ಚಾಮರಾಜನಗರ : ಮನೆಗೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಕಾಡಾನೆ ದಾಳಿಗೆ ಬಲಿಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹಾಡಿನಕಣಿವೆ ಎಂಬ ಅರಣ್ಯ ಪ್ರದೇಶದ ಕಾಲುದಾರಿಯಲ್ಲಿ ಇಂದು ನಡೆದಿದೆ.
ತಮಿಳುನಾಡಿನ ಮಸನಿಗುಡಿ ಮೂಲದ ಕರಿಯ(48) ಮೃತ ದುರ್ದೈವಿ. ಗುಂಡ್ಲುಪೇಟೆ ತಾಲೂಕಿನ ಮಂಗಲ ಗ್ರಾಮದ ನೆಂಟರ ಮನೆಯಲ್ಲಿ ಕರಿಯ ವಾಸವಾಗಿದ್ದರು. ಮತ್ತಿಬ್ಬರ ಜೊತೆ ಹಾಡಿನಕಣಿವೆಯಿಂದ ಮಂಗಲ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕಾಲುದಾರಿಯಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆ ಕಾಡಾನೆ ದಿಢೀರ್ ದಾಳಿ ನಡೆಸಿ ಕರಿಯ ಅವರನ್ನು ಕೊಂದುಹಾಕಿದೆ. ಉಳಿದ ಇಬ್ಬರು ಓಡಿ ಹೋಗಿ ಬಚಾವ್ ಆಗಿದ್ದಾರೆ.
ಮಾಹಿತಿ ಅರಿತ ಬಂಡೀಪುರ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.














