ಬಳ್ಳಾರಿ: ರಾಜ್ಯಾದ್ಯಂತ ಬರ ಪರಿಸ್ಥಿತಿ ಆವರಿಸಿದ್ದರೂ, ರಾಜ್ಯದ 27 ಬಿಜೆಪಿ ಸದಸ್ಯರು ಕೇಂದ್ರದಲ್ಲಿ ಚಕಾರ ಎತ್ತಲಿಲ್ಲ. ಜಿಲ್ಲೆಯ, ರಾಜ್ಯದ ಸಮಸ್ಯೆಗಳ ಬಗ್ಗೆ ಕೇಂದ್ರದಲ್ಲಿ ಧ್ವನಿ ಎತ್ತಲು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಮ್ ಅವರನ್ನು ಜನರು ಗೆಲ್ಲಿಸಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮನವಿ ಮಾಡಿದರು.
ನಗರದ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷದ ಮಳೆಯ ಕೊರತೆಯಿಂದ ರಾಜ್ಯಾದ್ಯಂತ ಬರ ಪರಿಸ್ಥಿತಿ ಆವರಿಸಿತು. ರಾಜ್ಯದ 236 ತಾಲೂಕುಗಳ ಪೈಕಿ 224 ತಾಲೂಕುಗಳು ಬರ ಪೀಡಿತವಾಗಿದ್ದವು.ಆದರೆ ಏಳು ತಿಂಗಳಾದರೂ ಕೇಂದ್ರ ಸರ್ಕಾರ ಬರ ಪರಿಹಾರದ ಅನುದಾನ ಬಿಡುಗಡೆ ಮಾಡಲಿಲ್ಲ. ಈ ನಿಟ್ಟಿನಲ್ಲಿ ರಾಜ್ಯದ 25 ಬಿಜೆಪಿ, ಬೆಂಬಲಿತ ಇಬ್ಬವರು ಸೇರಿ 27 ಸಂಸದರು ಕೇಂದ್ರದಲ್ಲಿ ಚಕಾರ ಎತ್ತಲಿಲ್ಲ. ಸಿಎಂ ಸರ್ವ ಪಕ್ಷದ ಸಭೆ ಕರೆದರೂ ಯಾರು ಬರುತ್ತಿರಲಿಲ್ಲ. ಹಾಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಲಾಗಿತ್ತು. ಈ ಹಿನ್ನೆಲೆಯಲ್ಲಿ ಬೇಡಿಕೆಗಿಂತ ಸ್ವಲ್ಪ ಅನುದಾನ 3454 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ತಿಳಿಸಿದರು.
ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿ ಆಗುವ ಮುನ್ನ ಎಲ್ಲ ಪಕ್ಷಗಳು ಒಟ್ಟಾಗಿ ಹೋಗಿ ಪ್ರಧಾನಿಗಳನ್ನು ಭೇಟಿ ಮಾಡುತ್ತಿದ್ದೆವು. ಈಗ ಆ ಕಾಲ ಬದಲಾಗಿದೆ. ಯಾರು ಕೂಡ ಪರಿಹಾರ ಕೇಳಲು ಮುಂದೆ ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ಎಸ್ ಐಟಿ ತನಿಖೆಗೆ ವಹಿಸಲಾಗಿದ್ದು, ತನಿಖೆ ಕೈಗೊಳ್ಳಲಿದೆ. ತನಿಖೆ ಹಂತದಲ್ಲಿ ನಾವು ಹೋಗಬಾರದು. ತನಿಖೆ ಹಂತದಲ್ಲಿ ನಾನು ಮಾತನಾಡುವುದು ಸೂಕ್ತವಲ್ಲ. ಪ್ರಕರಣ ಮೇಲೆ ಪ್ರಭಾವ ಬೀರಲ್ಲ ಎಂದು ತಿಳಿಸಿದರು.
ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಘಟನೆ ನಡೆದರೂ ಕುಮಾರಸ್ಚಾಮಿ, ಮಹಾನಾಯಕ ಅಂತ ನೂರು ಬಾರಿ ಹೇಳ್ತಾರೆ. ಯುಪಿಎ ಸರ್ಕಾರದ ಅವಧಿಯಲ್ಲೂ ಅಣ್ಣಾ ಹಜಾರೆ ಹೋರಾಟ ಮಾಡಿದರು. 2ಜಿ ಹಗರಣ, ಕಲ್ಲಿದ್ದಲು ಹಗರಣ ಅಂತ ಹೇಳಿದರು. ಕೊನೆಗೆ ಏನಾಯಿತು. ಎಲ್ಲವು ಕ್ಲೀನ್ ಚಿಟ್ ಸಿಕ್ಕಿತು. ಆದರೆ, ಸರ್ಕಾರವೇ ಬದಲಾಯಿತು ಎಂದು ತಿಳಿಸಿದರು.
ಕುಕ್ಕೆ ಸುಬ್ರಹ್ಮಣ್ಯಂ ದೇವಸ್ಥಾನಕ್ಕೆ ಎಇಒ ಯೇಸುರಾಜ್ ಕ್ರಿಶ್ಚಿಯನ್ ಅಲ್ಲ. ಪರಿಶಿಷ್ಟ ಜಾತಿಯ ಹಿಂದು. ಏಸುಕ್ರಿಸ್ತು ಜನಿಸಿದ ಡಿಸೆಂಬರ್ 25ರಂದು ಜನಿಸಿದ್ದ ಹಿನ್ನೆಲೆಯಲ್ಲಿ ಅವರ ಪೋಷಕರು ಯೇಸುರಾಜ್ ಎಂದು ಹೆಸರಿಟ್ಟಿದ್ದಾರೆ. ಅದನ್ನೇ ವಿಕೃತ ಮನಸ್ಥಿತಿಯ ಬಿಜೆಪಿವರು, ಹಿಂದೂ, ಮುಸ್ಲಿಂ ಅಂತ ಅಪ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ವಿಕೃತ ಮನೋಭಾವ ಬಿಡಬೇಕು. ಎಲ್ಲ ಜನರು ಒಂದೇ ಅಂತಾ ತಿಳಿದುಕೊಳ್ಳಬೇಕು. ಬಿಜೆಪಿಯವರಿಗೆ ಎಲ್ಲ ಸಮುದಾಯಗಳ ಮತಗಳು ಬೇಕು ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ, ಬುಡಾ ಅಧ್ಯಕ್ಷ ಜೆ.ಎಸ್.ಆಂಜನೇಯಲು, ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ವೆಂಕಟೇಶ್ ಹೆಗಡೆ ಸೇರಿ ಹಲವರು ಇದ್ದರು.