ಮನೆ ಕಾನೂನು ಪತ್ನಿ ಮಕ್ಕಳ ಕಗ್ಗೋಲೆ ಪ್ರಕರಣ: ಆರೋಪಿ ಪತಿಗೆ ವಿಧಿಸಿದ ಮರಣದಂಡನೆ ಶಿಕ್ಷೆ ಎತ್ತಿ ಹಿಡಿದ ಧಾರವಾಡ...

ಪತ್ನಿ ಮಕ್ಕಳ ಕಗ್ಗೋಲೆ ಪ್ರಕರಣ: ಆರೋಪಿ ಪತಿಗೆ ವಿಧಿಸಿದ ಮರಣದಂಡನೆ ಶಿಕ್ಷೆ ಎತ್ತಿ ಹಿಡಿದ ಧಾರವಾಡ ಹೈಕೋರ್ಟ್

0

ಧಾರವಾಡ: ಅನುಮಾನದ ಭೂತ ಹೊಕ್ಕು ಪತ್ನಿ ಮತ್ತು ನಾಲ್ವರು ಮಕ್ಕಳನ್ನು ಕೊಂದ ಪಾಪಿ ಪತಿ ಬೈಲೂರಿ ತಿಪ್ಪಯ್ಯನಿಗೆ ಬಳ್ಳಾರಿಯ ಸೆಷನ್ಸ್ ಕೋರ್ಟ್ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಧಾರವಾಡ ಹೈಕೋರ್ಟ್ ಎತ್ತಿಹಿಡಿದಿದೆ. 2017 ಫೆಬ್ರವರಿ 25 ರಂದು ತನ್ನ ಪತ್ನಿ ಪಕ್ಕೀರಮ್ಮ ಹಾಗೂ ನಾಲ್ವರು ಮಕ್ಕಳನ್ನು ಕೊಲೆ ಮಾಡಿದ್ದ ಬಳ್ಳಾರಿಯ ಬೈಲೂರು ತಿಪ್ಪಯ್ಯ ಮರಣದಂಡಣೆ ಶಿಕ್ಷೆಗೆ ಒಳಗಾದ ಆರೋಪಿ.

Join Our Whatsapp Group

ಬಳ್ಳಾರಿಯ ಬೈಲೂರು ತಿಪ್ಪಯ್ಯ 12 ವರ್ಷಗಳ ಹಿಂದೆ ಪಕ್ಕೀರಮ್ಮ ಎಂಬಾಕೆಯನ್ನು ಮದುವೆಯಾಗಿದ್ದ. ತನ್ನ ನಾಲ್ವರು ಮಕ್ಕಳ ಪೈಕಿ ಬಸಮ್ಮ, ನಾಗರಾಜ್, ಪವಿತ್ರ ತನಗೆ ಹುಟ್ಟಿದವರಲ್ಲ ಎಂದು ಅನೈತಿಕ ಸಂಬಂಧ ಶಂಕಿಸಿ ಪದೇ ಪದೇ ಗಲಾಟೆ ಮಾಡುತ್ತಿದ್ದ. 2017 ಫೆಬ್ರವರಿ 25 ರಂದು ಮತ್ತೆ ಜಗಳ ತೆಗೆದ ಬೈಲೂರು ತಿಪ್ಪಯ್ಯ ತನ್ನ ಪತ್ನಿ ಪಕ್ಕೀರಮ್ಮ, ನಾದಿನಿ ಗಂಗಮ್ಮ, ಮಕ್ಕಳಾದ ಬಸಮ್ಮ, ನಾಗರಾಜ್, ಪವಿತ್ರಳ ಮೇಲೆ ಮಚ್ಚಿನಿಂದ ಕೊಚ್ಚಿದ್ದ. ಪರಿಣಾಮ ನಾಲ್ವರು ಸ್ಥಳದಲ್ಲೇ ತೀರಿಕೊಂಡರೆ, ಅಪ್ರಾಪ್ತ ಬಾಲಕಿ ಬಸಮ್ಮ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಳು.

ಅಮಾನವೀಯವಾಗಿ ನಾಲ್ವರನ್ನು ಕೊಂದಿದ್ದಲ್ಲದೇ, ಅನೈತಿಕ ಸಂಬಂಧ ಹೊಂದಿದವರನ್ನು ಕೊಂದಿದ್ದೇನೆ, ನನಗೆ ಹುಟ್ಟದ ಮಕ್ಕಳನ್ನೂ ಕತ್ತರಿಸಿದ್ದೇನೆ ಎಂದು ಕೂಗಿಕೊಂಡಿದ್ದ. ಪ್ರಕರಣ ಸಂಬಂಧ ಕಂಪ್ಲಿ ಪೊಲೀಸರು ಬೈಲೂರು ತಿಪ್ಪಯ್ಯನನ್ನು ಬಂಧಿಸಿ ತನಿಖೆಗೆ ಒಳಪಡಿಸಿ ಆರೋಪಪಟ್ಟಿ ದಾಖಲಿಸಿದ್ದರು. ವಿಚಾರಣೆ ನಡೆಸಿದ ಬಳ್ಳಾರಿಯ ಸೆಷನ್ಸ್ ಕೋರ್ಟ್ ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು.

ಆದರೆ ಇದನ್ನು ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದ ಬೈಲೂರು ತಿಪ್ಪಯ್ಯನ ಪರ ವಕೀಲರು ವಾದ ಮಂಡಿಸಿ, ಕೊಲೆ ಪ್ರಕರಣಕ್ಕೆ ಪ್ರತ್ಯಕ್ಷದರ್ಶಿಗಳಿಲ್ಲ. ಬೇರೆ ಯಾರೋ ಕೊಂದು ಈತನ ಮೇಲೆ ಆರೋಪ ಹೊರಿಸಲಾಗಿದೆ ಎಂದು ವಾದಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಮತ್ತು ನ್ಯಾಯಮೂರ್ತಿ ಜಿ. ಬಸವರಾಜ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ, ಅಂತಿಮ ತೀರ್ಪು ಪ್ರಕಟಿಸುವ ಮುನ್ನ ಹಲವು ಆಯಾಮಗಳಲ್ಲಿ ಪ್ರಕರಣದ ವಿಚಾರಣೆ ನಡೆಸಿತ್ತು.

ಅಲ್ಲದೆ, ಜೈಲಿನಲ್ಲಿ ಅಪರಾಧಿಯ ವರ್ತನೆ, ಆತನ ಮಾನಸಿಕ ಸ್ಥಿತಿಯ ವಿಶ್ಲೇಷಣೆ ನಡೆಸಿತ್ತು. ಆತನ ಕುಟುಂಬದ ಹಿನ್ನೆಲೆ, ವೈವಾಹಿಕ ಸಂಬಂಧ, ಹಿಂಸಾತ್ಮಕ ಮನಸ್ಸಿನ ಹಿನ್ನೆಲೆ, ಶೈಕ್ಷಣಿಕ, ಸಾಮಾಜಿಕ, ಕ್ರಿಮಿನಲ್ ಹಿನ್ನೆಲೆಯನ್ನು ಅಧ್ಯಯನಕ್ಕೆ ಒಳಪಡಿಸಿತ್ತು. ಈ ಬಗ್ಗೆ ತಜ್ಞರಿಂದ ವರದಿಯನ್ನೂ ತರಿಸಿಕೊಂಡು ಅದರ ವಿಶ್ಲೇಷಣೆ ನಡೆಸಿ ಅಪರಾಧಿಗೆ ಮರಣದಂಡನೆ ಶಿಕ್ಷೆಯನ್ನು ಎತ್ತಿ ಹಿಡಿದಿದೆ.

ಮರಣದಂಡನೆ ಶಿಕ್ಷೆಯನ್ನು ವಿಧಿಸುವ ಮುನ್ನ ನ್ಯಾಯಾಲಯಗಳು ಈ ಅಂಶಗಳ ಬಗ್ಗೆ ವರದಿ ಪಡೆಯುವುದು ಅಗತ್ಯವೆಂದು ಹೈಕೋರ್ಟ್ ನಿರ್ದೇಶನ ನೀಡಿದೆ. ಇಬ್ಬರು ಮಹಿಳೆಯರು ಮೂವರು ಮಕ್ಕಳ ಮೇಲೆ ಅಪರಾಧಿ ನಡೆಸಿದ ಕ್ರೌರ್ಯ ಎಂತಹವರ ಆತ್ಮಸಾಕ್ಷಿಯನ್ನೂ ಕಲಕುವಂತದ್ದೆಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಮರಣದಂಡನೆ ಶಿಕ್ಷೆಯನ್ನು ಎತ್ತಿಹಿಡಿದಿರುವ ಹೈಕೋರ್ಟ್ ಬದುಕುಳಿದ ಏಕೈಕ ಪುತ್ರಿಗೆ ಪರಿಹಾರ, ನೆರವು ಒದಗಿಸುವಂತೆ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ. ಒಟ್ಟಿನಲ್ಲಿ ಅನೈತಿಕ ಸಂಬಂಧದ ಶಂಕೆಯಲ್ಲೇ ಕ್ರೌರ್ಯ ಮೆರೆದು ಐವರ ಕಗ್ಗೊಲೆಗೆ ಕಾರಣನಾದವನಿಗೆ ಹೈಕೋರ್ಟ್ ಮರಣದಂಡನೆ ಶಿಕ್ಷೆಯನ್ನು ಖಚಿತಪಡಿಸಿದೆ.