ಮನೆ ಕಾನೂನು ಸಿನಿಮಾ ಸೆಟ್‌ ಗಳಲ್ಲಿ ಮಾದಕ ದ್ರವ್ಯ, ಮದ್ಯದ ವ್ಯಾಪಕ ಬಳಕೆ: ತನಿಖೆ ನಡೆಸುವಂತೆ ಎಸ್ಐಟಿಗೆ ಆದೇಶಿಸಿದ...

ಸಿನಿಮಾ ಸೆಟ್‌ ಗಳಲ್ಲಿ ಮಾದಕ ದ್ರವ್ಯ, ಮದ್ಯದ ವ್ಯಾಪಕ ಬಳಕೆ: ತನಿಖೆ ನಡೆಸುವಂತೆ ಎಸ್ಐಟಿಗೆ ಆದೇಶಿಸಿದ ಕೇರಳ ಹೈಕೋರ್ಟ್

0

ಸಿನಿಮಾ ಸೆಟ್‌ ಮತ್ತು ಚಿತ್ರರಂಗದ ಕೆಲಸದ ಸ್ಥಳಗಳಲ್ಲಿ ಮದ್ಯ ಮತ್ತು ಮಾದಕ ದ್ರವ್ಯಗಳ ವ್ಯಾಪಕ ಬಳಕೆ ನಡೆಯುತ್ತಿರುವ ಕುರಿತು ತನಿಖೆ ನಡೆಸುವಂತೆ ಮಲಯಾಳಂ ಚಲನಚಿತ್ರೋದ್ಯಮಕ್ಕೆ ಸಂಬಂಧಿಸಿದಂತೆ ನೀಡಲಾಗಿರುವ ಲೈಂಗಿಕ ಕಿರುಕುಳ ದೂರುಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಕೇರಳ ಹೈಕೋರ್ಟ್‌ ನಿರ್ದೇಶನ ನೀಡಿದೆ.

Join Our Whatsapp Group

ನ್ಯಾ. ಹೇಮಾ ಸಮಿತಿ ವರದಿಗೆ ಸಂಬಂಧಿಸಿದ ಮೊಕದ್ದಮೆಗಳ ವಿಚಾರಣೆ ವೇಳೆ ಸಿನಿಮಾ ಸೆಟ್‌ಗಳಲ್ಲಿ ಮಾದಕ ವಸ್ತು ಮತ್ತು ಮದ್ಯ ಸೇವನೆ ಮಾಡದಂತೆ ನಿಷೇಧ ಆದೇಶ ಜಾರಿಗೊಳಿಸುವಂತೆ ಅಬಕಾರಿ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ವಕೀಲರಾದ ಟಿ ಬಿ ಮಿನಿ ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿ ಎ ಕೆ ಜಯಶಂಕರನ್ ನಂಬಿಯಾರ್ ಮತ್ತು ನ್ಯಾಯಮೂರ್ತಿ ಸಿ ಎಸ್‌ ಸುಧಾ ಅವರಿದ್ದ ವಿಶೇಷ ಪೀಠ ಪುರಸ್ಕರಿಸಿತು.

ಮದ್ಯ ಮತ್ತು ಮಾದಕ ವಸ್ತುಗಳ ಅತಿಯಾದ ಬಳಕೆ ತಡೆಗೆ ಎಸ್‌ಐಟಿ ಅಗತ್ಯ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದ ಪೀಠ ಭವಿಷ್ಯದಲ್ಲಿ ಇಂತಹ ಚಟುವಟಿಕೆಗಳನ್ನು ತಡೆಯಲು ನಿರಂತರ ಕ್ರಮ ತೆಗೆದುಕೊಳ್ಳಬೇಕು ಎಂದಿತು.

ಮಲಯಾಳಂ ಚಲನಚಿತ್ರೋದ್ಯಮದಲ್ಲಿ (ಮಾಲಿವುಡ್‌) ಲೈಂಗಿಕ ಕಿರುಕುಳ ಮತ್ತು ಲಿಂಗ ಅಸಮಾನತೆಯಂತಹ ಗಂಭೀರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ ನ್ಯಾ. ಹೇಮಾ ಸಮಿತಿ ವರದಿ ಆಧರಿಸಿ ತನಿಖೆ ನಡೆಸಲು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲೆಂದೇ ನ್ಯಾಯಮೂರ್ತಿ ಎ.ಕೆ.ಜಯಶಂಕರನ್ ನಂಬಿಯಾರ್ ನೇತೃತ್ವದ ವಿಶೇಷ ಪೀಠ ರಚನೆಯಾಗಿದೆ. ಲೈಂಗಿಕ ಅಪರಾಧದ ಆರೋಪಿಗಳ ವಿರುದ್ಧ ಕ್ರಿಮಿನಲ್‌ ಕ್ರಮ ಕೈಗೊಳ್ಳಬೇಕೆಂಬ ಮನವಿ ಕೂಡ ವಿಶೇಷ ಪೀಠದ ಮುಂದಿರುವ ಪಿಐಎಲ್‌ಗಳಲ್ಲಿ ಒಂದು.

ಹೇಮಾ ಸಮಿತಿ ವರದಿಯಲ್ಲಿ ದಾಖಲಾದ ಸಾಕ್ಷಿಗಳ ಹೇಳಿಕೆಗಳು ಸಂಜ್ಞೇಯ ಅಪರಾಧ ನಡೆದಿರುವುದನ್ನು ಬಹಿರಂಗಪಡಿಸಿವೆ ಎಂದು ಸೋಮವಾರ ತಿದ್ದುಪಡಿ ಇಲ್ಲದ ವರದಿಯ ಆವೃತ್ತಿಯನ್ನು ಪರಿಶೀಲಿಸಿದ ನ್ಯಾಯಾಲಯ ತಿಳಿಸಿತು.

ಅದರಂತೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 173ರ (ಸಂಜ್ಞೇಯ ಅಪರಾಧ ಪ್ರಕರಣಗಳಲ್ಲಿನ ಮಾಹಿತಿ) ಪ್ರಕಾರ ಈ ಹೇಳಿಕೆಗಳನ್ನು ಮಾಹಿತಿ ಎಂದು ಪರಿಗಣಿಸುವಂತೆ ಸ್ಪಷ್ಟಪಡಿಸಿದ ನ್ಯಾಯಾಲಯ ಕಾನೂನು ಪ್ರಕಾರ ಕಾರ್ಯನಿರ್ವಹಿಸುವಂತೆ ಎಸ್‌ಐಟಿಗೆ ನಿರ್ದೇಶನ ನೀಡಿದೆ.

ಲೈಂಗಿಕ ಕಿರುಕುಳದ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖಾ ಪ್ರಕ್ರಿಯೆಯಲ್ಲಿ ಸಂತ್ರಸ್ತರ ಹೆಸರು ಬಹಿರಂಗವಾಗದಂತೆ ಎಸ್ಐಟಿ ನೋಡಿಕೊಳ್ಳಬೇಕು. ತನಿಖಾ ಪ್ರಕ್ರಿಯೆಗೆ ಸಂಬಂಧಿಸಿದಂತೆ, ಸಂಬಂಧಿತ ಕಾನೂನು ನಿಬಂಧನೆಗಳನ್ನು ಪಾಲಿಸಬೇಕು. ತನಿಖಾಧಿಕಾರಿ ಅಂತಿಮ ವರದಿ  ಸಲ್ಲಿಸಲು ಸಾಕಷ್ಟು ಪುರಾವೆಗಳಿವೆಯೇ ಎಂದು ನಿರ್ಧರಿಸಬೇಕು. ಇಲ್ಲದಿದ್ದರೆ, ಉಲ್ಲೇಖಿತ ವರದಿ ಸಲ್ಲಿಸಬೇಕು ಎಂದ ನ್ಯಾಯಾಲಯ ಪ್ರಕರಣವನ್ನು ಅಕ್ಟೋಬರ್ 28ಕ್ಕೆ ಮುಂದೂಡಿತು.