ಬೆಂಗಳೂರು: ಪಿಎಸ್ಐ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪದ ಬಗ್ಗೆ ಯಾಕೆ ಸಿಐಡಿ ತನಿಖೆ ನಡೆಸುತ್ತಿಲ್ಲ? ಎಂದು ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನೆ ಮಾಡಿದ್ದಾರೆ
ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರ ಪುತ್ರನ ನೇರ ಕೈವಾಡವಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ. ಈ ಹಗರಣದ ತನಿಖೆಯನ್ನು ಸಿಐಡಿ ನಡೆಸುತ್ತಿದೆ. ಯತ್ನಾಳ್ರ ಈ ಆರೋಪ ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ಈ ಆರೋಪ ಮಾಡಿದ್ದಾರೆ. ಆದರೂ ಸಿಐಡಿ ಅಧಿಕಾರಿಗಳು ಯತ್ನಾಳ್ ಆರೋಪದ ಬಗ್ಗೆ ಯಾಕೆ ತನಿಖೆ ನಡೆಸುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಕಳೆದ ಅಧಿವೇಶನದಲ್ಲಿ ಪಿಎಸ್’ಐ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲು ನಾವು ಒತ್ತಾಯಿಸಿದ್ದೆವು. ಆದರೆ ಯತ್ನಾಳ್ ಈ ಹಗರಣದ ಕಿಂಗ್ಪಿನ್ ಎಕ್ಸ್ ಸಿಎಂ ಪುತ್ರ ಎಂದಿದ್ದಾರೆ. ಜೊತೆಗೆ ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ. ನಮ್ಮ ಒತ್ತಾಯಕ್ಕಂತೂ ಈ ಸರ್ಕಾರ ಒಪ್ಪಲಿಲ್ಲ. ಕೊನೆಯ ಪಕ್ಷ ಯತ್ನಾಳ್ ಒತ್ತಾಯಕ್ಕಾದರೂ ಬೆಲೆ ಕೊಡಲಿ ಎಂದು ಆಗ್ರಹಿಸಿದ್ದಾರೆ.
ಯತ್ನಾಳ್ ಆರೋಪ ಗಮನಿಸಿದರೆ ಪಿಎಸ್’ಐ ಹಗರಣದಲ್ಲಿ ಬಂಧಿತರಾಗಿರುವ ಅಮೃತ್ ಪೌಲ್ ಹರಕೆಯ ಕುರಿಯಂತೆ ಭಾಸವಾಗುತ್ತಿದೆ. ಈ ಹಗರಣದ ನಿಜವಾದ ಕಿಂಗ್ಪಿನ್ ಮಾಜಿ ಮುಖ್ಯಮಂತ್ರಿಯ ಮಗ. ಹಾಗಾದರೆ ಅದು ಯಾರು ಎಂಬುದೇ ಯಕ್ಷಪ್ರಶ್ನೆ ಎಂದು ಹೇಳಿದ್ದಾರೆ.
ಈ ಸತ್ಯ ಜನರಿಗೆ ಗೊತ್ತಾಗಬೇಕು. ಆ ಸತ್ಯ ತಿಳಿಯಬೇಕಾದರೆ ಒಂದೋ ನ್ಯಾಯಾಂಗ ತನಿಖೆಯಾಗಬೇಕು, ಇಲ್ಲವೆ ಸಿಬಿಐ ತನಿಖೆಯಾಗಬೇಕು. ಪಿಎಸ್’ಐ ನೇಮಕಾತಿಯ ಅಧಿಸೂಚನೆ ಹೊರಟಿದ್ದು ಇದೇ ಸರ್ಕಾರದ ಅವಧಿಯಲ್ಲಿ. ಹಗರಣ ನಡೆದಿರುವುದೂ ಇದೇ ಅವಧಿಯಲ್ಲಿ. ಈ ಅವಧಿಯಲ್ಲೇ ಬಿಎಸ್ವೈ ಮುಖ್ಯಮಂತ್ರಿ ಪದವಿ ಬಿಟ್ಟು ಮಾಜಿಯಾಗಿದ್ದಾರೆ. ಯತ್ನಾಳ್ ಆರೋಪ ಮಾಡುತ್ತಿರುವುದು ಬಿಎಸ್’ವೈ ಪುತ್ರನ ವಿರುದ್ಧವೇ? ಎಂದು ಕೇಳಿದ್ದಾರೆ.
ಬೆಂಕಿಯಿಲ್ಲದೆ ಹೊಗೆ ಬರಲು ಸಾಧ್ಯವಿಲ್ಲವೆಂಬಂತೆ ಯತ್ನಾಳ್ ಸುಮ್ಮನೆ ಆರೋಪ ಮಾಡಲು ಸಾಧ್ಯವೇ? ಪಿಎಸ್’ಐ ಹಗರಣ ಈ ಸರ್ಕಾರದ ಅತಿ ದೊಡ್ಡ ಕಳಂಕ. ಸಿಐಡಿ ಮೂಲಕ ಕಾಟಾಚಾರದ ತನಿಖೆ ಮಾಡಿಸಿ ತನ್ನ ಮೇಲಿರುವ ಕಳಂಕ ತೊಳೆದುಕೊಳ್ಳಲು ಈ ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಆದರೆ ಈ ಸರ್ಕಾರದ ಭಾಗವಾಗಿರುವವರೇ ಈ ಹಗರಣದಲ್ಲಿ ಪ್ರಭಾವಿಗಳ ಭಾಗಿಯ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಸರ್ಕಾರ ಪ್ರಾಮಾಣಿಕವಾಗಿದ್ದರೆ ಈಗಲಾದರೂ ಪಾರದರ್ಶಕ ತನಿಖೆ ನಡೆಸಲಿ ಎಂದು ದಿನೇಶ್ ಒತ್ತಾಯಿಸಿದ್ದಾರೆ.