ವನ್ಯಜೀವಿಗಳು ರಾಷ್ಟ್ರದ ಸಂಪತ್ತಾಗಿದ್ದು ಅವುಗಳ ಮೇಲೆ ಕೇಂದ್ರ ಅಥವಾ ರಾಜ್ಯ ಸರ್ಕಾರಗಳಾಗಲಿ, ಇನ್ನಾರೇ ಅಗಲಿ ಮಾಲೀಕತ್ವ ಹೊಂದಲು ಸಾಧ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಎ ವಿಶ್ವನಾಥನ್ ಮತ್ತು ತಮಿಳುನಾಡು ಸರ್ಕಾರ ನಡುವಣ ಪ್ರಕರಣ].
ಹೀಗಾಗಿ ತಮಿಳುನಾಡಿನ ಪುನರ್ವಸತಿ ಕೇಂದ್ರದಿಂದ ಗುಜರಾತ್‌ನ ಜಾಮ್‌ನಗರದ ಮೃಗಾಲಯಕ್ಕೆ 1,000 ಮೊಸಳೆಗಳನ್ನು ರವಾನಿಸಿರುವುದು ಕಾನೂನುಬದ್ಧವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಮುನೀಶ್ವರ್ ನಾಥ್ ಭಂಡಾರಿ ಮತ್ತು ನ್ಯಾಯಮೂರ್ತಿ ಎನ್ ಮಾಲಾ ಅವರಿದ್ದ ಪೀಠ ತೀರ್ಪು ನೀಡಿದೆ.
“ವನ್ಯಪ್ರಾಣಿಗಳು ರಾಜ್ಯ ಅಥವಾ ಕೇಂದ್ರ ಸರ್ಕಾರಗಳ, ಯಾವುದೇ ಸಂಸ್ಥೆ ಇಲ್ಲವೇ ವ್ಯಕ್ತಿಗಳ ಆಸ್ತಿಯಲ್ಲ, ಅವು ರಾಷ್ಟ್ರದ ಸಂಪತ್ತು . ಆದ್ದರಿಂದ ಯಾರೂ ಅವುಗಳ ಮಾಲೀಕತ್ವ ಪಡೆಯಲು ಸಾಧ್ಯವಿಲ್ಲ. ರಾಷ್ಟ್ರದ ಪರಿಸರ ಸುರಕ್ಷತೆಗಾಗಿ ಪ್ರಾಣಿ ಮತ್ತು ಸಸ್ಯ ಸಂಕುಲವನ್ನು ಮುಂದಿನ ಪೀಳಿಗೆಗೆ ರಕ್ಷಿಸಬೇಕು. ಪ್ರಾಣಿಗಳ ವಿಚಾರದಲ್ಲಿ ಅವುಗಳ ಕ್ಷೇಮವೇ ಪ್ರಧಾನ ಕಾಳಜಿ ಮತ್ತು ಮಾರ್ಗದರ್ಶಿ ಬೆಳಕಾಗಿರಬೇಕು” ಎಂದು ಪೀಠ ಹೇಳಿದೆ.
ಒಂದು ರಾಷ್ಟ್ರದ ಹಿರಿಮೆ ಮತ್ತು ಅದರ ನೈತಿಕ ಪ್ರಗತಿಯನ್ನು ಅದು ತನ್ನ ಪ್ರಾಣಿಗಳನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದರ ಮುಖೇನ ನಿರ್ಣಯಿಸಬಹುದು ಎಂಬ ಮಹಾತ್ಮ ಗಾಂಧಿಯವರ ಮಾತುಗಳನ್ನು ನ್ಯಾಯಾಲಯ ಉದ್ಗರಿಸಿತು.
ತಮಿಳುನಾಡಿನ ಮದ್ರಾಸ್ ಮೊಸಳೆ ಬ್ಯಾಂಕ್ ಟ್ರಸ್ಟ್‌ನಿಂದ ಗುಜರಾತ್‌ನ ಜಾಮ್‌ನಗರದಲ್ಲಿರುವ ಗ್ರೀನ್ಸ್ ಪ್ರಾಣಿ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರಕ್ಕೆ 1,000 ಮೊಸಳೆಗಳ ರವಾನೆ ಮಾಡುವುದರ ಸಿಂಧುತ್ವ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ಗುಜರಾತ್‌ನಲ್ಲಿರುವ ಮೃಗಾಲಯವು ವನ್ಯಜೀವಿ ಸಂರಕ್ಷಣಾ ಕಾಯಿದೆ- 1972, ಮೃಗಾಲಯದ ನಿಯಮಾವಳಿ- 2009 ಹಾಗೂ ರಾಷ್ಟ್ರೀಯ ಮೃಗಾಲಯ ನೀತಿ- 1998ಕ್ಕೆ ಅನುಗುಣವಾಗಿಲ್ಲ. ಗುಜರಾತ್ ಮೃಗಾಲಯದ ಮಾಲೀಕ ಖಾಸಗಿ ವ್ಯಕ್ತಿಯಾಗಿದ್ದು ಚಿಕ್ಕ ಮೃಗಾಲಯ ನಡೆಸಲು ಅನುಮತಿ ಪಡೆದಿದ್ದದ್ದರೂ ದೊಡ್ಡ ಮೃಗಾಲಯ ನಡೆಸುತ್ತಿದ್ದಾರೆ. ಹೀಗಾಗಿ ಮೊಸಳೆಗಳ ಅಕ್ರಮ ವರ್ಗಾವಣೆಯ ಕುರಿತು ರಾಜ್ಯ ಸಿಐಡಿ ಅಥವಾ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸುವಂತೆ ಪಿಐಎಲ್ ಅರ್ಜಿ ಕೋರಿತ್ತು.
ಮತ್ತೊಂದೆಡೆ ಅಧಿಕಾರಿಗಳು “ಗುಜರಾತ್‌ನಲ್ಲಿ ಮೃಗಾಲಯಕ್ಕೆ ಕಾರ್ಯನಿರ್ವಹಿಸಲು ಅನುಮತಿ ನೀಡುವಾಗ ಎಲ್ಲಾ ನಿಬಂಧನೆಗಳನ್ನು ಅನುಸರಿಸಲಾಗಿದೆ” ಎಂದು ಸ್ಪಷ್ಟಪಡಿಸಿದರು. ಚೆನ್ನೈನ ಪುನರ್ವಸತಿ ಕೇಂದ್ರದ ಸ್ಥಳಾವಕಾಶ ಕಡಿಮೆ ಇತ್ತು. ಪರಿಣಾಮವಾಗಿ 1,000 ಮೊಸಳೆಗಳು ಕೋಣೆಗಳಲ್ಲಿ ಇಕ್ಕಟ್ಟಾಗಿ ಬದುಕಬೇಕಿತ್ತು. ಆದರೆ ಗುಜರಾತ್‌ನ ಮೃಗಾಲಯ ವಿಶಾಲವಾಗಿದೆ ಎಂದು ಅವರು ವಾದಿಸಿದರು.
ಈ ಹಂತದಲ್ಲಿ ನ್ಯಾಯಾಲಯ ಹೆಚ್ಚುವರಿ ಮೊಸಳೆಗಳನ್ನು ನೋಡಿಕೊಳ್ಳಲು ಚೆನ್ನೈನಲ್ಲಿರುವ ಪುನರ್ವಸತಿ ಕೇಂದ್ರಕ್ಕೆ ಹಣವಿಲ್ಲ ಮತ್ತು ಗುಜರಾತ್‌ನ ಮೃಗಾಲಯದಲ್ಲಿರುವ ಮೊಸಳೆಗಳ ಯೋಗಕ್ಷೇಮದ ಭರವಸೆ ನೀಡಿದೆ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿತು.
ವಿವಿಧ ಕಾನೂನುಗಳನ್ನು ಪರಿಶೀಲಿಸಿದ ನ್ಯಾಯಾಲಯ ಕೇಂದ್ರ ಅಥವ ರಾಜ್ಯ ಸರ್ಕಾರಗಳ ಒಡೆತನದ ಹೊರತಾಗಿ ಖಾಸಗಿ ಮೃಗಾಲಯಗಳು ಕೂಡ ಇರಬಹುದು ಎಂದು ಪೀಠ ತೀರ್ಮಾನಿಸಿತು.