ಮೈಸೂರು: ಗಂಡು ಮಗುವಿಗೆ ಜನ್ಮ ನೀಡಲಿಲ್ಲ ಎಂಬ ಕಾರಣಕ್ಕೆ ಪತ್ನಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯು ಎಚ್‌ಡಿ ಕೋಟೆ ಪಟ್ಟಣದ ಸಮೀಪವಿರುವ ಸೋನಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ. ಬಂಧಿತ ವ್ಯಕ್ತಿಯನ್ನು ಚಂದ್ರು ಎಂದು ಗುರುತಿಸಲಾಗಿದೆ. ಸಂತ್ರಸ್ತೆಯನ್ನು ಶಿವಮ್ಮ ಎನ್ನಲಾಗಿದ್ದು, ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದರಿಂದ ಸಮಾಧಾನಗೊಳ್ಳದ ಚಂದ್ರು, ಗಂಡು ಮಗುವಿಗೆ ಜನ್ಮ ನೀಡಲಿಲ್ಲ ಎಂದು ಶಿವಮ್ಮಗೆ ಚಿತ್ರಹಿಂಸೆ ನೀಡಿದ್ದಾನೆ. ಚಂದ್ರು ಪೋಷಕರಾದ ರಾಮೇಗೌಡ ಮತ್ತು ಕೆಂಪಮ್ಮ ಕೂಡ ಆತನಿಗೆ ಬೆಂಬಲ ನೀಡಿದ್ದು, ಅವರೂ ಶಿವಮ್ಮಗೆ ಚಿತ್ರಹಿಂಸೆ ನೀಡಿದ್ದಾರೆ ಎನ್ನಲಾಗಿದೆ.
ಗಂಡು ಮಗು ಬೇಕು ಎಂದು ಒತ್ತಾಯಿಸದೆ, ಶಿವಮ್ಮನಿಗೆ ಚಿತ್ರಹಿಂಸೆ ನೀಡುವುದನ್ನು ನಿಲ್ಲಿಸಿ ಎಂದು ಚಂದ್ರು ಹಾಗೂ ಆತನ ಪೋಷಕರಿಗೆ ಕುಟುಂಬದ ಹಿರಿಯರು ಮನವರಿಕೆ ಮಾಡಿಕೊಡಲು ಯತ್ನಿಸಿದ್ದಾರೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಚಂದ್ರು ಪತ್ನಿಯ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ.
ಚಿತ್ರಹಿಂಸೆ ತಾಳಲಾರದೆ ಶಿವಮ್ಮ ಪತಿ ವಿರುದ್ಧ ಎಚ್.ಡಿ. ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಂಧನದ ಭೀತಿಯಿಂದ ಚಂದ್ರುವಿನ ಪೋಷಕರು ನಾಪತ್ತೆಯಾಗಿದ್ದಾರೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.