ಕಲಬುರಗಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಸ್ನೇಹಿತ, ತನ್ನ ಮಾತು ಕೇಳುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಯಾವಾಗಲು ಹೇಳುತ್ತಿರುತ್ತಾರೆ. ಹಾಗಾದರೆ, ನಿಮ್ಮನ್ನು ಕೇಳದೇ ಯಾಕೆ ಭಾರತದ ಪ್ರಜೆಗಳನ್ನು ಹೊರಹಾಕುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.
ವಲಸೆ ಹೋಗಿರುವ ಭಾರತ ಪ್ರಜೆಗಳ ಕುರಿತು ನಗರದಲ್ಲಿ ಬುಧವಾರ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ‘ದೇಶದ ಪ್ರಜೆಗಳ ಕೈಯಲ್ಲಿ, ಕಾಲಲ್ಲಿ ಬೇಡಿ ಹಾಕಿ ಕರೆತರಲಾಗುತ್ತಿದೆ. ಅಂದರೆ, ನಿಮ್ಮ ಸ್ನೇಹಿತ ನಮ್ಮ ದೇಶದ ಪ್ರಜೆಗಳನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮೋದಿ ಯೋಚಿಸಬೇಕು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭಾರತ ದೇಶವೇ ಆಗಿರಲಿ, ಅಮೆರಿಕವೇ ಆಗಿರಲಿ, ದೇಶ ಎಂಬುದು ಶಾಶ್ವತ. ವ್ಯಕ್ತಿಗಳು ಬರುತ್ತಾರೆ, ಹೋಗುತ್ತಾರೆ. ಹಿಂದೆ ಟ್ರಂಪ್ ಬಂದ, ಹೋದ. ಈಗ ಮತ್ತೆ ಬಂದಿದ್ದಾರೆ. ನರೇಂದ್ರ ಮೋದಿ ಇಂದು ಇದ್ದಾರೆ, ನಾಳೆ ಇರಲ್ಲ. ಆದರೆ, ದೇಶ ಇರುತ್ತದೆ. ಹೀಗಾಗಿ ದೇಶದ ಹಿತದೃಷ್ಟಿಯಿಂದ ಯೋಚಿಸಬೇಕು. ಅದರ ಬದಲು ಟ್ರಂಪ್ ತನ್ನ ಸೇಹಿತ. ತನ್ನ ಮಾತು ಕೇಳುತ್ತಾರೆ ಎಂದು ಹೇಳುವುದು ಸಮಂಜಸವಲ್ಲ ಎಂದು ಮೋದಿ ವಿರುದ್ಧ ಹರಿಹಾಯ್ದರು.
ಮೋದಿಗೆ ಸುಳ್ಳು ಹೇಳುವ ಹವ್ಯಾಸವಿದೆ. ಟ್ರಂಪ್ ಮೋದಿ ಸ್ನೇಹಿತರೇ ಆಗಿದ್ದರೆ, ದೇಶದ ವಲಸಿಗ ಪ್ರಜೆಗಳನ್ನು ಗೌರವಯುತವಾಗಿ ಪ್ರಯಾಣಿಕ ವಿಮಾನದಲ್ಲಿ ಕಳಿಸಿ, ಸರಕು ಸಾಗಣೆ ವಿಮಾನದಲ್ಲಿ ಬೇಡ. ಇಲ್ಲವೇ ನಾವೇ ಪ್ರಯಾಣಿಕ ವಿಮಾನ ಕಳಿಸುತ್ತೇವೆ. ಅಲ್ಲಿತನಕ ಅಲ್ಲೇ ಉಳಿಸಿಕೊಳ್ಳಿ ಎಂದು ಮೋದಿ ದೂರವಾಣಿ ಮೂಲಕ ಟ್ರಂಪ್‌ಗೆ ಹೇಳಿಬೇಕಿತ್ತು ಎಂದರು.
ನಾನು ಎಐಸಿಸಿ ಅಧ್ಯಕ್ಷ. ಎಲ್ಲರೂ ಬರುತ್ತಾರೆ ಭೇಟಿಯಾಗುತ್ತಾರೆ. ನಮ್ಮವರು, ಕರ್ನಾಟಕದವರು. ಸ್ವಲ್ಪ ಸಲುಗೆ ಇರುತ್ತೆ. ಸಹಜವಾಗಿ ಫೋನ್‌ಮಾಡಿ ಸಮಯ ಪಡೆದು, ಬಂದು ಭೇಟಿಯಾಗುತ್ತಾರೆ. ನಾವು ಬೇಡ ಎನ್ನಲು ಸಾಧ್ಯವೇ?’ ಎಂದು ಖರ್ಗೆ ಕೇಳಿದರು.
ರಾಜ್ಯದ ಸಚಿವರ ಭೇಟಿ ಬಗೆಗಿನ ಪ್ರಶ್ನೆ ಪ್ರತಿಕ್ರಿಯಿಸಿದ ಅವರು, ‘ಪರಮೇಶ್ವರ ಬಂದ ಭೇಟಿಯಾದ, ಶಿವಕುಮಾರ್ ಬಂದ ಭೇಟಿಯಾದ, ಜಾರಕಿಹೊಳಿ ಬಂದ ಭೇಟಿಯಾದ, ಸಿದ್ದರಾಮಯ್ಯ ಫೋನ್‌ನಲ್ಲಿ ಮಾತನಾಡಿ ಎಂಬುದಕ್ಕೆ ನೀವು ಊಹಾಪೋಹ ಸೇರಿಸಿ ಸರ್ಕಾರಕ್ಕೆ ಡಿಸ್ಟರ್ಬ್ ಮಾಡಬೇಡಿ. ಮಾಧ್ಯಮದವರಿಂದ ಅಸ್ಥಿರಗೊಳಿಸುವ, ಗೊಂದಲ ಸೃಷ್ಟಿಸುವ ಕೆಲಸವಾಗುತ್ತಿದೆ. ಅದರಿಂದ ಮುಖಂಡರೂ ಗೊಂದಲದಲ್ಲೇ ಬಿದ್ದಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಓಡಿಶಾ ಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷರ ಬದಲಾವಣೆ ಮಾಡಿದ್ದೇವೆ. 2–3 ದಿನಗಳಲ್ಲಿ ಇನ್ನೂ ಎರಡ್ಮೂರು ರಾಜ್ಯಗಳ ಕಾಂಗ್ರೆಸ್ ಪಕ್ಷದ ಪ್ರದೇಶ ಅಧ್ಯಕ್ಷ ಅಧ್ಯಕ್ಷರನ್ನು ನೇಮಿಸಲಾಗುವುದು. ಕೆಲವೆಡೆ ಪದಾಧಿಕಾರಿಗಳು, ಘಟಕಗಳ ನೇಮಕಗಳಿಗೂ ನೇಮಕಾತಿ ನಡೆಯಲಿದೆ. ರಾಜ್ಯಕ್ಕೆ ಸೀಮಿತವಾಗಿ ಯಾವುದನ್ನೂ ಹೇಳಲಾಗದು ಎಂದು ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಕುರಿತ ಪ್ರಶ್ನೆಗೆ ಖರ್ಗೆ ಪ್ರತಿಕ್ರಿಯಿಸಿದರು.















