ಮನೆ ರಾಷ್ಟ್ರೀಯ ಜಾತಿಗಣತಿ ವಿರೋಧಿಸಿದ್ದ ಬಿಜೆಪಿ, ಈಗ ಮರುಸಮೀಕ್ಷೆಗೂ ವಿರೋಧಿಸುತ್ತಿರುವುದೇಕೆ? : ಡಿಸಿಎಂ ಡಿ.ಕೆ. ಶಿವಕುಮಾರ್

ಜಾತಿಗಣತಿ ವಿರೋಧಿಸಿದ್ದ ಬಿಜೆಪಿ, ಈಗ ಮರುಸಮೀಕ್ಷೆಗೂ ವಿರೋಧಿಸುತ್ತಿರುವುದೇಕೆ? : ಡಿಸಿಎಂ ಡಿ.ಕೆ. ಶಿವಕುಮಾರ್

0

ನವದೆಹಲಿ: ಕರ್ನಾಟಕ ಸರ್ಕಾರ ಜಾತಿಗಣತಿ ಕುರಿತಂತೆ ಮರುಸಮೀಕ್ಷೆಗೆ ಮುಂದಾಗಿರುವ ತೀರ್ಮಾನವನ್ನ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿರುವುದು ನ್ಯಾಯಸಮ್ಮತವಲ್ಲ ಎಂಬುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ದಿಲ್ಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ತಿಳಿಸಿದ್ದಾರೆ.

“ಬಿಜೆಪಿ ಸ್ವತಃ ಜಾತಿಗಣತಿ ವರದಿಗೆ ವಿರೋಧ ವ್ಯಕ್ತಪಡಿಸಿತ್ತು. ಈಗ ಗೊಂದಲ ನಿವಾರಣೆಗೆ ನಾವು ಮುಂದಾದಾಗ ತಮಗೆ ಏಕೆ ತೊಂದರೆ?” ಎಂದು ಡಿಕೆಶಿ ಪ್ರಶ್ನಿಸಿದ್ದು, ಸರ್ಕಾರದ ಉದ್ದೇಶವು ಸಮಾಜಗಳಿಗೆ ನ್ಯಾಯ ಒದಗಿಸಲು ಹಾಗೂ ತೊಂದರೆಗೊಳಗಾದ ಸಮುದಾಯಗಳಿಗೆ ಅವಕಾಶ ನೀಡಲು ಎಂಬುದನ್ನು ಪುನರುಚ್ಚರಿಸಿದರು.

“ಈಗಿನ ವರದಿಯನ್ನು ಸಂಪೂರ್ಣ ತಿರಸ್ಕರಿಸಲಾಗುತ್ತಿಲ್ಲ. ಆದರೆ ಕೆಲ ಅಂಕಿ ಅಂಶಗಳು ಬಿಟ್ಟಿದ್ದರೆ, ಅದನ್ನು ಸೇರಿಸಲು ಮರುಸಮೀಕ್ಷೆ ಅಗತ್ಯವಾಗಿದೆ. ಈ ಬಾರಿ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಲಾಗುವುದು” ಎಂದರು. ಲಂಬಾಣಿ, ಬೆಸ್ತ, ಜೈನ್ ಮುಂತಾದ ಸಮುದಾಯಗಳು ತಮ್ಮ ವಿವರಗಳು ಸರಿಯಾಗಿ ದಾಖಲಾಗಿಲ್ಲ ಎಂಬ ಅಂಶವನ್ನು ವ್ಯಕ್ತಪಡಿಸಿದ್ದು, ಅವರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಕಟಿಬದ್ಧವಾಗಿದೆ ಎಂದು ಹೇಳಿದರು.

ಡಿಕೆಶಿ, “ವೀರಶೈವ, ಒಕ್ಕಲಿಗ ಸೇರಿದಂತೆ ಹಲವು ಸಮಾಜಗಳ ಸ್ವಾಮೀಜಿಗಳು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಈ ಸಮೀಕ್ಷೆಯಲ್ಲಿ ಎಲ್ಲರೂ ತಮ್ಮ ಸಮುದಾಯದ ಬಗ್ಗೆ ಸರಿಯಾದ ಮಾಹಿತಿ ನೀಡಬೇಕೆಂಬ ಜವಾಬ್ದಾರಿ ಎಲ್ಲರ ಮೇಲೂ ಇದೆ” ಎಂದು ಹೇಳಿದರು.

ಜಾತಿ ಗಣತಿ ವಿಚಾರದಲ್ಲಿ ಹೈಕಮಾಂಡ್ ಮಟ್ಟದಲ್ಲಿ ಡಿ.ಕೆ. ಶಿವಕುಮಾರ್ ಅವರು ಮೇಲುಗೈ ಸಾಧಿಸಿದರೇ ಎಂದು ಕೇಳಿದಾಗ, ಇದರಲ್ಲಿ ಯಾರ ಕೈ ಮೇಲಾಗುವ ವಿಚಾರವಿಲ್ಲ ಎಂದು ಸ್ಪಷ್ಟಪಡಿಸಿದರು.

“ಇದು ನಮ್ಮ ಪಕ್ಷದ ರಾಜಕೀಯ ಅಜೆಂಡಾ. ರಾಹುಲ್ ಗಾಂಧಿ ಅವರು ಜಾತಿಗಣತಿಯ ಪ್ರಾಮುಖ್ಯತೆಯನ್ನು ಎತ್ತಿಹಿಡಿದಿದ್ದಾರೆ. ಬಿಜೆಪಿಯವರು ಇದನ್ನೇ ಈಗ ನಕಲು ಮಾಡಿದ್ದಾರೆ. ಆದರೆ ಈಗ ಮರುಸಮೀಕ್ಷೆ ಎಂಬ ಹೆಸರಿನಲ್ಲಿ ಗೊಂದಲ ಬಗೆಹರಿಸಲು ಮುಂದಾದಾಗ ಅದನ್ನು ವಿರೋಧಿಸುತ್ತಿದ್ದಾರೆ. ಇದು ರಾಜಕೀಯ ವ್ಯತಿರಿಕ್ತತೆಗೆ ನಿದರ್ಶನ” ಎಂದು ಡಿಕೆಶಿ ವಾಗ್ದಾಳಿ ನಡೆಸಿದರು.

ಇಡೀ ವಿವಾದದ ನಡುವೆ, ವಾಲ್ಮೀಕಿ ನಿಗಮದ ಅಕ್ರಮದ ಕುರಿತ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, “ಇದಕ್ಕೆ ನಮ್ಮ ಶಾಸಕರು, ಸಂಸದರು ಸಂಬಂಧವಿಲ್ಲ. ಅಧಿಕಾರಿಗಳು ದುರ್ಬಳಕೆ ಮಾಡಿದ್ದ ಶೇ.90 ರಷ್ಟು ಹಣವನ್ನು ಮತ್ತೆ ವಶಕ್ಕೆ ಪಡೆಯಲಾಗಿದೆ” ಎಂದು ತಿಳಿಸಿದರು. ನಾವು ಯಾವುದೇ ಚುನಾವಣೆಯಲ್ಲಿ ಹಣ ಹಂಚಿಲ್ಲ” ಎಂದರು.