಾಷಾ ಸೂತ್ರದ ಮೂಲಕ ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಆಕ್ಷೇಪಿಸಿರುವ ತಮಿಳುನಾಡು ಸಿಎಂ ಸ್ಟಾಲಿನ್‌ಗೆ ನಟ ಹಾಗೂ ಆಂಧ್ರಪ್ರದೇಶ ಡಿಸಿಎಂ ಪವನ್‌ ಕಲ್ಯಾಣ್‌ ತಿರುಗೇಟು ನೀಡಿದ್ದಾರೆ. ಹಿಂದಿ ಭಾಷೆ ವಿರೋಧಿಸುವವರು ತಮಿಳು ಸಿನಿಮಾವನ್ನು ಯಾಕೆ ಹಿಂದಿಗೆ ಡಬ್ಬಿಂಗ್‌ ಮಾಡ್ತೀರಾ ಎಂದು ಪವನ್‌ ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರ ಮತ್ತು ತಮಿಳುನಾಡು ನಡುವೆ ನಡೆಯುತ್ತಿರುವ ತ್ರಿಭಾಷಾ ಫೈಟ್‌ ನಡುವೆ, ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಈ ಹೇಳಿಕೆ ನೀಡಿದ್ದಾರೆ. ಭಾರತದ ಭಾಷಾ ವೈವಿಧ್ಯತೆಯನ್ನು ಕಾಪಾಡುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ದೇಶಕ್ಕೆ ಎರಡಲ್ಲ, ತಮಿಳು ಸೇರಿದಂತೆ ಬಹು ಭಾಷೆಗಳು ಬೇಕು ಎಂದು ನಟ ಮಾತನಾಡಿದ್ದಾರೆ.

ಭಾರತಕ್ಕೆ ತಮಿಳು ಸೇರಿದಂತೆ ಬಹು ಭಾಷೆಗಳ ಅಗತ್ಯವಿದೆ. ನಾವು ಭಾಷಾ ವೈವಿಧ್ಯತೆಯನ್ನು ಅಳವಡಿಸಿಕೊಳ್ಳಬೇಕು. ನಮ್ಮ ರಾಷ್ಟ್ರದ ಸಮಗ್ರತೆಯನ್ನು ಕಾಪಾಡಿಕೊಳ್ಳುವುದು ಮಾತ್ರವಲ್ಲದೇ, ಜನರಲ್ಲಿ ಪ್ರೀತಿ ಮತ್ತು ಏಕತೆಯನ್ನು ಬೆಳೆಸಬೇಕು ಎಂದು ಕಾಕಿನಾಡ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆಶಯ ವ್ಯಕ್ತಪಡಿಸಿದ್ದಾರೆ.

ಕೆಲವರು ಸಂಸ್ಕೃತವನ್ನು ಏಕೆ ಟೀಕಿಸುತ್ತಾರೆಂದು ನನಗೆ ಅರ್ಥವಾಗುತ್ತಿಲ್ಲ. ಆರ್ಥಿಕ ಲಾಭಕ್ಕಾಗಿ ತಮ್ಮ ಸಿನಿಮಾಗಳನ್ನು ಹಿಂದಿಗೆ (Hindi) ಡಬ್ ಮಾಡಲು ಅವಕಾಶ ನೀಡುವ ತಮಿಳುನಾಡು ರಾಜಕಾರಣಿಗಳು ಹಿಂದಿಯನ್ನು ಏಕೆ ವಿರೋಧಿಸುತ್ತಾರೆ? ಅವರು ಬಾಲಿವುಡ್‌ನಿಂದ ಹಣವನ್ನು ಬಯಸುತ್ತಾರೆ. ಆದರೆ ಹಿಂದಿ ಸ್ವೀಕರಿಸಲು ನಿರಾಕರಿಸುತ್ತಾರೆ. ಇದು ಯಾವ ರೀತಿಯ ತರ್ಕ ಎಂದು ಹಿಂದಿ ವಿರೋಧಿಗಳಿಗೆ ಟಾಂಗ್‌ ಕೊಟ್ಟಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ‘ಹಿಂದಿ ಹೇರಿಕೆ’ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ತ್ರಿಭಾಷಾ ಸೂತ್ರವನ್ನು ಜಾರಿಗೆ ತರಲು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ವಿರೋಧ ವ್ಯಕ್ತಪಡಿಸಿದ್ದಾರೆ. ಇವರ ನಿಲುವಿಗೆ ಅನೇಕ ನಟರು, ರಾಜಕಾರಣಿಗಳು ಬೆಂಬಲ ಸೂಚಿಸಿದ್ದಾರೆ. ಈ ಹೊತ್ತಲ್ಲೇ ನಟ, ರಾಜಕಾರಣಿ ಪವನ್‌ ಕಲ್ಯಾಣ್‌ ಬಹುಭಾಷಾ ಅಗತ್ಯತೆ ಬಗ್ಗೆ ಮಾತನಾಡಿದ್ದಾರೆ.