ಮನೆ ಅಂತಾರಾಷ್ಟ್ರೀಯ ಚಿಲಿಯಲ್ಲಿ ಕಾಡ್ಗಿಚ್ಚು: 99 ಮಂದಿ ಸಾವು, 1,600 ಮನೆಗಳು ನಾಶ

ಚಿಲಿಯಲ್ಲಿ ಕಾಡ್ಗಿಚ್ಚು: 99 ಮಂದಿ ಸಾವು, 1,600 ಮನೆಗಳು ನಾಶ

0

ವಿನಾ ಡೆಲ್‌ ಮಾರ್‌: ಮಧ್ಯ ಚಿಲಿಯಲ್ಲಿ ತಾಪಮಾನ ಹೆಚ್ಚಳದಿಂದಾಗಿ ಉಂಟಾದ ಕಾಡ್ಗಿಚ್ಚಿಗೆ ಇದುವರೆಗೆ 99 ಜನರು ಮೃತಪಟ್ಟಿದ್ದು ಅದರಲ್ಲಿ 32 ಮೃತದೇಹಗಳನ್ನು ಗುರುತಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಕಿ ನಂದಿಸಲು 19 ಹೆಲಿಕಾಪ್ಟರ್‌ಗಳು ಮತ್ತು 450 ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಕಾಡ್ಗಿಚ್ಚಿನಿಂದ ಸುಮಾರು 1,600 ಮನೆಗಳು ನಾಶವಾಗಿದ್ದು, ನೂರಾರು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಮಧ್ಯ ಚಿಲಿಯ ವಾಲ್ಪಾರೈಸೊ ಪ್ರದೇಶದ ಹಲವು ಪ್ರದೇಶಗಳಲ್ಲಿ ಹೊಗೆ ಆವರಿಸಿದೆ. ಸಾವಿರಾರು ಜನರು ತಮ್ಮ ಮನೆಗಳನ್ನು ಸ್ಥಳಾಂತರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಕಾಡ್ಗಿಚ್ಚು ಪೀಡಿತ ಪ್ರದೇಶಗಳನ್ನು ತಲುಪಲು ರಕ್ಷಣಾ ತಂಡಗಳು ಹರಸಾಹಸ ಪಡುತ್ತಿವೆ ದಟ್ಟ ಅರಣ್ಯವಾದ ಕಾರಣ ಪ್ರದೇಶವನ್ನು ತಲುಪುವುದು ಕಷ್ಟ ಸಾಧ್ಯವಾಗಿದೆ.

ವಾಲ್ಪಾರೈಸೊದಲ್ಲಿ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಆಂತರಿಕ ಸಚಿವ ಕೆರೊಲಿನಾ ತೋಹಾ ಆತಂಕ ವ್ಯಕ್ತಪಡಿಸಿದ್ದಾರೆ.

ಬೇಸಿಗೆಯ ಸಮಯದಲ್ಲಿ ಚಿಲಿಯಲ್ಲಿ ಕಾಡ್ಗಿಚ್ಚುಗಳು ಸಾಮಾನ್ಯವಾಗಿದ್ದು ಆದರೆ ಇದನ್ನು ನಿಭಾಯಿಸುವುದು ಕಷ್ಟದ ಕೆಲಸ ಎಂದು ಹೇಳಿದ್ದಾರೆ. ಅಲ್ಲದೆ 2010ರ ಭೂಕಂಪದ ನಂತರ ದೇಶವು ಅತ್ಯಂತ ಭೀಕರ ವಿಪತ್ತನ್ನು ಎದುರಿಸುತ್ತಿದೆ ಎಂದು ಅವರು ಹೇಳಿದರು. ವಾಲ್ಪಾರೈಸೊ ಪ್ರದೇಶದಲ್ಲಿ ಮೂರು ಶೆಲ್ಟರ್‌ಗಳನ್ನು ಸ್ಥಾಪಿಸಲಾಗಿದ್ದು ಇಲ್ಲಿನ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ.

ಶುಕ್ರವಾರ ಮತ್ತು ಶನಿವಾರದ ನಡುವೆ ಸಂಭವಿಸಿದ ಕಾಡ್ಗಿಚ್ಚಿನಿಂದ ಹಾನಿಗೊಳಗಾದ ಪ್ರದೇಶವು 30,000 ರಿಂದ 43,000 ಹೆಕ್ಟೇರ್‌ಗಳಿಗೆ ಏರಿದೆ ಎಂದು ತೋಹಾ ಹೇಳಿದ್ದಾರೆ. ನಗರ ಪ್ರದೇಶಗಳಿಗೆ ತೀರಾ ಸಮೀಪದಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಅಧಿಕಾರಿಗಳಿಗೆ ದೊಡ್ಡ ಆತಂಕವಾಗಿದೆ.

ಹಿಂದಿನ ಲೇಖನಶಂಕರ್ ಮಹಾದೇವನ್​, ಜಾಕಿರ್ ಹುಸೇನ್​ ಅವರ ‘ಶಕ್ತಿ ಬ್ಯಾಂಡ್’ ಗೆ ಗ್ರ್ಯಾಮಿ ಪ್ರಶಸ್ತಿ
ಮುಂದಿನ ಲೇಖನಬುರ್ಖಾ ಧರಿಸಿ ಬಂದು ಸ್ವಂತ ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ದೋಚಿದ ಮಹಿಳೆ