ಮನೆ ಅಪರಾಧ ಪತ್ನಿಯ ಕೊಲೆ ಪ್ರಕರಣ: ಎಎಪಿ ನಾಯಕ ಸೇರಿದಂತೆ 6 ಮಂದಿ ಬಂಧನ

ಪತ್ನಿಯ ಕೊಲೆ ಪ್ರಕರಣ: ಎಎಪಿ ನಾಯಕ ಸೇರಿದಂತೆ 6 ಮಂದಿ ಬಂಧನ

0

ಲೂಧಿಯಾನ: ಪತ್ನಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಎಎಪಿ ನಾಯಕ ಅನೋಖ್ ಮಿತ್ತಲ್, ಅವರ  ಸ್ನೇಹಿತೆ ಸೇರಿದಂತೆ 6 ಮಂದಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Join Our Whatsapp Group

ಶನಿವಾರ ಲೂಧಿಯಾನ-ಮಲೇರ್ಕೋಟ್ಲಾ ರಸ್ತೆಯಲ್ಲಿರುವ ಹೋಟೆಲ್‌ನಲ್ಲಿ ಊಟ ಮುಗಿಸಿ ವಾಪಸ್‌ ಬರುತ್ತಿದ್ದಾಗ  ರೂರ್ಕಾ ಗ್ರಾಮದ ಸಿಧ್ವಾನ್‌ ಕಾಲುವೆ ಬಳಿ ಕಾರನ್ನು ತಡೆದ  ದರೋಡೆಕೋರರು ಹರಿತವಾದ ಆಯುಧಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಪತ್ನಿ ಲಿಪ್ಸಿ ಮಿತ್ತಲ್ (33) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಅನೋಖ್ ಪೊಲೀಸರಿಗೆ ದೂರು ನೀಡಿದ್ದರು.

ಆದರೆ ಪ್ರಕರಣದ ವಿಚಾರಣೆ ವೇಳೆ ಕೊಲೆಯ ಪ್ರಮುಖ ಸಂಚುಕೋರ ಪತಿ ಅನೋಖ್ ಮಿತ್ತಲ್ ಎಂದು ತಿಳಿದುಬಂದಿದೆ ಎಂದು ಪೊಲೀಸ್ ಆಯುಕ್ತ ಕುಲದೀಪ್ ಸಿಂಗ್ ಚಾಹಲ್ ಹೇಳಿದ್ದಾರೆ.

ಈ ಸಂಬಂಧ ಅನೋಖ್ ಮಿತ್ತಲ್ (35), ಅವರ ಸ್ನೇಹಿತೆ, ಸುಪಾರಿ ಹಂತಕರಾದ ಅಮೃತ್‌ಪಾಲ್ ಸಿಂಗ್ ಅಲಿಯಾಸ್ ಬಲ್ಲಿ (26), ಗುರುದೀಪ್ ಸಿಂಗ್ ಅಲಿಯಾಸ್ ಮನ್ನಿ (25), ಸೋನು ಸಿಂಗ್ (24) ಮತ್ತು ಸಾಗರ್‌ದೀಪ್ ಸಿಂಗ್ ಅಲಿಯಾಸ್ ತೇಜಿ (30) ಅವರನ್ನು  ಬಂಧಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ನನಗೆ ವಿವಾಹೇತರ ಸಂಬಂಧ ಇರುವುದು  ಪತ್ನಿಗೆ ಗೊತ್ತಾಗಿತ್ತು. ಹಾಗಾಗಿ ಗೆಳತಿಯೊಂದಿಗೆ ಸೇರಿ ಆಕೆಯ ಮುಗಿಸಲು ಸಂಚು ರೂಪಿಸಿದ್ದಾಗಿ ಅನೋಖ್ ಮಿತ್ತಲ್ ಬಾಯ್ಬಿಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಏತನ್ಮಧ್ಯೆ, ಸುಪಾರಿ ಹಂತಕರ ಗ್ಯಾಂಗ್‌ನ ಕಿಂಗ್‌ಪಿನ್ ಗುರುಪ್ರೀತ್ ಸಿಂಗ್ ಅಲಿಯಾಸ್ ಗೋಪಿ ಎಂಬಾತ ತಲೆಮರೆಸಿಕೊಂಡಿದ್ದಾನೆ ಎಂದು ಅವರು ಹೇಳಿದ್ದಾರೆ.

ಅನೋಖ್ ಹಂತಕರಿಗೆ ₹2.5 ಲಕ್ಷ ನೀಡುವುದಾಗಿ ಭರವಸೆ ನೀಡಿದ್ದ. ಮುಂಗಡವಾಗಿ ₹50,000 ನೀಡಿದ್ದ. ಈ ಬಗ್ಗೆ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.