ಬೆಂಗಳೂರು: ಡಿಸೆಂಬರ್ 4 ರಿಂದ 15ರ ವರೆಗೆ 10 ದಿನಗಳ ಕಾಲ ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸಲು ತಿರ್ಮಾನಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಎಚ್ ಕೆ ಪಾಟೀಲ್ ಅವರು, ಬೆಳಗಾವಿಯಲ್ಲಿ ಡಿಸೆಂಬರ್ 4 ರಿಂದ ಡಿಸೆಂಬರ್ 15ರ ವರೆಗೆ 10 ದಿನಗಳ ಕಾಲ ವಿಧಾನ ಮಂಡಲ ಅಧಿವೇಶನ ನಡೆಸಲು ಸಂಪುಟ ಸಭೆ ನಿರ್ಧರಿಸಿದೆ ಎಂದರು.
ಸಚಿವ ಸಂಪುಟ ಸಭೆಯಲ್ಲಿ ಬರಗಾಲದ ಬಗ್ಗೆಯೂ ವಿಸ್ತೃತ ವಾಗಿ ಚರ್ಚೆ ಮಾಡಿದ್ದೇವೆ. ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ ಮಾಡಿದ್ದೇವೆ, ಆದರೆ ಇದುವರೆಗೂ ಕೇಂದ್ರ ಸರ್ಕಾರ ನಯಾ ಪೈಸೆ ಬಿಡುಗಡೆ ಮಾಡಿಲ್ಲ. ಇವತ್ತಿನ ಸಭೆಯಲ್ಲಿ ಕೇಂದ್ರ ಸರ್ಕಾರದ ನಡೆ ವಿರುದ್ಧ ಖಂಡನೆ ವ್ಯಕ್ತ ಪಡಿಸಿದ್ದೇವೆ ಎಂದರು.
ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರ ಗಳಲ್ಲಿ ಬರಗಾಲ ಪರಿಹಾರದ ಕೆಲಸಗಳು ಶುರುವಾಗಬೇಕು. ಈಗಾಗಲೇ 700-800 ಕೋಟಿ ರೂಪಾಯಿ ಜಿಲ್ಲಾಧಿಕಾರಿ ಗಳ ಅಕೌಂಟ್ ನಲ್ಲಿದೆ, ಬರಗಾಲ ನಿರ್ವಹಣೆಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಸಿಎಂ ಸಚಿವರಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಿದರು.
ಕನಕಪುರ ತಾಲೂಕಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು 10.38 ಕೋಟಿ ರೂ. ಬಿಡುಗಡೆ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇನ್ಫೋಸಿಸ್ ಕಂಪನಿ ವತಿಯಿಂದ ಸಿಎಸ್ಆರ್ ಫಂಡ್ ನಿಂದ ಕನಕಪುರದ ತಾಯಿ ಆಸ್ಪತ್ರೆ ನಿರ್ಮಿಸಲಾಗುವುದು ಎಂದು ಎಚ್ ಕೆ ಪಾಟೀಲ್ ತಿಳಿಸಿದರು.
ಇನ್ನೂ ವಾಯುವ್ಯ ಸಾರಿಗೆಯಲ್ಲಿ16.20 ಕೋಟಿ ವೆಚ್ಚದಲ್ಲಿ 45 ಬಸ್ ಗಳ ಖರೀದಿಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಹುಬ್ಬಳ್ಳಿ ಬಿ.ಆರ್.ಟಿಗೆ 45 ಕೋಟಿ ರೂ. ವೆಚ್ಚದಲ್ಲಿ 100 ಬಸ್ ಖರೀದಿಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ ಎಂದರು.