ಮಂಡ್ಯ(Mandya): ಹೆಚ್ಐವಿ ಪೀಡಿತ ವ್ಯಕ್ತಿಯನ್ನು ಆತನ ಪತ್ನಿ, ಮತ್ತು ಮಕ್ಕಳು ಮೂರು ತಿಂಗಳಿನಿಂದ ಗೃಹ ಬಂಧನದಲ್ಲಿರಿಸಿದ್ದು, ಪೊಲೀಸರು ಆತನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಕುರಿತು ವ್ಯಕ್ತಿಯ ಸಹೋದರಿ ಪುಟ್ಟತಾಯಮ್ಮ ಪೊಲೀಸರಿಗೆ ಮಾಹಿತಿ ನೀಡಿದ್ದು, ಮಂಡ್ಯದ 100 ಫೀಟ್ ರಸ್ತೆಯ ಬಳಿ ಇರುವ ವಿದ್ಯಾ ನಗರದಲ್ಲಿ ಆಸ್ತಿ ಆಸೆಗಾಗಿ ಹೆಚ್ಐವಿ ಪೀಡಿತ ಗಂಡನನ್ನೇ ಆತನ ಪತ್ನಿ ಹಾಗೂ ಮಕ್ಕಳು ಮನೆಯ ಶೆಡ್ ನಲ್ಲಿ ಕೂಡಿ ಹಾಕಿದ್ದಾರೆ. ಆತನಿಗೆ ಚಿಕಿತ್ಸೆ ಕೊಡಿಸದೆ ಸರಿಯಾಗಿ ಮನೆಯಲ್ಲಿ ಆರೈಕೆ ಮಾಡುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾರೆ.
ಪೊಲೀಸರು ರಕ್ಷಣೆಗೆ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಗೃಹ ಬಂಧನದಲ್ಲಿಟ್ಟಿದ್ದ ಹೆಂಡತಿ ಮತ್ತು ಮಕ್ಕಳು ಕೂಗಾಡಿ ಕಿರುಚಾಡುತ್ತಾ ಹೈಡ್ರಾಮ ಮಾಡಿದ್ದಾರೆ. ಬಳಿಕ ಪೊಲೀಸರು ಎಲ್ಲರನ್ನು ಸುಮ್ಮನಿರಿಸಿ ಗೃಹ ಬಂಧನದಲ್ಲಿದ್ದ ವ್ಯಕ್ತಿಯ ವಿಚಾರಣೆ ನಡೆಸಿದರು. ಈ ವೇಳೆ ತನ್ನನ್ನು ಗೃಹಬಂಧನದಲ್ಲಿರಿಸಿರುವುದಾಗಿ ಶಿವಸ್ವಾಮಿ ಪೊಲೀಸರಿಗೆ ಹೇಳಿಕೆ ನೀಡಿದ್ದು, ತನಗೆ ರಕ್ಷಣೆ ಮತ್ತು ಚಿಕಿತ್ಸೆ ಕೊಡಿಸುವಂತೆ ಮನವಿ ಮಾಡಿದ್ದಾನೆ.
ಕಳೆದ ಮೂರು ತಿಂಗಳಿನಿಂದ ತನ್ನ ಹೆಂಡತಿ, ಮಕ್ಕಳು ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ತನ್ನನ್ನು ಗೃಹ ಬಂಧನದಲ್ಲಿರಿಸಿದ್ದಾರೆಂಬ ದೂರಿನ ಮೇರೆಗೆ ಪೊಲೀಸರು ವ್ಯಕ್ತಿಯನ್ನು ರಕ್ಷಣೆ ಮಾಡಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪತ್ನಿ ಮತ್ತು ಮಗಳ ಸ್ಪಷ್ಟನೆ ಏನು ?
ಇನ್ನು ತನ್ನ ಪತಿ ಶಿವಸ್ವಾಮಿಯನ್ನು ಗೃಹಬಂಧನಲ್ಲಿ ಇರಿಸಿದ್ದರ ಬಗ್ಗೆ ಸ್ಪಷ್ಟನೆ ಕೊಟ್ಟ ಪತ್ನಿ ಜಯಲಕ್ಷ್ಮಿ ಮತ್ತು ಮಗಳು ಪವಿತ್ರ, ಶಿವಸ್ವಾಮಿಗೆ ಅಪಘಾತದಲ್ಲಿ ಕಾಲು ಮುರಿದಿದೆ. ಅವರಿಗೆ ಎಚ್ಐವಿ ಇದೆ. ಹಾಗಾಗಿ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳುತ್ತಿಲ್ಲ. ಇಲ್ಲೆ ನಾವು ನೋಡಿಕೊಳ್ಳುತ್ತಿದ್ದೇವೆ. ಆಸ್ತಿ ಆಸೆಗಾಗಿ ಅವರ ಅಕ್ಕ-ತಂಗಿಯರು ಇದೀಗ ನಮ್ಮ ಮೇಲೆ ಈ ರೀತಿ ಆರೋಪ ಮಾಡ್ತಿರೋದಾಗಿ ಆರೋಪಿಸಿದರು.














