ಮನೆ ರಾಜ್ಯ ಬೆಂಗಳೂರು ಮೆಟ್ರೋ ದರ ದೆಹಲಿಗಿಂತ ಎರಡು ಪಟ್ಟು ಹೆಚ್ಚೇಕೆ..?

ಬೆಂಗಳೂರು ಮೆಟ್ರೋ ದರ ದೆಹಲಿಗಿಂತ ಎರಡು ಪಟ್ಟು ಹೆಚ್ಚೇಕೆ..?

0

ಬೆಂಗಳೂರು : ಬೆಂಗಳೂರಿನ ಮೆಟ್ರೋ ದರ ಏರಿಕೆಯ ಕುರಿತಾಗಿ ಹಲವಾರು ವಿಮರ್ಶೆಗಳು ಹುಟ್ಟಿಕೊಂಡಿವೆ. ಈ ಮೊದಲೂ ಎಂ.ಪಿ ತೇಜಸ್ವಿ ಸೂರ್ಯ ಸೇರಿದಂತೆ ಹಲವರು ದರ ಏರಿಕೆಯನ್ನು ಪ್ರಶ್ನಿಸಿದ್ದರು. ಅಂತೆಯೇ ಈಗ ಕಾಯ್ನ್ ಸ್ವಿಚ್ ಕಂಪನಿಯ ಮಾಲೀಕ ಆಶಿಶ್ ಸಿಂಘಲ್ ಈ ಕುರಿತು ಲಿಂಕ್​ಡಿನ್ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ದೆಹಲಿ ಮೆಟ್ರೋದಲ್ಲಿರುವ ಸೌಲಭ್ಯಗಳೇ ಬೆಂಗಳೂರಿನಲ್ಲಿದ್ದರೂ ದರ ಮಾತ್ರ ದೆಹಲಿಯ ಎರಡು ಪಟ್ಟಿನಷ್ಟಿದೆಯೇಕೆ ಎಂದು ಪ್ರಶ್ನಿಸಿದ್ದಾರೆ. ಆದರೆ ಬಿಎಂಸಿಆರ್‌ಎಲ್‌ ಮಾತ್ರ ಬೆಲೆಯೇರಿಕೆಯ ಸಮರ್ಥನೆ ಮಾಡಿಕೊಂಡಿದೆ.

ಮೆಟ್ರೋ ದರ ಹೆಚ್ಚಳದ ವಿರುದ್ಧ ತೇಜಸ್ವಿ ಸೂರ್ಯ ಗರಂ – ಫೆಬ್ರುವರಿಯಲ್ಲೇ ಬೆಂಗಳೂರು ಮೆಟ್ರೋ ದರ ಏರಿಕೆಯಾಗಿದ್ದರೂ ಅದು ಬೆಳಕಿಗೆ ಬಂದಿದ್ದು ಇತ್ತೀಚಿನ ದಿನಗಳಲ್ಲಿ. ಈ ಕರಿತು ಬಿಜೆಪಿ ಎಂ.ಪಿ ತೇಜಸ್ವಿ ಸೂರ್ಯ “ಬೆಂಗಳೂರು ಮೆಟ್ರೋ ದರ ಗಗನಕ್ಕೇರಿದೆ. ಇಡೀ ದೇಶದಲ್ಲೇ ಅತ್ಯಂತ ದುಬಾರಿ ಮೆಟ್ರೋ ನಮ್ಮದಾಗಿದೆ.

ಪ್ರತಿನಿತ್ಯ ನಮ್ಮ ಮೆಟ್ರೋದಲ್ಲಿ 25 ಕಿ.ಮೀ ಗಿಂತ ಜಾಸ್ತಿ ದೂರ ಪ್ರಯಾಣಿಸುವವರು 90 ರೂ.ಗಳಷ್ಟು ಶುಲ್ಕ ಪಾವತಿಸಬೇಕು. ಹೀಗೆ ಮುಂದುವರೆದರೆ ಸಾರ್ವಜನಿಕರು ಖಾಸಗೀ ವಾಹನಗಳಲ್ಲೇ ಸಂಚರಿಸಬೇಕಾಗುತ್ತದೆ. ಇದನ್ನು ದೆಹಲಿಯೊಂದಿಗೆ ಹೋಲಿಸಿ ನೋಡಿದರೆ ಅವರು ಕೈಗೆಟಕುವಷ್ಟೇ ಬೆಲೆ ಏರಿಕೆ ಮಾಡಿದ್ದಾರೆ.” ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಆಶಿಶ್ ಸಿಂಘಲ್​ನ ಪೋಸ್ಟ್​ನಲ್ಲೇನಿದೆ? – ಕಾಯ್ನ್ ಸ್ವಿಚ್ ಕಂಪನಿಯ ಮಾಲೀಕ ಆಶಿಶ್ ಸಿಂಘಲ್ ಸಹ ಈ ಕುರಿತಾಗಿ ತಮ್ಮ ಲಿಂಕ್​ಡಿನ್ ಖಾತೆಯಲ್ಲಿ ಪೋಸ್ಟ್ ಮಾಡಿ, ‘ಬೆಂಗಳೂರು ಮೆಟ್ರೋ ಇದೀಗ ದೇಶದಲ್ಲೇ ಅತಿ ದುಬಾರಿ ಎನಿಸಿಕೊಂಡಿದೆ. 60 ರೂ.ಗಳಷ್ಟಿದ್ದ ಗರಿಷ್ಟ ಶುಲ್ಕವನ್ನು ರಾತ್ರೋರಾತ್ರಿ 90 ರೂ.ಗಳಿಗೆ ಏರಿಸಿದ್ದಾರೆ.

ದೆಹಲಿ ಮೆಟ್ರೋದ ಗರಿಷ್ಟ ಶುಲ್ಕ 60 ರೂ, ಮುಂಬೈನಲ್ಲಿ 50ರೂ. ಮತ್ತು ಕೋಲ್ಕತ್ತಾದಲ್ಲಿ ಕೇವಲ 30 ರೂ.ಗಳಷ್ಟು ಗರಿಷ್ಟ ಶುಲ್ಕವಿದೆ. ದೆಹಲಿ ಮೆಟ್ರೋ ಸಹ ಇಲ್ಲಿಯಷ್ಟೇ ಜನದಟ್ಟಣೆ, ಕೋಚ್​ಗಳು ಮತ್ತು ಇತರ ಸೇವೆಗಳನ್ನು ಒದಗಿಸುತ್ತಿದೆ. ಆದರೆ ಬೆಂಗಳೂರಿಗರು ಮೆಟ್ರೋದಲ್ಲಿ ಪ್ರಯಾಣಿಸಲು ದೆಹಲಿಯ ಎರಡು ಪಟ್ಟು ಶುಲ್ಕ ಪಾವತಿಸಬೇಕಿದೆ’ ಎಂದಿದ್ದಾರೆ.