ಮನೆ ರಾಜಕೀಯ ಪೇಸಿಎಂ ಎಂದಾಕ್ಷಣ ಹೆಗಲು ಮುಟ್ಟಿಕೊಳ್ಳುವುದೇಕೆ ? : ಸಿಎಂ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಕಿಡಿ

ಪೇಸಿಎಂ ಎಂದಾಕ್ಷಣ ಹೆಗಲು ಮುಟ್ಟಿಕೊಳ್ಳುವುದೇಕೆ ? : ಸಿಎಂ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಕಿಡಿ

0

ಬೆಂಗಳೂರು(Bengaluru): ಪೇಸಿಎಂ ಎಂದಾಕ್ಷಣ ಗಾಬರಿಯಿಂದ ಹೆಗಲು ಮುಟ್ಟಿಕೊಳ್ಳುವುದೇಕೆ ಸಿಎಂ ಬೊಮ್ಮಾಯಿ ಅವರೇ? ‘ಕಳ್ಳನ ಮನಸು ಹುಳ್ಳುಳ್ಳಗೆ’ ಎಂಬ ಮಾತು ನಿಜವೇ! ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

 ‘ಪೇಸಿಎಂ’ ಮತ್ತು ’40 ಪರ್ಸೆಂಟ್ ಸರ್ಕಾರ’ ಹ್ಯಾಷ್‌ಟ್ಯಾಗ್‌ ಅಡಿಯಲ್ಲಿ ಕಾಂಗ್ರೆಸ್ ಶುಕ್ರವಾರವೂ ಸರಣಿ ಟ್ವೀಟ್ ಮಾಡಿದೆ.

ಮುಖ್ಯಮಂತ್ರಿ ಹುದ್ದೆಗೆ ₹2,500 ಕೋಟಿ ನೀಡಬೇಕು ಎಂದವರು ಬೇರೆ ಯಾರೂ ಅಲ್ಲ ಸ್ವತಃ ಬಿಜೆಪಿ ಶಾಸಕ ಯತ್ನಾಳ್. 40 ಪರ್ಸೆಂಟ್ ಸರ್ಕಾರದ ಸಿಎಂ ಕೂಡ ಪುಗಸಟ್ಟೆ ಬಂದಿಲ್ಲ ಪೇ ಮಾಡಿಯೇ ಬಂದಿದ್ದು ಅಲ್ಲವೇ ಬಿಜೆಪಿ ಸರ್ಕಾರ? ಈ ಬಗ್ಗೆ ಬಿಜೆಪಿಗರು ಮಾತಾಡುವುದಿಲ್ಲವೇಕೆ? ಮೌನವಿದೆ ಎಂದರೆ ಅಲ್ಲಿ ಸತ್ಯವಿದೆ ಎಂದರ್ಥವಲ್ಲವೇ ಮಾನ್ಯ ಪೇಸಿಎಂ ಅವರೇ? ಎಂದು ಕಿಡಿ ಕಾರಿದೆ.

ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ₹50 ಲಕ್ಷ ಫಿಕ್ಸ್! ಈ ಕಡೆಯಿಂದ ಪೇಸಿಎಂ ಮಾಡಿ, ಆ ಕಡೆಯಿಂದ ಹುದ್ದೆ ಪಡೆಯಿರಿ. ಇದು ಈ ಸರ್ಕಾರದ ಭ್ರಷ್ಟಾಚಾರದ ಮಾದರಿ ಎಂದು ಆರೋಪಿಸಿದೆ.

ಈ ನೇಮಕಾತಿ ಹಗರಣವನ್ನು ನ್ಯಾಯಾಂಗ ತನಿಖೆ ನಡೆಸಲು ಹಿಂಜರಿಯುತ್ತಿರುವುದೇಕೆ 40 ಪರ್ಸೆಂಟ್ ಸರ್ಕಾರ ? ತನಿಖೆಯ ಜಾಡು ವಿಧಾನಸೌಧ ತಲುಪುವ ಭಯವೇ ಸಿಎಂ ಬೊಮ್ಮಾಯಿ ಅವರೇ? ಎಂದು ಹೇಳಿದೆ.

ಒಳ್ಳೆಯ ಆಡಳಿತ ಬಿಜೆಪಿಯ ಹಣೆಯಲ್ಲೇ ಬರೆದಿಲ್ಲ, ಅವರೆನಿದ್ದರೂ ಒಳ್ಳೆಯ ವ್ಯಾಪಾರಿಗಳು! ಸರ್ಕಾರಿ ಹುದ್ದೆಗಳನ್ನು ಸಂತೆಯಲ್ಲಿ ತರಕಾರಿ ಮಾರಿದಂತೆ ಮಾರಾಟ ಮಾಡಿದ ಕೀರ್ತಿ 40 ಪರ್ಸೆಂಟ್ ಸರ್ಕಾರಕ್ಕೆ ಸಲ್ಲಬೇಕು. ಜ್ಯೂನಿಯರ್ ಇಂಜಿನಿಯರ್ ಹುದ್ದೆಗಳನ್ನು 30 ಲಕ್ಷಕ್ಕೆ ಮಾರಿದ ಅಕ್ರಮದ ತನಿಖೆ ಮಾಡಲು ಪೇಸಿಎಂ ಅವರಿಗೆ ಆಸಕ್ತಿ ಇಲ್ಲವೇಕೆ? ಎಂದು ಟೀಕಿಸಿದೆ.

ಪಿಎಸ್‌ಐ ಹುದ್ದೆಗಳು ₹80 ಲಕ್ಷಕ್ಕೆ ಮಾರಾಟವಾಗಿದ್ದರೂ ಹಗರಣ ನಿರಾಕರಿಸಿದ್ರಿ, ಬಸವರಾಜ ದಡೇಸಗೂರ ಹಾಗೂ ಅಶ್ವತ್ಥನಾರಾಯಣ ಅವರ ವಿಚಾರಣೆ ನಡೆಸಲೇ ಇಲ್ಲ. ಪೆಮೆಂಟ್ ಪಾಲು ನಿಮಗೂ ತಲುಪಿದೆಯೇ? ಎಂದು ಪ್ರಶ್ನಿಸಿದೆ.

ಬಿಜೆಪಿಗೆ ಸರ್ಕಾರವೆಂದರೆ ಬಿಸ್ನೆಸ್ ಇದ್ದಹಾಗೆ. ಶಾಸಕರ ಖರೀದಿಗೆ ಬಂಡವಾಳ ಹೂಡಿಕೆಯಾಗುತ್ತದೆ, ನಂತರ ಸಿಎಂ ಹುದ್ದೆಗೆ ₹2,500 ಕೋಟಿ ಪೇಸಿಎಂ ಮಾಡ್ಬೇಕು. ಶಾಸಕರು ಸಚಿವ ಸ್ಥಾನಕ್ಕೆ ಪೇಸಿಎಂ ಮಾಡ್ಬೇಕು. ಉದ್ಯೋಗಾಕಾಂಕ್ಷಿಗಳು ಸಚಿವರಿಗೆ ಪೇಸಿಎಂ ಮಾಡ್ಬೇಕು. ಗುತ್ತಿಗೆದಾರರು ಎಲ್ಲರಿಗೂ ಪೇಸಿಎಂ ಮಾಡ್ಬೇಕು ಎಂದಿದೆ.

ಗುತ್ತಿಗೆದಾರರೇ, ನಿಮಗೆ ಟೆಂಡರ್ ಸಿಗಬೇಕೆ, ಬಿಲ್ ಬಿಡುಗಡೆ ಆಗಬೇಕೇ? ಪೇಸಿಎಂ ಮಾಡಿ. ಇದು 40 ಪರ್ಸೆಂಟ್ ಸರ್ಕಾರದ ನಿಯಮ!. ಗುತ್ತಿಗೆದಾರರ ಸಂಘ, ಬಿಬಿಎಂಪಿ ಗುತ್ತಿಗೆದಾರರು, ಸರ್ಕಾರಿ ಶಾಲೆ ಗುತ್ತಿಗೆದಾರರು, ಮೇವು ಸರಬರಾಜುದಾರರು, ಖಾಸಗಿ ಶಾಲೆಗಳ ಮಾಲೀಕರು, ಸರ್ಕಾರಿ ಆಸ್ಪತ್ರೆಗಳ ಔಷಧ ಸರಬರಾಜುದಾರರು, ಎಲ್ಲರೂ 40 ಪರ್ಸೆಂಟ್ ಸಂತ್ರಸ್ತರೇ ಎಂದು ಹೇಳಿದೆ.